ADVERTISEMENT

ಮಧ್ಯಮ ಕ್ರಮಾಂಕದ ಕೊಡುಗೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:30 IST
Last Updated 19 ಫೆಬ್ರುವರಿ 2011, 18:30 IST

ಮಂಗಳೂರು: ‘ವಿಶ್ವಕಪ್ ಗೆದ್ದ 1996ರ ಶ್ರೀಲಂಕಾ ತಂಡಕ್ಕೂ, ಈಗಿನ ಶ್ರೀಲಂಕಾ ತಂಡಕ್ಕೂ ಹೋಲಿಕೆ ಮಾಡಲಾಗದು. ಈಗಿನ ತಂಡ ಉತ್ತಮ ಸಾಧನೆ ತೋರಬೇಕಾದರೆ ಅನುಭವಿಗಳಾದ ಕುಮಾರ ಸಂಗಕ್ಕಾರ ಮತ್ತು ಮಹೇಲಾ ಜಯವರ್ಧನ ಜತೆಗೆ ಮಧ್ಯಮ ಕ್ರಮಾಂಕದಿಂದ ಉಪಯುಕ್ತ ಕೊಡುಗೆ ಬರಬೇಕಿದೆ’....

-ಇದು ಶ್ರೀಲಂಕಾ ತಂಡದ ಮಾಜಿ ಕ್ಯಾಪ್ಟನ್ ಹಾಗೂ 1996ರ ವಿಶ್ವಕಪ್ ವಿಜೇತ ತಂಡದ ಮ್ಯಾನೇಜರ್ ದುಲೀಪ್ ಮೆಂಡಿಸ್ ಅವರ ಅಭಿಪ್ರಾಯ.ಮಂಗಳೂರು ಸಮೀಪದ ದೇರಳಕಟ್ಟೆಯಲ್ಲಿ ಶುಕ್ರವಾರ ಯೇನಪೋಯ ವಿವಿಯ ಒಳಾಂಗಣ ಕ್ರೀಡಾಂಗಣ ಸಂಕೀರ್ಣ ‘ಎಂಡ್ಯೂರೆನ್ಸ್ ರೆನ್’ ಉದ್ಘಾಟನೆಗೆ ಬಂದಿದ್ದ ಅವರು ಪತ್ರಕರ್ತರ ಜತೆ ಮಾತನಾಡಿದರು.

‘ನಾವು ವಿಶ್ವಕಪ್ ಗೆದ್ದಾಗ ತಂಡ ಉತ್ತಮವಾಗಿತ್ತು. ಸನತ್ ಜಯಸೂರ್ಯ, ಅಸಾಂಕ ಗುರುಸಿಂಘೆ, ಅರವಿಂದ ಡಿಸಿಲ್ವಾ, ಹಶನ್ ತಿಲಕರತ್ನೆ ಮೊದಲಾದವರು ಉತ್ತಮ ಕೊಡುಗೆ ನೀಡಿದ್ದರು. ಬೌಲಿಂಗ್‌ನಲ್ಲಿ ವಾಸ್, ಮುರಳೀಧರನ್ ಇದ್ದರು.ಎಲ್ಲಕ್ಕಿಂತ ಮುಖ್ಯವಾಗಿ ರಣತುಂಗ ಚಾಣಾಕ್ಷ ನಾಯಕನಾಗಿದ್ದರು’ ಎಂದು ಮೆಂಡಿಸ್ ನೆನಪಿಸಿಕೊಂಡರು.ಅನುಭವಿ ಜಯಸೂರ್ಯ ಅವರನ್ನು ಈ ಬಾರಿ ಕಡೆಗಣಿಸಿದ ಬಗ್ಗೆ ಕೇಳಿದಾಗ ‘ದಯವಿಟ್ಟು ಆ ಬಗ್ಗೆ ಮಾತು ಬೇಡ.ಆಯ್ಕೆಗಾರರು ತಂಡವನ್ನು ಅಳೆದು ತೂಗಿ ಆಯ್ಕೆ ಮಾಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಉಪಖಂಡದಲ್ಲಿ ಮತ್ತೆ ವಿಶ್ವಕಪ್ ನಡೆಯುವುದು ಶ್ರೀಲಂಕಾಕ್ಕೆ ಅನುಕೂಲವಾಗಬಹುದು.ಇಲ್ಲಿನ ವಾತಾವರಣ, ನಿಧಾನಗತಿಯ ಪಿಚ್‌ಗೆ ಹೊಂದಿಕೊಳ್ಳುವುದು ಕಷ್ಟವಾಗದು, ಭಾರತ, ಪಾಕಿಸ್ತಾನಗಳಲ್ಲಿ ಶ್ರಿಲಂಕಾ ತಂಡ ಸಾಕಷ್ಟು ಆಡಿದೆ’ ಎಂದು ಹೇಳಿದರು.

‘ಈ ಬಾರಿ ಇಂಥ ತಂಡವೇ ವಿಶ್ವಕಪ್ ಗೆಲ್ಲುತ್ತದೆ ಎಂದು ಹೇಳುವುದು ಕಷ್ಟ. ಭಾರತ, ಶ್ರೀಲಂಕಾ ಜತೆ, ಇತ್ತೀಚೆಗೆ ಇಂಗ್ಲೆಂಡನ್ನು ಬಗ್ಗುಬಡಿದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕ ಕೂಡ ಉತ್ತಮ ಸಾಧನೆ ತೋರಿವೆ’ ಎನ್ನುವುದು 59 ವರ್ಷದ ಮೆಂಡಿಸ್ ವಿಶ್ಲೇಷಣೆ.ಟ್ವೆಂಟಿ-20 ಮಾದರಿಯ ಕ್ರಿಕೆಟ್ ಸಾಂಪ್ರದಾಯಿಕ ಕ್ರಿಕೆಟ್‌ಗೆ ಹಾನಿ ಉಂಟು ಮಾಡುತ್ತಿದೆಯೇ? ಎಂಬ ಪ್ರಶ್ನೆಗೆ ಮಂದಹಾಸವೇ ಉತ್ತರವಾಗಿತ್ತು. ‘ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ.ನಾನೂ ಟ್ವೆಂಟಿ-20 ಪಂದ್ಯಗ ಳನ್ನು ನೋಡುತ್ತೇನೆ’ ಎಂದರು.

ಮೆಂಡಿಸ್ ವಿಶೇಷ
ಭಾರತ ವಿರುದ್ಧ 1982ರ ಪ್ರವಾಸದಲ್ಲಿ ಚೆನ್ನೈನ ಟೆಸ್ಟ್ ಪಂದ್ಯವೊಂದರ ಎರಡೂ ಇನಿಂಗ್ಸ್‌ಗಳಲ್ಲಿ ಮೆಂಡಿಸ್ ಶತಕ ಬಾರಿಸಿದ್ದರು. ‘ಆ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ನಾನು 105 ರನ್ನಿಗೆ ಔಟ್ ಆಗಿದ್ದೆ. ಆದರೆ ಅದು ಕಾಕತಾಳೀಯ. ಚಿಪಾಕ್ ಪರಿಸರ ನಮಗೆ ಹೊಸದಾಗಿರಲಿಲ್ಲ. ಸಾಕಷ್ಟು ಆಡಿದ ಅನುಭವವಿತ್ತು.

ಎಂ.ಜೆ.ಗೋಪಾಲನ್ ಟ್ರೋಫಿ ಕ್ರಿಕೆಟ್ (ಲಂಕಾ -ತಮಿಳುನಾಡು ತಂಡದ ನಡುವೆ ಹಿಂದೆ ನಡೆಯುತ್ತಿತ್ತು) ಟೂರ್ನಿಗಾಗಿ ನಾವು ಚೆನ್ನೈಗೆ ಬರುತ್ತಿದ್ದುದು ಆಗ ಸಾಮಾನ್ಯವಾಗಿತ್ತು’ ಎಂದು ಅವರು ಹಳೆಯ ದಿನಗಳನ್ನು ನೆನಪಿಸಿಕೊಂಡರು.1952ರಲ್ಲಿ ಆರಂಭವಾದ ವರ್ಷಕ್ಕೆರಡು ಬಾರಿ ನಡೆಯುತ್ತಿದ್ದ ಗೋಪಾಲನ್ ಟ್ರೋಫಿ, 1983ರಲ್ಲಿ ನಿಂತುಹೋಗಿತ್ತು. ಮೆಂಡಿಸ್ 24 ಟೆಸ್ಟ್ ಆಡಿದ್ದು, 4 ಶತಕ ಬಾರಿಸಿದ್ದಾರೆ. 3 ಶತಕ ಭಾರತದ ವಿರುದ್ಧ ಬಂದಿವೆ.79 ಏಕದಿನ ಪಂದ್ಯಗಳಲ್ಲಿ 1527 ರನ್ (ಸರಾಸರಿ: 23.49) ಬಾರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.