ADVERTISEMENT

ಭಾರತ ಏಷ್ಯನ್ ಚಾಂಪಿಯನ್ಸ್

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 19:30 IST
Last Updated 11 ಸೆಪ್ಟೆಂಬರ್ 2011, 19:30 IST

ಓರ್ಡೊಸ್, ಚೀನಾ (ಪಿಟಿಐ): ಪೆನಾಲ್ಟಿ ಶೂಟೌಟ್‌ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿದ ಭಾರತ ಚೊಚ್ಚಲ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಕಿರೀಟ ಮುಡಿಗೇರಿಸಿಕೊಂಡಿತು. ಈ ಮೂಲಕ ಲಂಡನ್ ಒಲಿಂಪಿಕ್ ಕ್ರೀಡೆಗಳಿಗೆ ಅರ್ಹತೆ ಪಡೆಯುವ ಕನಸಿಗೆ ಹೆಚ್ಚಿನ ಬಲ ದೊರೆತಿದೆ.

ಭಾನುವಾರ ನಡೆದ ಫೈನಲ್‌ನಲ್ಲಿ ರಾಜ್ಪಾಲ್ ಸಿಂಗ್ ಬಳಗದವರು 4-2 ರಲ್ಲಿ ಸಾಂಪ್ರದಾಯಿಕ ಎದುರಾಳಿಗಳನ್ನು ಮಣಿಸಿ ದೇಶದ ಹಾಕಿ ಪ್ರಿಯರ ಸಂಭ್ರಮಕ್ಕೆ ಕಾರಣರಾದರು. ಕಳೆದ ಕೆಲ ಸಮಯಗಳಿಂದ ವಿವಾದ ಹಾಗೂ ಕೆಟ್ಟ ಕಾರಣಗಳಿಂದಲೇ ಸುದ್ದಿಯಾಗಿದ್ದ `ರಾಷ್ಟ್ರೀಯ ಕ್ರೀಡೆ~ ಕೊನೆಗೂ ಸಂತಸದ ಸುದ್ದಿ ಪಡೆದಿದೆ.

 

ಭಾರತ -4 ಪಾಕ್-2

- ಪೆನಾಲ್ಟಿ ಶೂಟೌಟ್‌ನಲ್ಲಿ ಒಲಿದ ಜಯ
- ಲಂಡನ್ ಒಲಿಂಪಿಕ್ ಕನಸಿಗೆ ಬಲ
- ಗೋಲ್ ಕೀಪರ್ ಶ್ರೀಜೇಶ್ ಗೆಲುವಿನ ರೂವಾರಿ
- ನೂತನ ಕೋಚ್ ಮೈಕಲ್ ನಾಬ್ಸ್‌ಗೆ ಮೊದಲ ಟೂರ್ನಿಯಲ್ಲೇ ಯಶಸ್ಸು
 

ADVERTISEMENT

ಜಿದ್ದಾಜಿದ್ದಿನ ಹೋರಾಟ ಕಂಡ ಫೈನಲ್ ಪಂದ್ಯದ ನಿಗದಿತ ಹಾಗೂ ಹೆಚ್ಚುವರಿ ಅವಧಿಯಲ್ಲಿ ಯಾವುದೇ ಗೋಲುಗಳು ದಾಖಲಾಗಲಿಲ್ಲ. ಇದರಿಂದ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್‌ನ ಮೊರೆ ಹೋಗಲಾಯಿತು. ಭಾರತದ ರಾಜ್ಪಾಲ್ ಸಿಂಗ್, ದಾನಿಶ್ ಮುಜ್ತಬಾ, ಯುವರಾಜ್ ವಾಲ್ಮೀಕಿ ಮತ್ತು ಸರ್ವಂಜಿತ್ ಸಿಂಗ್ ಪೆನಾಲ್ಟಿ ಶೂಟೌಟ್‌ನಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಪಾಕಿಸ್ತಾನದ ಹಸೀಮ್ ಅಬ್ದುಲ್ ಖಾನ್ ಮತ್ತು ಶಫ್ಕತ್ ರಸೂಲ್ ಅವರ ಹೊಡೆತವನ್ನು ತಡೆದ ಗೋಲ್‌ಕೀಪರ್ ಶ್ರೀಜೇಶ್ ಭಾರತದ ಗೆಲುವಿನ ರೂವಾರಿ ಎನಿಸಿದರು. ಮಹಮ್ಮದ್ ರಿಜ್ವಾನ್ ಮತ್ತು ವಸೀಮ್ ಅಹ್ಮದ್ ಮಾತ್ರ ಪಾಕ್ ಪರ ಯಶ ಕಂಡರು. ಭಾರತದ ಪರ ಪೆನಾಲ್ಟಿ ಶೂಟೌ     ಟ್‌ಗೆ ಚಾಲನೆ ನೀಡಿದ ಗುರ್ವಿಂದರ್ ಸಿಂಗ್ ಚಾಂಡಿ ಹೊಡೆತವನ್ನು ಪಾಕ್ ಗೋಲಿ ಇಮ್ರಾನ್ ಶಾ ತಡೆದಿದ್ದರು. 
 
ಆ ಬಳಿಕ ವಿಜೇತ ತಂಡ ನಾಲ್ಕೂ ಅವಕಾಶಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿತು. ಪಾಕ್ ತಂಡದ ಕೋಚ್ ಪಂದ್ಯದ ವೇಳೆ ಭಾರತದ ಆಟಗಾರರನ್ನು ಅಸಭ್ಯ ಪದಗಳನ್ನು ಬಳಸಿ ಹೀಯಾಳಿಸುತ್ತಿದ್ದದ್ದು ಕಂಡುಬಂತು. ಇದು ರಾಜ್ಪಾಲ್ ಬಳಗದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಅದ್ಭುತ ಆಟದ ಮೂಲಕವೇ ಪಾಕ್ ಕೋಚ್‌ಗೆ ಪ್ರತ್ಯುತ್ತರ ನೀಡಿದರು. 

 ಭಾರತ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿತ್ತು. ಉಭಯ ತಂಡಗಳ ನಡುವಿನ ಲೀಗ್ ಪಂದ್ಯ 2-2 ರಲ್ಲಿ ಡ್ರಾದಲ್ಲಿ ಕೊನೆಗೊಂಡಿತ್ತು. ಆದರೆ ಫೈನಲ್‌ನಲ್ಲಿ ರಾಜ್ಪಾಲ್ ಪಡೆ ಸೊಗಸಾದ ಪ್ರದರ್ಶನ ನೀಡಿತು. ಮಹತ್ವದ ಪಂದ್ಯದಲ್ಲಿ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ನೂತನ ಕೋಚ್ ಮೈಕೆಲ್ ನಾಬ್ಸ್ ತಮ್ಮ ಮೊದಲ ಪ್ರಮುಖ ಟೂರ್ನಿಯಲ್ಲೇ ಯಶ ಕಂಡಿದ್ದಾರೆ. ಯುವ ಹಾಗೂ ಅನುಭವಿ ಆಟಗಾರರನ್ನೊಳಗೊಂಡ ತಂಡವನ್ನು ಅವರು ಸರಿಯಾದ ಮಾರ್ಗದರ್ಶನದಲ್ಲಿ ಮುನ್ನಡೆಸಿದ್ದಾರೆ.

ನಿಗದಿತ ಅವಧಿಯಲ್ಲಿ ಪಾಕಿಸ್ತಾನಕ್ಕೆ ಏಳು ಪೆನಾಲ್ಟಿ ಕಾರ್ನರ್ ಅವಕಾಶಗಳು ಲಭಿಸಿದ್ದವು. ಆದರೆ ಭಾರತದ ರಕ್ಷಣಾ ಆಟಗಾರರು ಮತ್ತು ಗೋಲ್‌ಕೀಪರ್ ಶ್ರೀಜೇಶ್ ಎಲ್ಲವನ್ನೂ ತಡೆಯಲು ಯಶಸ್ವಿಯಾದರು.

ಭಾರತಕ್ಕೆ ಲಭಿಸಿದ್ದು ಒಂದು ಪೆನಾಲ್ಟಿ ಕಾರ್ನರ್ ಮಾತ್ರ. 29ನೇ ನಿಮಿಷದಲ್ಲಿ ದೊರೆತ ಈ ಅವಕಾಶದಲ್ಲಿ ಇಗ್ನೇಸ್ ಟಿರ್ಕಿ ಗೋಲು ಗಳಿಸಲು ವಿಫಲರಾದರು.

ಪಂದ್ಯದ ಆರಂಭದಲ್ಲಿ ಪಾಕಿಸ್ತಾನ ಆಕ್ರಮಣಕಾರಿ ಪ್ರದರ್ಶನ ನೀಡಿತು. ಶಕೀಲ್ ಅಬ್ಬಾಸಿ ಗೋಲು ಗಳಿಸುವ ಕೆಲವೊಂದು ಪ್ರಯತ್ನಗಳನ್ನು ನಡೆಸಿದರು. ಆದರೆ ವಿ. ರಘುನಾಥ್ ಅವುಗಳನ್ನು ಯಶಸ್ವಿಯಾಗಿ ತಡೆದರು.
ವಿರಾಮದ ಬಳಿಕ ಪಾಕಿಸ್ತಾನಕ್ಕೆ ಮೇಲಿಂದ ಮೇಲೆ ಪೆನಾಲ್ಟಿ ಅವಕಾಶಗಳು ದೊರೆತವಾದರೂ ಗೋಲು ಮಾತ್ರ ದಾಖಲಾಗಲಿಲ್ಲ. 15 ನಿಮಿಷಗಳ ಹೆಚ್ಚುವರಿ ಅವಧಿಯಲ್ಲೂ ತುರುಸಿನ ಪೈಪೋಟಿ ಕಂಡುಬಂತು.

ತಂಡಕ್ಕೆ ನಾಳೆ ಸನ್ಮಾನ
ನವದೆಹಲಿ ವರದಿ (ಪಿಟಿಐ):
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ ಗೆದ್ದುಕೊಂಡ ಭಾರತ ತಂಡವನ್ನು ಹಾಕಿ ಇಂಡಿಯಾ (ಎಚ್‌ಐ) ಮಂಗಳವಾರ ಸನ್ಮಾನಿಸಲಿದೆ.

`ಭಾರತದ ಹಾಕಿಗೆ ಇದು ಸಂಭ್ರಮದ ಕ್ಷಣ. ತಂಡದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುವೆವು. ಇದಕ್ಕಾಗಿ ಸೆಪ್ಟೆಂಬರ್ 13 ರಂದು ಸನ್ಮಾನ ಸಮಾರಂಭ ಏರ್ಪಡಿಸಿದ್ದೇವೆ~ ಎಂದು ಎಚ್‌ಐ ಪ್ರಧಾನ ಕಾರ್ಯದರ್ಶಿ ನರೀಂದರ್ ಬಾತ್ರ ನುಡಿದರು.

ಚೀನಾದ ಓರ್ಡೊಸ್‌ನಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಭಾರತ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಪಾಕಿಸ್ತಾನ ವಿರುದ್ಧ ಜಯ ಸಾಧಿಸಿತ್ತು. ರಾಜ್ಪಾಲ್ ಸಿಂಗ್ ನೇತೃತ್ವದ ತಂಡ ಚೀನಾದಿಂದ ಸೋಮವಾರ ತವರಿಗೆ ಆಗಮಿಸಲಿದೆ.

ಎಚ್‌ಐ ಈ ಸಮಾರಂಭಕ್ಕೆ ಕ್ರೀಡಾ ಸಚಿವ ಅಜಯ್ ಮಾಕನ್ ಅವರನ್ನೂ ಆಹ್ವಾನಿಸಿದೆ. ಆದರೆ ಮಾಕನ್ ಆಗಮಿಸುವರೇ ಎಂಬುದು ಖಚಿತವಾಗಿಲ್ಲ.

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡ ಭಾರತ ಮಹಿಳಾ ತಂಡದ ಸದಸ್ಯರೂ ಈ ವೇಳೆ ಹಾಜರಿರುವರು.  ಪ್ರಭಾವಿ ಪ್ರದರ್ಶನ ನೀಡುವಲ್ಲಿ ವಿಫಲವಾದ ಮಹಿಳಾ ತಂಡ ಈ ಟೂರ್ನಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.