ADVERTISEMENT

ಭಾರತ ತಂಡಕ್ಕೆ ಮರಳಿದ ವಿಜಯ್‌

ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟ: ಕರ್ನಾಟಕದ ಕೆ.ಎಲ್ ರಾಹುಲ್‌ಗೆ ಸ್ಥಾನ

ಏಜೆನ್ಸೀಸ್
Published 23 ಅಕ್ಟೋಬರ್ 2017, 19:30 IST
Last Updated 23 ಅಕ್ಟೋಬರ್ 2017, 19:30 IST
ಮುರಳಿ ವಿಜಯ್‌
ಮುರಳಿ ವಿಜಯ್‌   

ಮುಂಬೈ (ರಾಯಿಟರ್ಸ್‌): ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಮುರಳಿ ವಿಜಯ್ ಶ್ರೀಲಂಕಾ ಎದುರಿನ ಟೆಸ್ಟ್‌ ಸರಣಿಗಾಗಿ ಸೋಮವಾರ ಪ್ರಕಟಿಸಿರುವ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ನವೆಂಬರ್‌ 16ರಂದು ಮೂರು ಪಂದ್ಯಗಳ ಸರಣಿ ಆರಂಭವಾಗಲಿದೆ. ಮೊದಲ ಎರಡು ಟೆಸ್ಟ್‌ ಪಂದ್ಯಗಳಿಗೆ ಮಾತ್ರ ಭಾರತ ತಂಡವನ್ನು ಪ್ರಕಟಿಸಲಾಗಿದೆ. 33 ವರ್ಷದ ಬಲಗೈ ಬ್ಯಾಟ್ಸ್‌ಮನ್‌ ವಿಜಯ್ ಬೆರಳಿಗೆ ಗಾಯಗೊಂಡ ಕಾರಣ ಶ್ರೀಲಂಕಾ ಪ್ರವಾಸದ ಪಂದ್ಯಗಳಲ್ಲಿ ಆಡಿರಲಿಲ್ಲ. ಸರಣಿಯಲ್ಲಿ ಭಾರತ ಕ್ಲೀನ್‌ಸ್ವೀಪ್ ಸಾಧಿಸಿತ್ತು.

ರಾಜ್ಯದ ರಾಹುಲ್‌ಗೆ ಸ್ಥಾನ: ಕರ್ನಾಟಕದ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್ ಟೆಸ್ಟ್‌ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಮೇಲಿನ ಕ್ರಮಾಂಕದಲ್ಲಿ ರಾಹುಲ್ ಆಡಲಿರುವ ಕಾರಣ 16 ಆಟಗಾರರ ತಂಡದಲ್ಲಿ ಶಿಖರ್‌ ಧವನ್‌ ಅವರಿಗೆ ಮೀಸಲು ಆರಂಭಿಕ ಆಟಗಾರನಾಗಿ ಸ್ಥಾನ ನೀಡಲಾಗಿದೆ.

ADVERTISEMENT

ಎಡಗೈ ಬ್ಯಾಟ್ಸ್‌ಮನ್‌ ಅಭಿನವ್ ಮುಕುಂದ್‌ಗೆ ಸ್ಥಾನ ಸಿಕ್ಕಿಲ್ಲ. ಮೊದಲ ಟೆಸ್ಟ್ ಪಂದ್ಯಕ್ಕೆ ಕೋಲ್ಕತ್ತದ ಈಡನ್‌ ಗಾರ್ಡನ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಎರಡು ಮತ್ತು ಮೂರನೇ ಪಂದ್ಯಗಳು ನಾಗಪುರ ಹಾಗೂ ನವದೆಹಲಿಯಲ್ಲಿ ಆಯೋಜನೆಗೊಂಡಿವೆ.

ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಸ್ಥಾನ ಪಡೆಯದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಕೂಡ ತಂಡಕ್ಕೆ ಮರಳಿದ್ದಾರೆ. ಕುಲದೀಪ್ ಯಾದವ್‌, ಭುವನೇಶ್ವರ್ ಕುಮಾರ್‌ ಕೂಡ ಇದ್ದಾರೆ.

‘ಐಪಿಎಲ್ ಬಳಿಕ ಸತತ ಪಂದ್ಯಗಳನ್ನು ಆಡಿರುವ ನಾಯಕ ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಬೇಕು ಎಂಬ ಚರ್ಚೆ ನಡೆಯಿತು. ಟೆಸ್ಟ್ ಪಂದ್ಯಗಳಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಬಳಿಕ ವಿಶ್ರಾಂತಿ ನೀಡುವ ಬಗ್ಗೆ ಚಿಂತನೆ ನಡೆಸಲಿದ್ದೇವೆ’ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಪ್ರಸಾದ್ ಹೇಳಿದ್ದಾರೆ.

‘ಶ್ರೀಲಂಕಾ ವಿರುದ್ಧ ಭಾರತ ಮೂರು ಏಕದಿನ ಹಾಗೂ ಮೂರು ಟ್ವೆಂಟಿ–20 ಪಂದ್ಯ ಆಡಲಿದೆ. ಆದರೆ ಈ ತಂಡಗಳನ್ನು ಟೆಸ್ಟ್ ಸರಣಿ ಬಳಿಕ ಪ್ರಕಟಿಸಲಾಗುತ್ತದೆ’ ಎಂದು ಹೇಳಿದ್ದಾರೆ.

ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್‌ ರಾಹುಲ್‌, ಮುರಳಿ ವಿಜಯ್‌, ಶಿಖರ್ ಧವನ್‌, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪ ನಾಯಕ), ರೋಹಿತ್ ಶರ್ಮಾ, ವೃದ್ಧಿಮಾನ್ ಸಹಾ, ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜ, ಕುಲದೀಪ್ ಯಾದವ್‌, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಉಮೇಶ್ ಯಾದವ್‌, ಭುವನೇಶ್ವರ್‌ ಕುಮಾರ್, ಇಶಾಂತ್ ಶರ್ಮಾ.

ಟಿ–20 ತಂಡದಲ್ಲಿ ಶ್ರೇಯಸ್‌, ಸಿರಾಜ್ 

ಭಾರತ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ವಿರುದ್ಧದ ಟ್ವೆಂಟಿ–20 ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ಮೊದಲ ಮೂರು ಪಂದ್ಯಗಳಿಗೂ ತಂಡವನ್ನು ಅಂತಿಮಗೊಳಿಸಲಾಗಿದೆ. ಕರ್ನಾಟಕದ ಇಬ್ಬರು ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ಸಿಕ್ಕಿದೆ. ಕೆ.ಎಲ್‌ ರಾಹುಲ್ ಹಾಗೂ ಮನೀಷ್ ಪಾಂಡೆ ತಂಡದಲ್ಲಿ ಇದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ರಾಹುಲ್‌ ಸ್ಥಾನ ಪಡೆದಿರಲಿಲ್ಲ.

ಯುವ ಆಟಗಾರರಾದ ಶ್ರೇಯಸ್‌ ಅಯ್ಯರ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್‌ ಅವರಿಗೆ ಆಯ್ಕೆ ಸಮಿತಿ ಮನ್ನಣೆ ನೀಡಿದೆ.

ನೆಹ್ರಾಗೆ ಕೊನೆಯ ಪಂದ್ಯ: ಮೊದಲ ಟ್ವೆಂಟಿ–20 ಪಂದ್ಯ ನವದೆಹಲಿಯಲ್ಲಿ ನಡೆಯಲಿದೆ. ತವರಿನ ಅಂಗಳದಲ್ಲಿ ಅಂತಿಮ ಅಂತರರರಾಷ್ಟ್ರೀಯ ಪಂದ್ಯ ಆಡಲಿರುವ 38 ವರ್ಷದ ಹಿರಿಯ ಆಟಗಾರ ಆಶಿಶ್ ನೆಹ್ರಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ರೋಹಿತ್ ಶರ್ಮಾ (ಉಪ ನಾಯಕ), ಕೆ.ಎಲ್‌. ರಾಹುಲ್‌, ಮನೀಷ್ ಪಾಂಡೆ, ಶ್ರೇಯಸ್‌ ಅಯ್ಯರ್‌, ದಿನೇಶ್ ಕಾರ್ತಿಕ್‌, ಮಹೇಂದ್ರ ಸಿಂಗ್‌ ದೋನಿ (ವಿಕೆಟ್ ಕೀಪರ್‌), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್‌, ಯಜುವೇಂದ್ರ ಚಾಹಲ್‌, ಕುಲದೀಪ್ ಯಾದವ್‌, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ, ಆಶಿಶ್ ನೆಹ್ರಾ, ಮೊಹಮ್ಮದ್ ಸಿರಾಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.