ADVERTISEMENT

ಭಾರತ ಗುಂಪು ಹಂತದಲ್ಲೇ ನಿರ್ಗಮನ ಸಾಧ್ಯತೆ?

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2011, 16:55 IST
Last Updated 13 ಮಾರ್ಚ್ 2011, 16:55 IST

ಬೆಂಗಳೂರು: ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ತಲುಪಿಯಾಗಿದೆ ಎಂಬ ತಲೆಬರಹಗಳು ಈಗಾಗಲೇ ಬಂದು ಹೋಗಿವೆ, ಬರುತ್ತಲೇ ಇವೆ.

ಆದರೆ ಸದ್ಯದ ಒಂದು ಲೆಕ್ಕಾಚಾರದ ಪ್ರಕಾರ ಭಾರತ ಇನ್ನೂ ಕ್ವಾರ್ಟರ್ ಫೈನಲ್ ತಲುಪಿಲ್ಲ! ಬದಲಾಗಿ ಮಹೇಂದ್ರ ಸಿಂಗ್ ದೋನಿ ಪಡೆಯು ಗುಂಪು ಹಂತದಿಂದಲೇ ಹೊರಬೀಳುವ ಸಾಧ್ಯತೆಗಳೂ ಇವೆ. ಅದಕ್ಕೆ ‘ಬಿ’ ಗುಂಪಿನಲ್ಲಿ ಕೆಲವೊಂದು ಅಚ್ಚರಿ ಫಲಿತಾಂಶಗಳು ಹೊರಹೊಮ್ಮಲು ಸಾಧ್ಯವಾಗಬೇಕು ಅಷ್ಟೆ! ಅಂತಹ ಸಾಧ್ಯತೆಗಳಿವೆ ಎನ್ನುವುದು ಮಾತ್ರ ನಿಜ. ಆದರೆ ಆ ರೀತಿ ಆಗುವ ಶೇಕಡಾ 100ರಷ್ಟು ಭರವಸೆ ಇಲ್ಲ!

ವಿಂಡೀಸ್ (6 ಪಾಯಿಂಟ್), ದಕ್ಷಿಣ ಆಫ್ರಿಕಾ (6 ಪಾಯಿಂಟ್) ಹಾಗೂ ಬಾಂಗ್ಲಾದೇಶ (4 ಪಾಯಿಂಟ್) ತಂಡಗಳು ಇನ್ನೂ ತಲಾ ಎರಡು ಪಂದ್ಯಗಳನ್ನು ಆಡಬೇಕಾಗಿರುವುದರಿಂದ ಈ ರೀತಿಯ ಲೆಕ್ಕಾಚಾರಗಳು ಹರಿದಾಡುತ್ತಿವೆ. ಭಾರತ ( 7 ಪಾಯಿಂಟ್) ಹಾಗೂ ಇಂಗ್ಲೆಂಡ್ (5 ಪಾಯಿಂಟ್) ತಂಡಗಳಿಗೆ ಇನ್ನು ತಲಾ ಒಂದು ಪಂದ್ಯವಿದೆ.

ವಿಂಡೀಸ್‌ಗೆ ಇಂಗ್ಲೆಂಡ್ ಹಾಗೂ ಭಾರತ ಎದುರು ಎರಡು ಪಂದ್ಯಗಳಿವೆ. ದಕ್ಷಿಣ ಆಫ್ರಿಕಾ ತಂಡದವರು ಬಾಂಗ್ಲಾ ಹಾಗೂ ಐರ್ಲೆಂಡ್ ಎದುರು ಆಡಬೇಕಾಗಿದೆ. ಬಾಂಗ್ಲಾ ತಂಡ ಸೋಮವಾರ ಹಾಲೆಂಡ್ ಎದುರು ಸೆಣಸಬೇಕಾಗಿದೆ.

ಅಕಸ್ಮಾತ್ ವೆಸ್ಟ್‌ಇಂಡೀಸ್ ವಿರುದ್ಧ ಭಾರತ ಸೋತು, ದಕ್ಷಿಣ ಆಫ್ರಿಕಾ, ಹಾಲೆಂಡ್ ಮೇಲೆ ಬಾಂಗ್ಲಾದೇಶ ಗೆದ್ದು, ಐರ್ಲೆಂಡ್ ತಂಡವನ್ನು ದಕ್ಷಿಣ ಆಫ್ರಿಕಾ ಮಣಿಸಿ, ವಿಂಡೀಸ್ ಎದುರು ಇಂಗ್ಲೆಂಡ್ ಭಾರಿ ರನ್‌ರೇಟ್‌ನಲ್ಲಿ ಜಯಿಸಿದರೆ ದೋನಿ ಪಡೆ ಟೂರ್ನಿಯಿಂದ ನಿರ್ಗಮಿಸುವ ಸಾಧ್ಯತೆ ಇದೆ.

ಮಾರ್ಚ್ 20ರಂದು ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಎದುರು ಗೆದ್ದರೆ ವಿಂಡೀಸ್ ತಂಡದ ಪಾಯಿಂಟ್ 8 ಆಗುತ್ತದೆ. ಆಗ ಭಾರತ 7 ಪಾಯಿಂಟ್‌ನಲ್ಲಿಯೇ ಉಳಿಯಲಿದೆ. ದಕ್ಷಿಣ ಆಫ್ರಿಕಾ ಹಾಗೂ ಹಾಲೆಂಡ್ ಮೇಲೆ ತನ್ನ ಕೊನೆಯ ಲೀಗ್ ಪಂದ್ಯಗಳಲ್ಲಿ ಗೆದ್ದರೆ ಬಾಂಗ್ಲಾದ ಪಾಯಿಂಟ್ ಸಂಖ್ಯೆ 8ಕ್ಕೇರಲಿದೆ. ಐರ್ಲೆಂಡ್ ಎದುರು ಜಯಿಸಿದರೆ ದಕ್ಷಿಣ ಆಫ್ರಿಕಾದ ಪಾಯಿಂಟ್ 8 ಆಗುತ್ತದೆ. ಮಾರ್ಚ್ 17ರಂದು ಚೆನ್ನೈನಲ್ಲಿ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ವಿಂಡೀಸ್ ಎದುರು ಭಾರಿ ರನ್‌ರೇಟ್‌ನಲ್ಲಿ (ಭಾರತಕ್ಕಿಂತ ಹೆಚ್ಚು) ಇಂಗ್ಲೆಂಡ್ ಗೆದ್ದರೆ ಕ್ವಾರ್ಟರ್ ಫೈನಲ್ ತುಪಬಹುದು. ಆಗ ಇಂಗ್ಲೆಂಡ್ ಪಾಯಿಂಟ್ 7 ಆಗುತ್ತದೆ.

ಅಂದರೆ ವೆಸ್ಟ್‌ಇಂಡೀಸ್ (8 ಪಾಯಿಂಟ್), ದಕ್ಷಿಣ ಆಫ್ರಿಕಾ (8), ಬಾಂಗ್ಲಾದೇಶ (8) ಹಾಗೂ ಇಂಗ್ಲೆಂಡ್ (7+ ಭಾರತಕ್ಕಿಂತ ಹೆಚ್ಚು ರನ್‌ರೇಟ್) ‘ಬಿ’ ಗುಂಪಿನಿಂದ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಸಾಧ್ಯತೆಗಳಿರುತ್ತವೆ. ಆಗ ಭಾರತ (7 ಪಾಯಿಂಟ್) ವಿಶ್ವಕಪ್‌ನಿಂದ ನಿರ್ಗಮಿಸುವ ಆತಂಕ ಉದ್ಭವವಾಗುತ್ತದೆ.

ಆದರೆ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ದೋನಿ ಪಡೆ ಗೆದ್ದರೆ ಈ ರೀತಿಯ ಲೆಕ್ಕಾಚಾರಗಳು ಪರಿಗಣನೆಗೆ ಬರುವುದಿಲ್ಲ. ಆಗ ಕ್ವಾರ್ಟರ್ ಫೈನಲ್ ಹಾದಿ ಸುಗಮವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.