ADVERTISEMENT

ಮತ್ತೆ ಅದೇ ರೀತಿ ಸಿಕ್ಸರ್ ಬಾರಿಸಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಬೆಂಗಳೂರು: `ನನಗೆ ಈ ರೀತಿ ಆಗಿದೆ ಎಂದು ಬೇಸರಪಟ್ಟುಕೊಳ್ಳಬೇಡಿ. ಬದಲಾಗಿ ಅಂತಹ ಮತ್ತಷ್ಟು ಹೊಡೆತಗಳು ನಿಮ್ಮ ಬ್ಯಾಟ್‌ನಿಂದ ಮೂಡಿಬರಲಿ~ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ಐಪಿಎಲ್ ಪಂದ್ಯ ವೀಕ್ಷಿಸುತ್ತಿದ್ದಾಗ ಕ್ರಿಸ್ ಗೇಲ್ ಅವರ ಸಿಕ್ಸರ್ ಹೊಡೆತದಲ್ಲಿ ಚೆಂಡು ತಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಪುಟ್ಟ ಬಾಲಕಿ ಟಿಯಾ ಭಾಟಿಯಾ ಹೇಳಿದ ಮಾತಿದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕ ಸಿದ್ಧಾರ್ಥ ಮಲ್ಯ ಹಾಗೂ ಗೇಲ್ ಅವರು ಮಲ್ಯ ಆಸ್ಪತ್ರೆಗೆ ತೆರಳಿ ಆ ಬಾಲಕಿಯ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಆಕೆಯೊಂದಿಗೆ ನಡೆಸಿದ ಸಂಭಾಷಣೆಯ ವಿವರವನ್ನು ಗೇಲ್ `ಟ್ವಿಟರ್~ನಲ್ಲಿ ಬರೆದಿದ್ದಾರೆ.

`ಟಿಯಾ ಅವರನ್ನು ಭೇಟಿ ಮಾಡಿ ಮಾತನಾಡಿಸಿದೆ. ಇದೊಂದು ಬೇಸರದ ವಿಷಯ. ಆದರೆ ಅವಳು ಧೈರ್ಯದ ಹುಡುಗಿ. ಅದೇ ರೀತಿ ಸಿಕ್ಸರ್ ಬಾರಿಸಿ ಎಂದು ನನಗೆ ಹೇಳಿದಳು. ಆಕೆ ಬೇಗ ಚೇತರಿಸಿಕೊಳ್ಳಲಿ~ ಎಂದು ಅವರು ಹೇಳಿದ್ದಾರೆ.

ಪುಣೆ ವಾರಿಯರ್ಸ್ ಎದುರು ಗೆದ್ದ ಈ ಪಂದ್ಯದಲ್ಲಿ ಗೇಲ್ (81; 48 ಎಸೆತ) ಎಂಟು ಸಿಕ್ಸರ್ ಎತ್ತಿದ್ದರು. ರಾಹುಲ್ ಶರ್ಮ ಹಾಕಿದ ಒಂದೇ ಓವರ್‌ನಲ್ಲಿ ಸತತ ಐದು ಸಿಕ್ಸರ್ ಬಾರಿಸಿದರು. ಅದರಲ್ಲಿ ನಾಲ್ಕನೇ  ಸಿಕ್ಸರ್ ಪಿ-3 ಪಕ್ಕದ ಸ್ಟ್ಯಾಂಡ್‌ನಲ್ಲಿ ಕುಳಿತು ಕುಟುಂಬದವರೊಂದಿಗೆ ಪಂದ್ಯ ವೀಕ್ಷಿಸುತ್ತಿದ್ದ 11ರ ಹರೆಯದ ಟಿಯಾ ಅವರ ಮೂಗಿಗೆ ಬಡಿದಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಆರು ವಿಕೆಟ್‌ಗಳ ಗೆಲುವು ಸಾಧಿಸಿತು. ಗೇಲ್ `ಪಂದ್ಯ ಶ್ರೇಷ್ಠ~ ಗೌರವ ಪಡೆದರು.

ತಕ್ಷಣವೇ ಆ ಬಾಲಕಿಯನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಯಿತು. `ಗೇಲ್ ಬಾರಿಸಿದ ಚೆಂಡು ತಾಗಿ ಗಾಯಗೊಂಡ ಬಾಲಕಿಯನ್ನು ನಾವು ತಕ್ಷಣ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಷ್ಟು ಮಾತ್ರವಲ್ಲದೇ, ಕೆಎಸ್‌ಸಿಎ ಸಿಬ್ಬಂದಿ ಆ ಹುಡುಗಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸಿದರು~ ಎಂದು ಕೆಎಸ್‌ಸಿಎ ತಿಳಿಸಿದೆ.

`ಮೂಗಿನ ಮೂಳೆಯಲ್ಲಿ ಸಣ್ಣ ಬಿರುಕು ಬಿಟ್ಟಿದೆ. ಬುಧವಾರ ಬೆಳಿಗ್ಗೆ ನಾವು ಶಸ್ತ್ರ ಚಿಕಿತ್ಸೆ ನಡೆಸಿದೆವು. ಯಾವುದೇ ಅಪಾಯವಿಲ್ಲ. ಆದರೆ ಇನ್ನೊಂದು ದಿನ ಆಕೆ ಇಲ್ಲಿಯೇ ಇರುತ್ತಾಳೆ~ ಎಂದು ಮಲ್ಯ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅವಳೀಗ ಚೇತರಿಸಿಕೊಳ್ಳುತ್ತಿದ್ದಾಳೆ~ ಎಂದು ಟಿಯಾ ಅವರು ಸಂಬಂಧಿಯೊಬ್ಬರು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.