ADVERTISEMENT

ಮತ್ತೆ ಗೆಲುವಿನ ಹಾದಿ ಹಿಡಿಯುವ ವಿಶ್ವಾಸದಲ್ಲಿ ದ್ರಾವಿಡ್ ಪಡೆ:ರಾಯಲ್ಸ್ ಮೇಲೂ ರೈಡರ್ಸ್ ಸವಾರಿ?

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ಕೋಲ್ಕತ್ತ (ಪಿಟಿಐ): ಮೊದಲ ಎರಡು ಪಂದ್ಯ ಗೆದ್ದು ನಂತರ ಮುಗ್ಗರಿಸಿದ ರಾಜಸ್ತಾನ್ ರಾಯಲ್ಸ್ ಒಂದೆಡೆ; ಎರಡು ಪಂದ್ಯ ಸೋತು ಆನಂತರ ಗೆಲುವಿನ ಸವಿಯುಂಡ ಕೋಲ್ಕತ್ತ ನೈಟ್ ರೈಡರ್ಸ್ ಇನ್ನೊಂದೆಡೆ. ಇವೆರಡೂ ತಂಡಗಳ ನಡುವೆ ಶುಕ್ರವಾರ ಹಣಾಹಣಿ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯಲ್ಲಿ ಶಾರೂಖ್ ಖಾನ್ ಒಡೆತನದ ನೈಟ್ ರೈಡರ್ಸ್ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 42 ರನ್‌ಗಳ ಅಂತರದಿಂದ ಗೆದ್ದು ಪುಟಿದೆದ್ದು ನಿಂತಿದೆ. ಇದೇ ಉತ್ಸಾಹದೊಂದಿಗೆ ಮುನ್ನುಗ್ಗುವ ಲೆಕ್ಕಾಚಾರ ಈ ತಂಡದ ನಾಯಕ ಗೌತಮ್ ಗಂಭೀರ್ ಅವರದ್ದು.

ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಸತತ ಎರಡು ಪಂದ್ಯಗಳಲ್ಲಿನ ವಿಜಯದ ನಂತರ ಲಯ ತಪ್ಪಿದ ರಾಜಸ್ತಾನ್ ರಾಯಲ್ಸ್ ಎದುರು ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ವಿಜಯ ಸಾಧಿಸಿದರೆ ಗಂಭೀರ್ ಮೊಗದಲ್ಲಿನ ನಗೆಯು ಮಾಸದೇ ಉಳಿಯುತ್ತದೆ. `ಕಿಂಗ್ ಖಾನ್~ ಕೂಡ ಇಂಥದೇ ಆಶಯ ಹೊಂದಿದ್ದಾರೆ. ತಮ್ಮ ತಂಡವು ಎಲ್ಲಿಯೇ ಆಡಿದರೂ ಅಲ್ಲಿ ಹಾಜರಾಗುವ ಶಾರೂಖ್ ಈಡನ್ ಗ್ಯಾಲರಿಯಲ್ಲಿಯೂ ಸಂಭ್ರಮದಿಂದ ಕುಣಿದಾಡಲು ಕಾತರದಿಂದ ಕಾಯ್ದಿದ್ದಾರೆ.

ದೆಹಲಿ ಡೇರ್ ಡೆವಿಲ್ಸ್ ವಿರುದ್ಧ ಎಂಟು ವಿಕೆಟ್‌ಗಳ ಅಂತರದಿಂದ ಸೋತು, ಅದರ ಬೆನ್ನಲ್ಲಿಯೇ ರಾಜಸ್ತಾನ್ ರಾಯಲ್ಸ್ ಎದುರು 22 ರನ್‌ಗಳಿಂದ ಆಘಾತ ಅನುಭವಿಸಿದ್ದ ನೈಟ್ ರೈಡರ್ಸ್ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಯತ್ನವನ್ನು ರಾಯಲ್ ಚಾಲೆಂಜರ್ಸ್ ವಿರುದ್ಧ ಮಾಡಿತು. ಅದರಿಂದಾಗಿ ಉತ್ತಮ ಫಲವೂ ಸಿಕ್ಕಿತು. ಅದೇ ಗತಿಯನ್ನು ಕಾಯ್ದುಕೊಳ್ಳುವ ಪ್ರಯತ್ನ ಈಗ ಅಗತ್ಯವಾಗಿದೆ. ದಿಟ್ಟ ಆಟವಾಡುವ ಮೂಲಕ ರಾಜಸ್ತಾನ್ ರಾಯಲ್ಸ್‌ಗೆ ತಿರುಗೇಟು ನೀಡುವುದೂ ಈ ತಂಡದ ಉದ್ದೇಶ.

ತನ್ನದೇ ಅಂಗಳದಲ್ಲಿ ಆಡುತ್ತಿರುವುದರಿಂದ ನೈಟ್ ರೈಡರ್ಸ್ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿರುವುದು ಸಹಜ. ಆದರೆ ದ್ರಾವಿಡ್ ಬಳಗದ ಎದುರು ಆಡುವಾಗ ಈ ಮೇಲು ನೋಟದ ಲೆಕ್ಕಾಚಾರ ಸೂಕ್ತ ಎನಿಸದು. ಏಕೆಂದರೆ ರಾಜಸ್ತಾನ್ ರಾಯಲ್ಸ್ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನೈಟ್ ರೈಡರ್ಸ್‌ಗಿಂತ ಹೆಚ್ಚು ಸಮರ್ಥವಾಗಿದೆ.

ಪಂದ್ಯ ಆರಂಭ: ರಾತ್ರಿ 8.00ಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.