ADVERTISEMENT

ಮತ್ತೊಂದು ಜಯದತ್ತ ಭಾರತದ ಚಿತ್ತ

ಕ್ರಿಕೆಟ್: ವೆಸ್ಟ್ ಇಂಡೀಸ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2016, 19:30 IST
Last Updated 17 ಆಗಸ್ಟ್ 2016, 19:30 IST
ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್ ಸರಣಿಯನ್ನು ಜಯಿಸಿರುವ ವಿರಾಟ್‌ ಕೊಹ್ಲಿ (ನಡುವೆ) ನಾಯಕತ್ವದ ಭಾರತ ತಂಡ ಕೊನೆಯ ಟೆಸ್ಟ್‌ ಪಂದ್ಯದಲ್ಲಿಯೂ ಗೆಲುವು ಪಡೆಯುವ ವಿಶ್ವಾಸ ಹೊಂದಿದೆ.
ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್ ಸರಣಿಯನ್ನು ಜಯಿಸಿರುವ ವಿರಾಟ್‌ ಕೊಹ್ಲಿ (ನಡುವೆ) ನಾಯಕತ್ವದ ಭಾರತ ತಂಡ ಕೊನೆಯ ಟೆಸ್ಟ್‌ ಪಂದ್ಯದಲ್ಲಿಯೂ ಗೆಲುವು ಪಡೆಯುವ ವಿಶ್ವಾಸ ಹೊಂದಿದೆ.   

ಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್ (ಪಿಟಿಐ): ವೆಸ್ಟ್‌ ಇಂಡೀಸ್ ಎದುರಿನ ಟೆಸ್ಟ್ ಸರಣಿ ವಿರಾಟ್ ಕೊಹ್ಲಿ ಬಳಗದ  ಕೈವಶವಾಗಿದೆ. ತಂಡಕ್ಕೆ ಐಸಿಸಿ  ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಪಟ್ಟ ಕಟ್ಟಲು ಜಯದ ಓಟವನ್ನು ಮುಂದುವರೆಸುವ ಸವಾಲು ಈಗ ಭಾರತ ಬಳಗದ ಮುಂದಿದೆ.

ಗುರುವಾರ ಪೋರ್ಟ್ ಆಫ್‌ ಸ್ಪೇನ್‌ನಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ನಲ್ಲಿ ಗೆದ್ದು 3–0ಯಿಂದ ಸರಣಿ ಜಯದ ಸಂಭ್ರಮ ಆಚರಿಸುವ ವಿಶ್ವಾಸದಲ್ಲಿ ಕೊಹ್ಲಿ ಬಳಗವಿದೆ. ಕಳೆದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಭಾರತ ಗೆದ್ದಿತ್ತು. ಒಂದು ಪಂದ್ಯ ಮಳೆಯಿಂದಾಗಿ ಡ್ರಾ ಆಗಿತ್ತು.

ಮೂರನೇ ಪಂದ್ಯದಲ್ಲಿ ಮಳೆ ಅಡ್ಡಿಯಾದರೂ ಛಲ ಬಿಡದ ಭಾರತ ತಂಡವು 237 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಭುವನೇಶ್ವರ್ ಕುಮಾರ್ ಅವರ ಮಧ್ಯಮವೇಗದ ಸ್ವಿಂಗ್‌ಗಳು ಗಾಳಿಯಲ್ಲಿ ಲಾಸ್ಯವಾಡುತ್ತ ಆತಿಥೇಯ ಬ್ಯಾಟ್ಸ್‌ಮನ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದವು. ಕೆ.ಎಲ್. ರಾಹುಲ್ ಅರ್ಧಶತಕ, ಅರ್. ಅಶ್ವಿನ್ ಮತ್ತು ವೃದ್ದಿಮಾನ್ ಸಹಾ ಶತಕಗಳು ಗೆಲುವಿಗೆ ಬಲ ತುಂಬಿದ್ದವು. ಆಫ್‌ಸ್ಪಿನ್ನರ್ ಅಶ್ವಿನ್ ಅವರು ಮೂರು ವಿಕೆಟ್‌ಗಳನ್ನೂ ಕಬಳಿಸಿದ್ದರು.

ಕಳೆದ ಪಂದ್ಯದಲ್ಲಿ ಆಡಿರುವ ತಂಡವನ್ನೇ ಉಳಿಸಿಕೊಳ್ಳುವ ಸಾಧ್ಯತೆ ಇದೆ.  ಆದರೆ, ಮೊದಲ ಪಂದ್ಯದಲ್ಲಿ 84 ರನ್ ಗಳಿಸಿದ್ದ ಆರಂಭಿಕ ಆಟಗಾರ  ಶಿಖರ್ ಧವನ್ ನಂತರದ ಪಂದ್ಯಗಳಲ್ಲಿ ಪರಿಣಾಮಕಾರಿಯಾಗಿರಲಿಲ್ಲ. ಆದರೆ, ಎರಡನೇ ಪಂದ್ಯದಲ್ಲಿ ಮುರಳೀ ವಿಜಯ್ ಬದಲಿಗೆ ಜಾಗ ಪಡೆದಿದ್ದ ಕನ್ನಡಿಗ ರಾಹುಲ್ ಎರಡೂ ಪಂದ್ಯಗಳಲ್ಲಿ ಮಿಂಚಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.  ಆದರೆ ಈ ಪಂದ್ಯದಲ್ಲಿ ಶಿಖರ್ ಬದಲಿಗೆ ವಿಜಯ್ ಕಣಕ್ಕಿಳಿಯುವರೇ ಎಂಬುದನ್ನು ನೋಡಬೇಕು.

ಇನ್ನುಳಿದಂತೆ ರೋಹಿತ್ ಶರ್ಮಾ ಅವರನ್ನು ಮುಂದುವರಿಸುವ ಇರಾದೆ ಕೊಹ್ಲಿ ಅವರಿಗೆ ಇದೆ. ಆದ್ದರಿಂದ ಉಳಿದ ಕ್ರಮಾಂಕಗಳಲ್ಲಿ  ಬದಲಾವಣೆ  ಮಾಡುವ ಸಾಧ್ಯತೆ ಕಡಿಮೆ.

ಆದರೆ, ಚಿಂತೆ ಇರುವುದು ಆತಿಥೇಯರ ಬಳಗದಲ್ಲಿ.  ಪ್ರಮುಖ ಆಟಗಾರರು ಇಲ್ಲದ ತಂಡವು ಬಲಾಢ್ಯ ಭಾರತದ ಆಟಕ್ಕೆ ತಡೆಯೊಡ್ಡಲು ಹೆಣಗಾಡುತ್ತಿದೆ.

ಹೋದ ಪಂದ್ಯದ ಆರಂಭದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದರು. ಆದರೆ, ಮಧ್ಯಮ ಕ್ರಮಾಂಕವನ್ನು ಕಟ್ಟಿಹಾಕುವಲ್ಲಿ ವೈಫಲ್ಯ ಅನುಭವಿಸಿದ್ದರು.

ಅಲ್ಜರಿ ಜೋಸೆಫ್ ತಮ್ಮ ಪದಾರ್ಪಣೆಯ ಪಂದ್ಯದಲ್ಲಿ ಮೂರು ವಿಕೆಟ್ ಗಳಿಸಿ ಮಿಂಚಿದ್ದರು. ಮಿಗೆಲ್ ಕಮಿನ್ಸ್‌ ಕೂಡ ಮೂರು ವಿಕೆಟ್ ಪಡೆದಿದ್ದರು. ಎರಡನೇ ಇನಿಂಗ್ಸ್‌ನಲ್ಲಿಯೂ ಕಮಿನ್ಸ್ ಆರು ವಿಕೆಟ್ ಕಿತ್ತು ವಿಜೃಂಭಿಸಿದ್ದರು. ಆದರೆ, ಬ್ಯಾಟಿಂಗ್ ಪಡೆಯು ಅದರ ಲಾಭ ಪಡೆಯುವಲ್ಲಿ ಹಿನ್ನಡೆ ಅನುಭವಿಸಿತ್ತು. ಮೊದಲ ಇನಿಂಗ್ಸ್‌ಲ್ಲಿ ಕಾರ್ಲೋಸ್ ಬ್ರಾಥ್‌ವೈಟ್ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಡರೆನ್ ಬ್ರಾವೊ ಅರ್ಧಶತಕ ಗಳಿಸಿದ್ದರು. ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳು ಮಿಂಚಿರಲಿಲ್ಲ.

ನಾಲ್ಕನೇ ಪಂದ್ಯದಲ್ಲಿ ಗೆದ್ದು ಮುಂಬರುವ ಟ್ವೆಂಟಿ–20 ಸರಣಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ವಿಂಡೀಸ್ ಚಿತ್ತ ನೆಟ್ಟಿದೆ. ಜೇಸನ್ ಹೋಲ್ಡರ್ ಬಳಗವು ತನ್ನ ಬೌಲಿಂಗ್ ಶಕ್ತಿಯ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಭಾರತದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಅವರ ಮೇಲೆ ಇದೆ.

ತಂಡಗಳು
ಭಾರತ:
ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಕೆ.ಎಲ್. ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ,  ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಆರ್. ಅಶ್ವಿನ್, ಅಮಿತ್ ಮಿಶ್ರಾ, ರವೀಂದ್ರ ಜಡೇಜ, ಸ್ಟುವರ್ಟ್ ಬಿನ್ನಿ, ಭುವನೇಶ್ವರ್ ಕುಮಾರ, ಮಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಇಶಾಂತ್ ಶರ್ಮಾ

ವೆಸ್ಟ್ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರಾಥ್‌ವೈಟ್,  ಶಾಯ್ ಹೋಪ್, ಡರೆನ್ ಬ್ರಾವೊ, ಮರ್ಲಾನ್ ಸ್ಯಾಮುಯೆಲ್ಸ್, ಜರ್ಮೈನ್ ಬ್ಲ್ಯಾಕ್‌ವುಡ್, ರೋಸ್ಟನ್ ಚೇಸ್, ಲಿಯೊನ್ ಜಾನ್ಸನ್,  ಶೇನ್ ಡೋರಿಚ್ (ವಿಕೆಟ್‌ಕೀಪರ್, ದೇವೆಂದ್ರ ಬಿಷೂ, ಕಾರ್ಲೋಸ್ ಬ್ರಾಥ್‌ವೈಟ್, ಶಾನನ್ ಗ್ಯಾಬ್ರಿಯೆಲ್, ಮಿಗೆಲ್ ಕಮಿನ್ಸ್, ಅಲ್ಜರಿ ಜೋಸೆಫ್

ಪಂದ್ಯದ ಆರಂಭ: ಸಂಜೆ 7.30 (ಭಾರತೀಯ ಕಾಲಮಾನ)
ನೇರಪ್ರಸಾರ: ಟೆನ್ ಸ್ಪೋರ್ಟ್ಸ್

ಮುಖ್ಯಾಂಶಗಳು
* ಸರಣಿಯಲ್ಲಿ 2–0ರಿಂದ ಮುನ್ನಡೆ ಹೊಂದಿರುವ ಭಾರತ ತಂಡ
* ಆರ್‌. ಅಶ್ವಿನ್‌ ಉತ್ತಮ ಲಯದಲ್ಲಿದ್ದಾರೆ.
* ಇದು ಕೊನೆಯ ಟೆಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT