ADVERTISEMENT

ಭಾರತದ ಗೆಲುವಿಗೆ ಸವಾಲಿನ ಮೊತ್ತ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 20:35 IST
Last Updated 21 ಜನವರಿ 2011, 20:35 IST

ಪೋರ್ಟ್ ಏಲಿಜಬೆತ್: ಕುಗ್ಗುವುದಿಲ್ಲ, ಬ್ಯಾಟಿಂಗ್ ಬಲವನ್ನು ಹಿಗ್ಗಿಸಿ ತೋರಿಸುತ್ತೇವೆ ಎನ್ನುವ ಛಲದೊಂದಿಗೆ ಹೋರಾಡಿದ ದಕ್ಷಿಣ ಆಫ್ರಿಕಾ ತಂಡದವರು ಭಾರತದ ಮುಂದೆ ಸವಾಲಿನ ಮೊತ್ತವನ್ನು ಪೇರಿಸಿಡುವಲ್ಲಿ ಯಶಸ್ವಿಯಾದರು.

ಸೇಂಟ್ ಜಾರ್ಜ್ ಪಾರ್ಕ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತದವರು ಆತಿಥೇಯ ಪಡೆಯನ್ನು ಇನ್ನೂರರ ಗಡಿಯೊಳಗೆ ತಡೆಯುತ್ತಾರೆನ್ನುವ ನಿರೀಕ್ಷೆ ಹುಸಿಯಾಯಿತು. ಫಾಫ್ ಡು ಪ್ಲೆಸ್ಸಿಸ್ ರೂಪದಲ್ಲಿ ಐದನೇ ವಿಕೆಟ್ ಪತನಗೊಂಡಾಗ ಇನ್ನೇನು ಗ್ರೇಮ್ ಸ್ಮಿತ್ ಬಳಗದವರು ಹೆಚ್ಚು ದೂರ ಕ್ರಮಿಸುವುದಿಲ್ಲ ಎನಿಸಿತ್ತು. ಆದರೆ ಔಟಾಗದೇ ಉಳಿದ ಜೆನ್ ಪಾಲ್ ಡುಮಿನಿ (71; 124 ನಿ., 72 ಎ., 2 ಬೌಂಡರಿ, 1 ಸಿಕ್ಸರ್) ಹಾಗೂ ಜಾನ್ ಬೊಥಾ (44; 59 ನಿ., 59 ಎ., 3 ಬೌಂಡರಿ) ಅವರು ‘ಮಹಿ’ ಪಡೆಯ ಲೆಕ್ಕಾಚಾರ ತಪ್ಪಿಸಿದರು.

ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ಡುಮಿನಿ ತಮ್ಮ ತಂಡವು ಇನ್ನೂರರ ಗಡಿಯನ್ನು ದಾಡಿ ವಿಶ್ವಾಸದಿಂದ ಬೀಗುವಂತೆ ಮಾಡಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡ ನಾಯಕ ಸ್ಮಿತ್ ತಪ್ಪು ಮಾಡಿದರು ಎನ್ನುವ ಅನುಮಾನ ಕಾಡದಂತೆ ಆಡಿದ ಹಾಶೀಮ್ ಆಮ್ಲಾ (64; 93 ನಿ., 69 ಎ., 8 ಬೌಂಡರಿ) ಅವರಂತೂ ದಕ್ಷಿಣ ಆಫ್ರಿಕಾ ಇನಿಂಗ್ಸ್‌ಗೆ ಆರಂಭದಲ್ಲಿಯೇ ಆತಂಕದ ಕಾರ್ಮೋಡ ಆವರಿಸದಂತೆ ಮಾಡಿದರು.

ADVERTISEMENT

ಪಿಚ್ ಗುಣವನ್ನು ಸ್ಪಷ್ಟವಾಗಿ ಅರಿತು ಎದುರಾಳಿಗಳಿಗೆ ಗುರಿಯನ್ನು ಬೆನ್ನಟ್ಟುವ ಹೊರೆಯನ್ನು ನೀಡಿದ ದಕ್ಷಿಣ ಆಫ್ರಿಕಾದವರು ತಮ್ಮ ಪಾಲಿನ ಐವತ್ತು ಓವರುಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು ಪೇರಿಸಿದ್ದು 265 ರನ್. ಮೂರನೇ ಏಕದಿನ ಪಂದ್ಯದಲ್ಲಿನಂತೆ ಬೌಲಿಂಗ್‌ನಲ್ಲಿ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಿ ದಾಳಿ ನಡೆಸುವ ಛಲವನ್ನು ತೋರಿದ ಸ್ಮಿತ್ ನೇತೃತ್ವದ ತಂಡವು ಒತ್ತಡವನ್ನು ನೀಗಿಸಿಕೊಂಡಿತು.

ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡವು ಗೆಲುವಿನ ದಡ ಸೇರುವುದು ಕಷ್ಟ ಎನಿಸುವಷ್ಟು ರನ್ ಗಳಿಸಿದ್ದರಿಂದ ದಕ್ಷಿಣ ಆಫ್ರಿಕಾದ ಬೌಲರ್‌ಗಳ ಚಡಪಡಿಕೆಯೂ ಕಡಿಮೆ ಆಯಿತು. ಪ್ರವಾಸಿ ಬೌಲರ್‌ಗಳೇ ಬಿಗುವಿನಿಂದ ದಾಳಿ ನಡೆಸಿದ ಅಂಗಳದಲ್ಲಿ ತಮಗೂ ಪ್ರಶಸ್ತವಾದ ಅವಕಾಶವಿದೆ ಎಂದುಕೊಂಡ ದಕ್ಷಿಣ ಆಫ್ರಿಕಾ ವೇಗಿಗಳ ಮೊಗದಲ್ಲಿ ಮಂದಹಾಸ ನಲಿಯಿತು.

ಆತಿಥೇಯರು ದೊಡ್ಡ ಮೊತ್ತದ ಕನಸಿನೊಂದಿಗೆ ಕ್ರೀಸ್‌ಗೆ ಇಳಿದಿದ್ದರೂ, ಮುನ್ನೂರರ ಆಸುಪಾಸಿನಲ್ಲಿ ನಿಲ್ಲುವುದು ಸಾಧ್ಯವಾಗಲಿಲ್ಲ. ಈ ಅಂಗಳದಲ್ಲಿ ಅಷ್ಟೊಂದು ರನ್ ಪೇರಿಸುವುದು ಸುಲಭವೂ ಆಗಿರಲಿಲ್ಲ. ಆದರೂ ಎದುರಾಳಿಗಳಿಗೆ ಸವಾಲಾಗಿ ಕಾಣುವಷ್ಟು ಬೆಳೆದು ನಿಂತರು. ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳಿಗೆ ಈ ಪಂದ್ಯದಲ್ಲಿ ತೊಡಕಾಗಿದ್ದು ಸಾಂದರ್ಭಿಕ ಬೌಲರ್ ಯುವರಾಜ್ ಸಿಂಗ್ ಎನ್ನುವುದು ವಿಶೇಷ.

ಪಂದ್ಯಕ್ಕೆ ಮಳೆ ಅಡ್ಡಿ
ಗೆಲುವಿಗೆ 266 ರನ್‌ಗಳ ಗುರಿ ಬೆನ್ನಟ್ಟಿರುವ ಭಾರತ ತಂಡ 31.3 ಓವರ್‌ಗಳಲ್ಲಿ 6 ವಿಕೆಟ್‌ಗೆ 137 ರನ್ ಗಳಿಸಿದ್ದ ಸಂದರ್ಭ ಮಳೆ ಸುರಿದ ಕಾರಣ ಪಂದ್ಯಕ್ಕೆ ಅಡ್ಡಿ ಉಂಟಾಯಿತು. ಮತ್ತೆ ಪಂದ್ಯ ಆರಂಭವಾದಾಗ ಭಾರತಕ್ಕೆ ಡಕ್ವರ್ಥ್ ಲೂಯಿಸ್ ನಿಯಮದಂತೆ 46 ಓವರ್‌ಗಳಲ್ಲಿ 260 ರನ್ ಗಳಿಸುವ ಪರಿಷ್ಕೃತ ಗುರಿ ನೀಡಲಾಯಿತು.

ರೋಹಿತ್ ಶರ್ಮ (1), ಪಾರ್ಥಿವ್ ಪಟೇಲ್ (11), ಯುವರಾಜ್ ಸಿಂಗ್ (12), ಸುರೇಶ್ ರೈನಾ (20), ಮಹೇಂದ್ರ ಸಿಂಗ್ ದೋನಿ (2) ಮತ್ತು ಯೂಸುಫ್ ಪಠಾಣ್ (2) ಅವರು ಔಟಾದ ಬ್ಯಾಟ್ಸ್‌ಮನ್‌ಗಳು. ವಿರಾಟ್ ಕೊಹ್ಲಿ (83) ಹಾಗೂ ಹರಭಜನ್ ಸಿಂಗ್ (2) ಕ್ರೀಸ್‌ನಲ್ಲಿದ್ದರು.

ಸ್ಕೋರ್ ವಿವರ
ದಕ್ಷಿಣ ಆಫ್ರಿಕಾ: 50 ಓವರುಗಳಲ್ಲಿ
7 ವಿಕೆಟ್‌ಗಳ ನಷ್ಟಕ್ಕೆ 265
ಹಾಶೀಮ್ ಆಮ್ಲಾ ರನ್‌ಔಟ್ (ವಿರಾಟ್ ಕೊಹ್ಲಿ/ಮಹೇಂದ್ರ ಸಿಂಗ್ ದೋನಿ)  64
ಗ್ರೇಮ್ ಸ್ಮಿತ್ ಸಿ ಹರಭಜನ್ ಸಿಂಗ್ ಬಿ ಆಶಿಶ್ ನೆಹ್ರಾ 18
ಮಾರ್ನ್ ವಾನ್ ವಿಕ್ ಸಿ ವಿರಾಟ್ ಕೊಹ್ಲಿ ಬಿ ಯುವರಾಜ್ ಸಿಂಗ್  15
ಅಬ್ರಹಾಮ್ ಡಿ ವೀಲಿಯರ್ಸ್ ಸಿ ಮಹೇಂದ್ರ ಸಿಂಗ್ ದೋನಿ ಬಿ ಯುವರಾಜ್ ಸಿಂಗ್  03
ಜೆನ್ ಪಾಲ್ ಡುಮಿನಿ ಔಟಾಗದೆ  71
ಫಾಫ್ ಡು ಪ್ಲೆಸ್ಸಿಸ್ ರನ್‌ಔಟ್ (ವಿರಾಟ್ ಕೊಹ್ಲಿ/ಮಹೇಂದ್ರ ಸಿಂಗ್ ದೋನಿ)  01
ಜಾನ್ ಬೊಥಾ ಸ್ಟಂಪ್ಡ್ ಮಹೇಂದ್ರ ಸಿಂಗ್ ದೋನಿ ಬಿ ಯುವರಾಜ್ ಸಿಂಗ್  44
ರಾಬಿನ್ ಪೀಟರ್ಸನ್ ರನ್‌ಔಟ್ (ಯೂಸುಫ್ ಪಠಾಣ್/ಹರಭಜನ್ ಸಿಂಗ್)  31
ಡೆಲ್ ಸ್ಟೇನ್ ಔಟಾಗದೆ  04

ಇತರೆ: (ಬೈ-1, ಲೆಗ್‌ಬೈ-1, ವೈಡ್-10, ನೋಬಾಲ್-2)  14
ವಿಕೆಟ್ ಪತನ: 1-57 (ಗ್ರೇಮ್ ಸ್ಮಿತ್; 11.1), 2-106 (ಮಾರ್ನ್ ವಾನ್ ವಿಕ್; 19.2), 3-111 (ಹಾಶೀಮ್ ಆಮ್ಲಾ; 20.3), 4-115 (ಅಬ್ರಹಾಮ್ ಡಿ ವೀಲಿಯರ್ಸ್; 21.2), 5-118 (ಫಾಫ್ ಡು ಪ್ಲೆಸ್ಸಿಸ್; 22.5), 6-188 (ಜಾನ್ ಬೊಥಾ; 37.2), 7-242 (ರಾಬಿನ್ ಪೀಟರ್ಸನ್; 47.2).

ಬೌಲಿಂಗ್: ಜಹೀರ್ ಖಾನ್ 9-1-55-0, ಮುನಾಫ್ ಪಟೇಲ್ 8-1-49-0 (ನೋಬಾಲ್-2), ಆಶಿಶ್ ನೆಹ್ರಾ 6-0-27-1 (ವೈಡ್-2), ಹರಭಜನ್ ಸಿಂಗ್ 10-0-61-0 (ವೈಡ್-4), ಯುವರಾಜ್ ಸಿಂಗ್ 8-0-34-3, ರೋಹಿತ್ ಶರ್ಮ 2-0-6-0, ಸುರೇಶ್ ರೈನಾ 3-0-13-0, ಯೂಸುಫ್ ಪಠಾಣ್ 4-0-18-0   (ವಿವರ ಅಪೂರ್ಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.