ADVERTISEMENT

ಭಾರತದ ಆಟಗಾರರಿಗೆ ಅವಹೇಳನ :ಪಾಕ್ ಕೋಚ್ ವಿರುದ್ಧ ಕ್ರಮ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 19:30 IST
Last Updated 11 ಸೆಪ್ಟೆಂಬರ್ 2011, 19:30 IST

ಓರ್ಡೊಸ್, ಚೀನಾ (ಪಿಟಿಐ): ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್ ಪಂದ್ಯದ ವೇಳೆ ಕೆಟ್ಟ ಪದಗಳನ್ನು ಬಳಸಿ ಭಾರತದ ಆಟಗಾರರನ್ನು ಹೀಯಾಳಿಸುತ್ತಿದ್ದ ಪಾಕಿಸ್ತಾನ ತಂಡದ ಮುಖ್ಯ ಕೋಚ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಪಾಕ್ ಕೋಚ್ ಹಾಲೆಂಡ್‌ನ ಮಿಶೆಲ್ ಹೆನ್ರಿಕ್ಸ್ ಮರಿಯಾ ಕ್ರೀಡಾಂಗಣದ ಬದಿಯಲ್ಲಿ ನಿಂತು ಪಂದ್ಯದುದ್ದಕ್ಕೂ ಭಾರತದ ಆಟಗಾರರನ್ನು ಗುರಿಯಾಗಿಸಿ ಮಾತಿನ ದಾಳಿ ನಡೆಸುತ್ತಿದ್ದರು. ಭಾರತದ ಆಟಗಾರರು ಪಾಕ್ ತಂಡದವರನ್ನು ಫೌಲ್ ಮಾಡಿದರೆ ಅವರು ದೊಡ್ಡ ಸ್ವರದಲ್ಲಿ ಕಿರುಚಾಡುತ್ತಿದ್ದರು.

ಮೊದಲ ಅವಧಿಯಲ್ಲಿ ಎಸ್.ವಿ. ಸುನಿಲ್ ಹಾಗೂ ಎರಡನೇ ಅವಧಿಯಲ್ಲಿ ವಿ. ರಘುನಾಥ್ ವಿರುದ್ಧ ಅವರು ಹರಿಹಾಯ್ದಿದ್ದರು. ರಘುನಾಥ್ ಮತ್ತು ಪಾಕ್ ಆಟಗಾರ ಒರಟಾಟ ಪ್ರದರ್ಶಿಸಿದಾಗ ನ್ಯೂಜಿಲೆಂಡ್‌ನ ಅಂಪೈರ್ ಸಿಮೊನ್ ಟೇಲರ್ ಇಬ್ಬರಿಗೂ ಎಚ್ಚರಿಕೆ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರು. ಆದರೆ ಇಷ್ಟಕ್ಕೆ ತೃಪ್ತರಾಗದ ಪಾಕ್ ಕೋಚ್ ರಘುನಾಥ್ ಅವರನ್ನು ಹೀಯಾಳಿಸಿದ್ದಾರೆ.

ಅಂಪೈರ್‌ಗಳು ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲೂ ಹೆನ್ರಿಕ್ಸ್ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದರು. ಭಾರತ ತಂಡದ ವಿರುದ್ಧ ನಿರ್ಧಾರ ಕೈಗೊಂಡರೆ ಜೋರಾಗಿ `ಥ್ಯಾಂಕ್ ಯೂ~ ಎನ್ನುತ್ತಿದ್ದರು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಟೂರ್ನಿಯ ನಿರ್ದೇಶಕ ಬ್ರಯನ್ ಫೆರ್ನಾಂಡಿಸ್ ಹೇಳಿದ್ದಾರೆ. ತಾಂತ್ರಿಕ ಅಧಿಕಾರಿಗಳು ಕೋಚ್ ವಿರುದ್ಧ ವರದಿ ನೀಡುವರೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದಾಗಿ ನುಡಿದರು.

`ಕ್ರೀಡಾಂಗಣದ ವಿಡಿಯೊ ಟವರ್‌ನಲ್ಲಿ ನಿಂತು ಆಟಗಾರರಿಗೆ ಸೂಚನೆ ನೀಡಿದ್ದಕ್ಕೆ ಅವರಿಗೆ ಈ ಹಿಂದೆ ಒಮ್ಮೆ ಎಚ್ಚರಿಕೆ ನೀಡಲಾಗಿತ್ತು. ಅವರ ವಿರುದ್ಧ ಮತ್ತೆ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳುವೆವು~ ಎಂದು ಬ್ರಯನ್ ತಿಳಿಸಿದ್ದಾರೆ. `ಘಟನೆಯ ಕುರಿತು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ಗೆ ಖಂಡಿತವಾಗಿಯೂ ವರದಿ ಸಲ್ಲಿಸುವೆ~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.