ADVERTISEMENT

ಮಧ್ಯಮ ಕ್ರಮಾಂಕ ಬಲಿಷ್ಠವಾಗಬೇಕು: ಹಾಡ್ಜ್‌

ಪಿಟಿಐ
Published 9 ಮೇ 2018, 20:21 IST
Last Updated 9 ಮೇ 2018, 20:21 IST
ಕೆ.ಎಲ್‌.ರಾಹುಲ್‌
ಕೆ.ಎಲ್‌.ರಾಹುಲ್‌   

ಜೈಪುರ: ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲಗೊಳ್ಳದೆ ತಂಡ ಉತ್ತಮ ಮೊತ್ತ ಕಲೆ ಹಾಕಲು ಸಾಧ್ಯವಿಲ್ಲ ಎಂದು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕೋಚ್‌ ಬ್ರಾಡ್ ಹಾಡ್ಜ್‌ ಅಭಿಪ್ರಾಯಪಟ್ಟರು.

‘ಬಹುತೇಕ ತಂಡಗಳು ಆರಂಭಿಕ ಜೋಡಿಯನ್ನೇ ನೆಚ್ಚಿಕೊಂಡಿವೆ. ನಮ್ಮ ತಂಡದ್ದೂ ಅದೇ ಸ್ಥಿತಿಯಾಗಿದೆ. ಕ್ರಿಸ್‌ ಗೇಲ್‌ ಮತ್ತು ಕೆ.ಎಲ್‌.ರಾಹುಲ್ ಅವರ ಮೇಲೆ ಹೆಚ್ಚು ಹೊರೆ ಹಾಕಿರುವ ತಂಡದ ಮಧ್ಯಮ ಕ್ರಮಾಂಕ ಜವಾಬ್ದಾರಿ ಮೆರೆಯಬೇಕಾಗಿದೆ’ ಎಂದು ಅವರು ಹೇಳಿದರು.

ಮಂಗಳವಾರ ರಾತ್ರಿ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ತಂಡದ ಸೋತ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಪಂದ್ಯದಲ್ಲಿ ರಾಹುಲ್‌ ಏಕಾಂಗಿ ಹೋರಾಟ ನಡೆಸಿದ್ದರು. ತಂಡ 15 ರನ್‌ಗಳಿಂದ ಸೋತಿತ್ತು.

ADVERTISEMENT

‘ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅವರೊಂದಿಗೆ ಗೇಲ್ ಕೂಡ ಮಿಂಚಿದರೆ ಯಾವುದೇ ತಂಡವನ್ನು ಸೋಲಿಸಲು ಸಾಧ್ಯ. ತಂಡದಲ್ಲಿ ಅತ್ಯುತ್ತಮ ಆಟಗಾರರು ಇದ್ದಾರೆ. ಅವರೆಲ್ಲರೂ ಮಿಂಚಬೇಕಾದ ಅನಿವಾರ್ಯ ಸ್ಥಿತಿ ಈಗ ಎದುರಾಗಿದೆ’ ಎಂದು ಹೇಳಿದರು.

‘ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಹುಲ್ ಒಬ್ಬರೇ ಹೋರಾಡಿದರು. ಅವರಿಗೆ ಬೆಂಬಲ ನೀಡಲು ಯಾರೂ ಇರಲಿಲ್ಲ. ಮುಂದಿನ ಪಂದ್ಯಗಳಲ್ಲಿ ಇಂಥ ಸ್ಥಿತಿ ಮುಂದುವರಿಯಬಾರದು’ ಎಂದು ಹೇಳಿದ ಅವರು ರಾಹುಲ್‌ ಸಂದರ್ಭಕ್ಕೆ ತಕ್ಕಂತೆ ಆಡುವ ಕಲೆಯನ್ನು ರೂಢಿಸಿಕೊಂಡಿದ್ದಾರೆ, ಸನ್‌ರೈಸರ್ಸ್ ವಿರುದ್ಧ ಅವರು ಸ್ವಲ್ಪ ಎಡವಿದ್ದರೆ ಜಯದ ಸನಿಹ ತಲುಪಲು ತಂಡಕ್ಕೆ ಸಾಧ್ಯವಾಗುತ್ತಿರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.