ADVERTISEMENT

ಮಕ್ಕಳ ಜೊತೆ ನಲಿದಾಡಿದ ಆಟಗಾರರು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 20:44 IST
Last Updated 1 ಡಿಸೆಂಬರ್ 2012, 20:44 IST
ಆಟದ ನಡುವೆಯೂ ಮನರಂಜನೆ.... ಭಾರತ ವಿರುದ್ಧದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯವನ್ನಾಡಲು ಕೋಲ್ಕತ್ತಕ್ಕೆ ಆಗಮಿಸಿರುವ ಇಂಗ್ಲೆಂಡ್ ತಂಡದ ಆಟಗಾರರು ಶನಿವಾರ ಸ್ಥಳೀಯ ಮಕ್ಕಳ ಜೊತೆ ಸೇರಿ ಮನರಂಜನೆ ಸವಿದರು
ಆಟದ ನಡುವೆಯೂ ಮನರಂಜನೆ.... ಭಾರತ ವಿರುದ್ಧದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯವನ್ನಾಡಲು ಕೋಲ್ಕತ್ತಕ್ಕೆ ಆಗಮಿಸಿರುವ ಇಂಗ್ಲೆಂಡ್ ತಂಡದ ಆಟಗಾರರು ಶನಿವಾರ ಸ್ಥಳೀಯ ಮಕ್ಕಳ ಜೊತೆ ಸೇರಿ ಮನರಂಜನೆ ಸವಿದರು   

ಕೋಲ್ಕತ್ತ (ಪಿಟಿಐ) : ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಪಡೆದ ಖುಷಿಯಲ್ಲಿರುವ ಇಂಗ್ಲೆಂಡ್ ತಂಡದ ಆಟಗಾರರು ಇಲ್ಲಿನ ಶಾಲಾ ಮಕ್ಕಳ ಜೊತೆ ಶನಿವಾರ ಸಮಯ ಕಳೆದರು. ಶುಕ್ರವಾರವೇ ಕೋಲ್ಕತ್ತಕ್ಕೆ ಬಂದಿಳಿದಿರುವ ಆಟಗಾರರು ಅಭ್ಯಾಸ ನಡೆಸಲು ಕ್ರೀಡಾಂಗಣಕ್ಕೆ ತೆರಳಲಿಲ್ಲ.

ದಕ್ಷಿಣ ಕೋಲ್ಕತ್ತದ ಶಾಲೆಯ ಕ್ಯಾಂಪಸ್‌ವೊಂದರಲ್ಲಿ ಮಕ್ಕಳ ಜೊತೆ ಹಾಡಿ ಸಂಭ್ರಮಿಸುವ ಜೊತೆಗೆ ಮಕ್ಕಳೊಂದಿಗೆ ನೃತ್ಯಕ್ಕೂ ಹೆಜ್ಜೆ ಹಾಕಿದರು.

`ಇದೊಂದು ಮಧುರ ಅನುಭವ. ಮಕ್ಕಳ ಜೊತೆ ಆಡುವಾಗ ಸಮಯ ಕಳೆಯುವುದೇ ಗೊತ್ತಾಗುವುದೇ ಇಲ್ಲ. ನಮ್ಮ ಬಾಲ್ಯದ ದಿನಗಳು ಮತ್ತೆ ಮತ್ತೆ ನೆನಪಾದವು. ಈ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ' ಎಂದು ಮ್ಯಾಟ್ ಪ್ರಿಯರ್ ಸಾಮಾಜಿಕ ತಾಣ ಟ್ವೀಟರ್‌ನಲ್ಲಿ `ಟ್ವಿಟ್' ಮಾಡಿದ್ದಾರೆ.

ADVERTISEMENT

ಇಂಗ್ಲೆಂಡ್ ತಂಡದ ಕೆಲವು ಆಟಗಾರರು ಶಾಲಾ ಮಕ್ಕಳೊಂದಿಗೆ ಆಡಿ ಖುಷಿ ಪಟ್ಟರು. ಪ್ರಿಯರ್ ಮಕ್ಕಳೊಂದಿಗೆ ಚೆಸ್ ಆಡಿದರು. ಆ್ಯಂಡರ್ಸನ್ ಚಿಣ್ಣರೊಡನೆ ಹಾಕಿ ಆಡುತ್ತಾ ಸಂಭ್ರಮಿಸಿದರು. ಕೆವಿನ್ ಪೀಟರ್ಸನ್ ಮಕ್ಕಳ ಜೊತೆ ಕೆಲ ಹೊತ್ತು ಕ್ರಿಕೆಟ್ ಆಡಿ ಅವರಿಗೆ  ಮಾರ್ಗದರ್ಶನ ಮಾಡಿದರು.

ಮೂರನೇ ಟೆಸ್ಟ್ ಪಂದ್ಯ ಡಿಸೆಂಬರ್ 5ರಂದು ಆರಂಭವಾಗಲಿದ್ದು, ಐದು ದಿನ ಮುಂಚಿತವೇ ಆಟಗಾರರು ಕೋಲ್ಕತ್ತಕ್ಕೆ ಆಗಮಿಸಿದ್ದಾರೆ. ಆದರೆ, ಇಂಗ್ಲೆಂಡ್ ತಂಡದ ಇಬ್ಬರು ಆಟಗಾರರಾದ ಇಯಾನ್ ಮಾರ್ಗನ್ ಮತ್ತು ಜೊನಾಥನ್ ಟ್ರಾಟ್ ಮಾತ್ರ ಮಕ್ಕಳ ಜೊತೆ ಕುಳಿತು ತುಂಬಾ ಹೊತ್ತು ಹರಟೆ ಹೊಡೆದರು.

`ಇದೊಂದು ಸುಂದರ ಅನುಭವ. ಭಾರತಕ್ಕೆ ಬಂದಾಗಲೆಲ್ಲಾ ಇಲ್ಲಿನ ಮಕ್ಕಳೊಂದಿಗೆ ಬೆರೆಯುವುದು ನನಗೆ ಅಭ್ಯಾಸ. ಮಕ್ಕಳೊಂದಿಗೆ ಕೂಡಿ ಆಡುವುದು ಎಂದರೆ, ಮನಸ್ಸಿಗೆ ತಂಪು ಸಿಗುತ್ತದೆ' ಎಂದು ಪೀಟರ್ಸನ್ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.