ADVERTISEMENT

ಭಾರತ–ಪಾಕಿಸ್ತಾನ ಹಣಾಹಣಿ: ಟಾಸ್‌ ಗೆದ್ದ ಮಿಥಾಲಿ ಪಡೆ ಬ್ಯಾಟಿಂಗ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2017, 9:36 IST
Last Updated 2 ಜುಲೈ 2017, 9:36 IST
ಭಾರತ–ಪಾಕಿಸ್ತಾನ ಹಣಾಹಣಿ: ಟಾಸ್‌ ಗೆದ್ದ ಮಿಥಾಲಿ ಪಡೆ ಬ್ಯಾಟಿಂಗ್‌ ಆಯ್ಕೆ
ಭಾರತ–ಪಾಕಿಸ್ತಾನ ಹಣಾಹಣಿ: ಟಾಸ್‌ ಗೆದ್ದ ಮಿಥಾಲಿ ಪಡೆ ಬ್ಯಾಟಿಂಗ್‌ ಆಯ್ಕೆ   

ಡರ್ಬಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ–ಪಾಕಿಸ್ತಾನ ನಡುವಿನ ಮಹಿಳಾ ವಿಶ್ವಕಪ್‌ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಭಾರತ ಕ್ರಿಕೆಟ್‌ ತಂಡ ಬ್ಯಾಟಿಂಗ್‌ ಆಯ್ದಕೊಂಡಿದೆ.

ತಾನಾಡಿದ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ಆತಿಥೇಯ ಇಂಗ್ಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ ತಂಡಗಳನ್ನು ಮಣಿಸಿ ಆತ್ಮವಿಶ್ವಾಸದಲ್ಲಿರುವ ಮಿಥಾಲಿ ರಾಜ್‌ ನಾಯಕತ್ವದ ಭಾರತ ತಂಡ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಶತಕದ ಜತೆಯಾಟವಾಡಿದ್ದ ಸ್ಮೃತಿ ಮಂದಾನ ಹಾಗೂ ಪೂನಂ ರಾವುತ್‌ ಭಾರತ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡುವ ವಿಶ್ವಾಸದಲ್ಲಿದ್ದಾರೆ. ಜತೆಗೆ ಮಧ್ಯಮ ಕ್ರಮಾಂಕದಲ್ಲಿ ತಂಡದ ಮೊತ್ತ ಹೆಚ್ಚಿಸಲು ಮಿಥಾಲಿ, ಹರ್ಮನ್‌ಪ್ರೀತ್‌ ಕೌರ್‌, ದೀಪ್ತಿ ಶರ್ಮಾ, ಶಿಖಾ ಪಾಂಡೆ ಮತ್ತು ಮೋನಾ ಮೆಷ್ರಮ್‌ ಅವರ ಆಟ ನೆರವಾಗಲಿದೆ.

ADVERTISEMENT

ಬೌಲಿಂಗ್‌ನಲ್ಲೂ ತಂಡ ಪ್ರಬಲವಾಗಿರುವ ಮಿಥಾಲಿ ಪಡೆಯಲ್ಲಿ ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ, ಪೂನಂ ಯಾದವ್‌ ಮತ್ತು ಹರ್ಮನ್‌ ಪ್ರೀತ್‌ ಅವರು ಮಿಂಚುವ ನಿರೀಕ್ಷೆಯಿದೆ. ಆದರೆ ವೇಗಿ ಜೂಲನ್‌ ಗೋಸ್ವಾಮಿ ವಿಕೆಟ್‌ ಪಡೆಯಲು ವಿಫಲವಾಗುತ್ತಿರುವುದು ನಾಯಕಿಗೆ ತಲೆ ನೋವಾಗಿ ಪರಿಣಮಿಸಿದೆ.

ಉಳಿದಂತೆ ಕಳೆದೆರಡೂ ಪಂದ್ಯಗಳಲ್ಲಿ ಸೋಲು ಕಂಡಿರುವ ಪಾಕಿಸ್ತಾನ, ಭಾರತ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿಯುತ್ತಿದೆ. ಸನಾ ಮಿರ್ ಬಳಗ ಸೆಮಿಫೈನಲ್‌ ಆಸೆ ಜೀವಂತ ಇರಿಸಿಕೊಳ್ಳಬೇಕಾದರೆ ಮುಂದಿನ ಎಲ್ಲಾ ಪಂದ್ಯಗಳಲ್ಲಿ ಗೆಲ್ಲಲೇಬೇಕು.

ಈ ತಂಡ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್‌ ಗಳಿಂದ ಹಾಗೂ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು 107 ರನ್‌ಗಳಿಂದ ಸೋಲು ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.