ADVERTISEMENT

ಭಾರತದ ಬೆವರಿಳಿಸುವುದು ನಮ್ಮ ಗುರಿ: ಸ್ಟ್ರಾಸ್

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 17:25 IST
Last Updated 26 ಫೆಬ್ರುವರಿ 2011, 17:25 IST

ಬೆಂಗಳೂರು: “ಭಾರತ ವಿರುದ್ಧ ಭಾನುವಾರ ನಾವು ಚೆನ್ನಾಗಿ ಆಡಲೇಬೇಕು, ಆಡುತ್ತೇವೆ. ಭಾರತ ಉತ್ತಮ ತಂಡವಾದರೂ ನಮ್ಮ ಬೌಲಿಂಗ್ ಮತ್ತು ಫೀಲ್ಡಿಂಗ್ ಉತ್ತಮವಾಗಿರುವುದರಿಂದ ಅದು ನಮಗೆ ಅನುಕೂಲಕರ” ಎಂದು ಇಂಗ್ಲೆಂಡ್ ತಂಡದ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಹೇಳಿದರು.

ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡದ ಅಭ್ಯಾಸಕ್ಕೆ ಮೊದಲು ಪತ್ರಿಕಾಗೋಷ್ಠಿ ನಡೆಸಿದ ಅವರು, “ಶುಕ್ರವಾರ ಮಳೆ ಬಂದಿದೆ. ವಾತಾವರಣದಲ್ಲಿ ತೇವಾಂಶ ಇರುವುದರಿಂದ, ನಾವು ನಾಳೆ ಪಿಚ್ ಪರಿಶೀಲಿಸಿಯೇ ಇಬ್ಬರು ಸ್ಪಿನ್ನರುಗಳನ್ನು ಆಡಿಸುವ ಬಗ್ಗೆ ಯೋಚನೆ ಮಾಡುತ್ತೇವೆ. ಪಿಚ್ ಸ್ಪಿನ್ನರುಗಳಿಗೆ ನೆರವಾಗುವುದೆಂದು ಎಲ್ಲರೂ ಹೇಳುತ್ತಾರೆ. ನಮ್ಮ ತಂಡದಲ್ಲೂ ಉತ್ತಮ ಸ್ಪಿನ್ನರುಗಳಿದ್ದಾರೆ. ಭಾರತ ಬೆವರು ಹರಿಸುವಂತೆ ಮಾಡುವುದಂತೂ ಖಂಡಿತ” ಎಂದು ಅವರು ನುಡಿದರು.

“ವಿಶ್ವ ಕಪ್‌ನಲ್ಲಿ ಅಂಪೈರ್ ನಿರ್ಣಯ ಮರುಪರಿಶೀಲನೆ ವ್ಯವಸ್ಥೆ ಜಾರಿಗೆ ಬಂದದ್ದು ತಪ್ಪೇನೂ ಅಲ್ಲ. ಅಂಪೈರ್ ತಪ್ಪು ಮಾಡಿದ ಅನುಮಾನ ಬಂದರೆ ಅದನ್ನು ಮರುಪರಿಶೀಲಿಸಲು ತಾಂತ್ರಿಕ ನೆರವು ಪಡೆಯುವುದು ಒಳ್ಳೆಯದೇ. ಅದರಿಂದ ಆಟಕ್ಕೆ ಅನುಕೂಲ” ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.