ADVERTISEMENT

ಭಾರತ-ಇಂಗ್ಲೆಂಡ್ ಪಂದ್ಯಕ್ಕೆ ಮಳೆಯ ಭೀತಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 18:00 IST
Last Updated 25 ಫೆಬ್ರುವರಿ 2011, 18:00 IST

ಬೆಂಗಳೂರು: ಕಷ್ಟಪಟ್ಟು ಟಿಕೆಟ್ ಕೊಂಡು ಭಾರತ-ಇಂಗ್ಲೆಂಡ್ ತಂಡಗಳ ನಡುವಣ ಕ್ರಿಕೆಟ್ ಪಂದ್ಯ ನೋಡಲು ಕಾತರದಿಂದ ಕಾಯ್ದಿರುವ ಕ್ರಿಕೆಟ್ ಪ್ರೇಮಿಗಳಿಗೆ ಆತಂಕ ಕಾಡತೊಡಗಿದೆ. ಮಳೆ ಬಂದರೆ...? ಎಂದು ಚಿಂತೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

ಕಳೆದ ಮೂರು ದಿನಗಳಿಂದ ಉದ್ಯಾನನಗರಿಯಲ್ಲಿ ಸಂಜೆಯ ಹೊತ್ತಿಗೆ ಭಾರಿ ಮಳೆ ಸುರಿಯುತ್ತಿದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ವಿಶ್ವಕಪ್ ಕ್ರಿಕೆಟ್‌ನ ‘ಬಿ’ ಗುಂಪಿನ ಲೀಗ್ ಪಂದ್ಯದ ಹೊತ್ತಿಗೂ ವರುಣನ ಆರ್ಭಟ ಸಾಧ್ಯವಾಗುತ್ತದೆನ್ನುವ ಅನುಮಾನ ಕಾಡುತ್ತಿದೆ.

ಶುಕ್ರವಾರ ನಗರದಲ್ಲಿ ಎರಡು ಸೆ.ಮೀ. ಮಳೆಯಾಗಿದ್ದು, ಬರುವ ಎರಡು ದಿನಗಳೂ ಸಹ ಗುಡುಗು ಸಹಿತ ಮಳೆಯಾಗುವ ಸಂಭವ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಶುಕ್ರವಾರ ರಾತ್ರಿ 8.30ಕ್ಕೆ ಇಲಾಖೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಮುನ್ಸೂಚನೆಯಲ್ಲಿ ಈ ಕುರಿತು ಹೇಳಲಾಗಿದ್ದು, ಶನಿವಾರ ಹಾಗೂ ಭಾನುವಾರ ನಗರದಲ್ಲಿ ಮಳೆ ಬೀಳಲಿದೆ ಎಂದು ಹೇಳಿದೆ. 

ಆದ್ದರಿಂದ ಭಾನುವಾರ ನಡೆಯುವ ಪಂದ್ಯಕ್ಕೆ ಮಳೆಯು ಅಡ್ಡಯಾಗುತ್ತದೆ ಎನ್ನುವ ಭಯವು ಪಂದ್ಯ ನಡೆಸುವ ಹೊಣೆಯನ್ನು ಹೊತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯನ್ನು ಕಾಡುತ್ತಿದೆ. ಪಿಚ್ ಅನ್ನು ರಕ್ಷಿಸಿ ಇಡುವುದೇ ಸವಾಲಿನ ಕೆಲಸವಾಗಿದೆ. ಮಳೆಯಿಂದಾಗಿ ಪಿಚ್ ಹೊರ ಆವರಣದಲ್ಲಿ ಭಾರಿ ನೀರು ನಿಂತುಕೊಂಡಿದೆ.

ಆಟಗಾರರ ತಾಲೀಮು ಕೂಡ ಸುಗಮವಾಗಲಿಲ್ಲ. ಹಗಲು-ರಾತ್ರಿಯ ಪಂದ್ಯಕ್ಕಾಗಿ ಸಂಜೆಯ ಹೊತ್ತಿನಲ್ಲಿಯೇ ಅಭ್ಯಾಸ ಮಾಡುವ ಆಸಕ್ತಿ ತಂಡಗಳಿಗೆ ಇದ್ದರೂ ಅದಕ್ಕೆ ತಕ್ಕ ವಾತಾವರಣವಂತೂ ಇಲ್ಲವಾಗಿದೆ.

 ಈ ಹಿಂದೆ ಕೂಡ ಒಮ್ಮೆ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಹಣಾಹಣಿಗೆ ಮಳೆ ಕಾಡಿತ್ತು. ಕೊನೆಯ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡವನ್ನು ದೋನಿ ನೇತೃತ್ವದಲ್ಲಿಯೇ ಎದುರಿಸಿದ್ದಾಗ ವರುಣ ದೇವ ಅಬ್ಬರಿಸಿದ್ದ. ಈಗಲೂ ಅಂಥದೇ ಪರಿಸ್ಥಿತಿ ಇದೆ. ಆದ್ದರಿಂದ ಭಾರಿ ಬೆಲೆಗೆ ಟಿಕೆಟ್ ಕೊಂಡವರು ‘ಮಳೆ ಬಂದರೆ ಏನು ಕಥೆ...?’ ಎಂದು ವ್ಯಥೆಯಲ್ಲಿದ್ದಾರೆ.

ಕೋಲ್ಕತ್ತದಿಂದ ವರ್ಗವಾಗಿ ಬಂದಿರುವ ದೊಡ್ಡದೊಂದು ಪಂದ್ಯವನ್ನು ನೋಡುವ ಅವಕಾಶ ಕೈತಪ್ಪಿದರೆ, ಬಾಕಿ ಲೀಗ್ ಪಂದ್ಯಗಳ ಬಗ್ಗೆ ಇಲ್ಲಿನ ಕ್ರಿಕೆಟ್ ಪ್ರೇಮಿಗಳು ಅಷ್ಟೊಂದು ಆಸಕ್ತಿ ತೋರುವ ಸಾಧ್ಯತೆಯಂತೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.