ADVERTISEMENT

ಮತ್ತೊಂದು ಜಯದ ಮೇಲೆ ಇಂಗ್ಲೆಂಡ್‌ ಕಣ್ಣು

ನ್ಯೂಜಿಲೆಂಡ್ ವಿರುದ್ಧ ಹಣಾಹಣಿ ಇಂದು

ಪಿಟಿಐ
Published 5 ಜೂನ್ 2017, 19:30 IST
Last Updated 5 ಜೂನ್ 2017, 19:30 IST
ಸೋಮವಾರ ಮಳೆ ಸುರಿದಿದ್ದರಿಂದ ಇಂಗ್ಲೆಂಡ್ ಆಟಗಾರರು ಒಳಾಂಗಣದಲ್ಲಿ ಅಭ್ಯಾಸ ನಡೆಸಿದರು.
ಸೋಮವಾರ ಮಳೆ ಸುರಿದಿದ್ದರಿಂದ ಇಂಗ್ಲೆಂಡ್ ಆಟಗಾರರು ಒಳಾಂಗಣದಲ್ಲಿ ಅಭ್ಯಾಸ ನಡೆಸಿದರು.   

ಕಾರ್ಡಿಫ್‌: ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಇಂಗ್ಲೆಂಡ್‌ ತಂಡದವರು ಈ ಹಾದಿಯಲ್ಲಿ ಮತ್ತೊಂದು ಸವಾಲಿಗೆ ಸಜ್ಜಾಗಿದ್ದಾರೆ.

ಮಂಗಳವಾರ ನಡೆಯುವ ‘ಎ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ಆಂಗ್ಲರ ನಾಡಿನ ತಂಡ ಬಲಿಷ್ಠ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ.

ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ 306 ರನ್‌ಗಳ ಗುರಿ ಬೆನ್ನಟ್ಟಿ ಗೆಲುವು ಪಡೆದಿದ್ದ ಎಯೊನ್‌ ಮಾರ್ಗನ್‌ ಪಡೆ, ಕಿವೀಸ್ ನಾಡಿನ ತಂಡವನ್ನು ಸೋಲಿಸಿ ಸೆಮಿಫೈನಲ್‌ ಸ್ಥಾನ ಖಚಿತ ಪಡಿಸಿಕೊಳ್ಳುವ ವಿಶ್ವಾಸ ಹೊಂದಿದೆ.

ADVERTISEMENT

ಜೋ ರೂಟ್‌, ಅಲೆಕ್ಸ್‌ ಹೇಲ್ಸ್‌ ಮತ್ತು ನಾಯಕ ಮಾರ್ಗನ್‌ ಅವರು ಬ್ಯಾಟಿಂಗ್‌ ನಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ. ಬಾಂಗ್ಲಾ ವಿರುದ್ಧದ ಹೋರಾಟದಲ್ಲಿ ರೂಟ್‌ 129 ಎಸೆತಗಳಲ್ಲಿ ಅಜೇಯ 133ರನ್‌ ಗಳಿಸಿದ್ದರೆ, 86 ಎಸೆತಗಳನ್ನು ಎದುರಿಸಿದ್ದ ಹೇಲ್ಸ್‌ 95ರನ್‌ ಬಾರಿಸಿ ತವರಿನ ಅಭಿಮಾನಿಗಳನ್ನು ರಂಜಿಸಿದ್ದರು. ನಾಯಕ ಮಾರ್ಗನ್‌ ಕೂಡ 61 ಎಸೆತಗಳಲ್ಲಿ ಅಜೇಯ 75ರನ್‌ ದಾಖಲಿಸಿದ್ದರು.

ಉತ್ತಮ ಲಯದಲ್ಲಿರುವ ಇವರು ನ್ಯೂಜಿಲೆಂಡ್‌ ತಂಡದ ಬೌಲಿಂಗ್‌ ಶಕ್ತಿಗೆ ಪೆಟ್ಟು ನೀಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಐಪಿಎಲ್‌ ಹತ್ತನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದಿದ್ದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌, ಜೊಸ್‌ ಬಟ್ಲರ್‌ ಮತ್ತು ಮೋಯಿನ್‌ ಅಲಿ ಅವರೂ  ಆತಿಥೇಯರ ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬಬಲ್ಲವರಾಗಿದ್ದಾರೆ.

ಆದರೆ ಆರಂಭಿಕ ಆಟಗಾರ ಜೇಸನ್‌ ರಾಯ್‌ ಅವರ ವೈಫಲ್ಯ ನಾಯಕ ಮಾರ್ಗನ್‌ ಚಿಂತೆಗೆ ಕಾರಣವಾಗಿದೆ. ಬಲಗೈ ಬ್ಯಾಟ್ಸ್‌ಮನ್‌ ಜೇಸನ್‌, ಬಾಂಗ್ಲಾ ಎದುರು ಎಂಟು ಎಸೆತಗಳಲ್ಲಿ ಒಂದು ರನ್‌ ಗಳಿಸಿ ಔಟಾಗಿದ್ದರು.

ಬೌಲಿಂಗ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡ ಇನ್ನಷ್ಟು ಪರಿಣಾಮಕಾರಿಯಾಗಿ ಆಡುವುದು ಅಗತ್ಯ. ಲಿಯಾಮ್‌ ಫ್ಲಂಕೆಟ್‌  (59ಕ್ಕೆ4) ಬಾಂಗ್ಲಾ ವಿರುದ್ಧ ಮಿಂಚಿದ್ದರು. ಆದರೆ ಮೋಯಿನ್‌ ಅಲಿ ಮತ್ತು ಮಾರ್ಕ್‌ವುಡ್‌ ವಿಕೆಟ್‌ ಉರುಳಿಸಲು ವಿಫಲರಾಗಿದ್ದರು. ಜೇಕ್‌ ಬಾಲ್‌ 10 ಓವರ್‌ ಬೌಲ್‌ ಮಾಡಿ 82ರನ್‌ ಬಿಟ್ಟುಕೊಟ್ಟಿದ್ದರು.

ಬಾಂಗ್ಲಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಆಲ್‌ರೌಂಡರ್‌ ಕ್ರಿಸ್‌ ವೋಕ್ಸ್‌ ಅವರು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಸ್ಟೀವನ್‌ ಫಿನ್‌ ಅವಕಾಶ ಪಡೆದಿದ್ದು ಅವರಿಗೆ ಆಡುವ ಬಳಗದಲ್ಲಿ ಸ್ಥಾನ ಸಿಗುವ ನಿರೀಕ್ಷೆ ಇದೆ.

ಕೇನ್‌ ಬಳಗಕ್ಕೆ ಗೆಲುವಿನ ತವಕ: ನ್ಯೂಜಿಲೆಂಡ್‌ ತಂಡ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಕೇನ್‌ ವಿಲಿ ಯಮ್ಸನ್‌ ಬಳಗ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ಮಳೆಯ ಕಾರಣ ಪಂದ್ಯ ರದ್ದಾಗಿದ್ದರಿಂದ ಈ ಕನಸು ಕೈಗೂಡಿರಲಿಲ್ಲ. ನಾಯಕ ವಿಲಿಯಮ್ಸನ್‌, ಮಾರ್ಟಿನ್‌ ಗಪ್ಟಿಲ್‌, ಲೂಕ್‌ ರೊಂಚಿ ಮತ್ತು ರಾಸ್‌ ಟೇಲರ್‌ ಅವರು ಲಯದಲ್ಲಿರು ವುದು ಕಿವೀಸ್‌ ನಾಡಿನ ತಂಡಕ್ಕೆ ವರವಾಗಿ ಪರಿಣಮಿಸಿದೆ.

ಬಲಗೈ ಬ್ಯಾಟ್ಸ್‌ಮನ್‌ ವಿಲಿಯಮ್ಸನ್‌ , ಕಾಂಗರೂಗಳ ನಾಡಿನ ತಂಡದ ವಿರುದ್ಧ ಶತಕ ಸಿಡಿಸಿ ಸಂಭ್ರಮಿಸಿದ್ದರು. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರೊಂಚಿ ಅರ್ಧ ಶತಕ ದಾಖಲಿಸಿ ಎದುರಾಳಿ ಬೌಲರ್‌ ಗಳನ್ನು ಕಾಡಿದ್ದರು. ಗಪ್ಟಿಲ್‌ ಮತ್ತು ಟೇಲರ್‌ ಅವರೂ ಮಿಂಚಿದ್ದರು.

ಎಂತಹುದೇ ಸಂದರ್ಭದಲ್ಲೂ ನಿರ್ಭೀತಿಯಿಂದ ಆಡುವ ಸಾಮರ್ಥ್ಯ ಹೊಂದಿರುವ ಇವರು ಏಕಾಂಗಿಯಾಗಿ ಪಂದ್ಯ ಗೆದ್ದುಕೊಡಬಲ್ಲರು. ನಿಯೆಲ್‌ ಬ್ರೂಮ್‌, ಜೇಮ್ಸ್‌ ನೀಶಮ್ ಮತ್ತು ಕೋರಿ ಆ್ಯಂಡರ್‌ಸನ್‌ ಅವರೂ ಇಂಗ್ಲೆಂಡ್‌ ಬೌಲರ್‌ಗಳನ್ನು ಕಾಡುವ ಸಮರ್ಥರಾಗಿದ್ದಾರೆ.

ಬೌಲಿಂಗ್‌ನಲ್ಲೂ ಕಿವೀಸ್‌ ನಾಡಿನ ತಂಡ ಬಲಯುತವಾಗಿದೆ. ಹೊಸ ಚೆಂಡಿ ನೊಂದಿಗೆ ದಾಳಿಗಿಳಿಯುವ ಅನುಭವಿ ವೇಗಿ ಟಿಮ್‌ ಸೌಥಿ ಮತ್ತು  ಟ್ರೆಂಟ್‌ ಬೌಲ್ಟ್‌ ಅವರು ಆರಂಭದಲ್ಲೇ ಎದುರಾಳಿಗಳ ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿ ತಂಡಕ್ಕೆ ಮೇಲುಗೈ ತಂದುಕೊಡಬಲ್ಲರು.
ಆ್ಯಡಮ್‌ ಮಿಲ್ನೆ ಅವರೂ ಎದುರಾಳಿ ಆಟಗಾರರ ರನ್‌ ಗಳಿಕೆಗೆ ಕಡಿವಾಣ ಹಾಕಬಲ್ಲರು.
ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.