ರಿಯೊ ಡಿ ಜನೈರೊ (ಪಿಟಿಐ): ಭಾರತದ ಮನೋಜ್ ಕುಮಾರ್ ಒಲಿಂಪಿಕ್ಸ್ ಬಾಕ್ಸಿಂಗ್‌ನ ಪುರುಷರ 64 ಕೆ.ಜಿ. ವಿಭಾಗದಲ್ಲಿ ಶುಭಾರಂಭ ಮಾಡಿದ್ದು, ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬುಧವಾರ ರಾತ್ರಿ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ ಮನೋಜ್ ಅವರು ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ಲಿಥುವೇನಿಯದ ಎವಾಲ್ಡಸ್ ಪೆಟ್ರಾಸ್ಕಸ್ ಅವರಿಗೆ ಆಘಾತ ನೀಡಿದರು.
ಮನೋಜ್ ಮೂರು ಸುತ್ತುಗಳಲ್ಲೂ ಎವಾಲ್ಡಸ್ ಅವರಿಂದ ಪ್ರಬಲ ಪೈಪೋಟಿ ಎದುರಿಸಿದರು. ಆದರೂ 2–1 ರಲ್ಲಿ ಗೆದ್ದು ಮುಂದಿನ ಹಂತ ಪ್ರವೇಶಿಸಿದರು.
ಕಾಮನ್‌ವೆಲ್ತ್ ಕೂಟದ ಚಿನ್ನದ ಪದಕ ವಿಜೇತ ಮನೋಜ್ ಭಾನುವಾರ ನಡೆಯಲಿರುವ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉಜ್ಬೆಕಿಸ್ತಾನದ ಫಜಲಿ ದ್ದೀನ್ ಗೈಬನಜರೋವ್ ಅವರ ಸವಾಲು ಎದುರಿಸಲಿದ್ದಾರೆ.
ಬುಧವಾರ ನಡೆದ ಹಣಾಹಣಿಯಲ್ಲಿ ಮನೋಜ್ ಮತ್ತು ಎವಾಲ್ಡಸ್ ಭಿನ್ನ ತಂತ್ರಗಳ ಮೊರೆ ಹೋದರು. ಲಂಡನ್ ಕೂಟದಲ್ಲಿ ಲೈಟ್‌ವೇಟ್ (60 ಕೆ.ಜಿ) ವಿಭಾಗದಲ್ಲಿ ಸ್ಪರ್ಧಿಸಿದ್ದ ಎವಾಲ್ಡಸ್ ಭಾರತದ ಬಾಕ್ಸರ್ ಗೆ ತೀರ ಹತ್ತಿರದಿಂದ ‘ಪಂಚ್’ ಮಾಡಲು ಪ್ರಯತ್ನಿಸಿದರು.
ಆದರೆ ಮನೋಜ್ ಸ್ವಲ್ಪ ಅಂತರ ಕಾಯ್ದು ಕೊಂಡು ‘ಪಂಚ್’ ಮಾಡಲು ಮುಂದಾದರು. ಮೊದಲ ಸುತ್ತಿನಲ್ಲಿ ಮನೋಜ್ ತಂತ್ರ ಫಲಿಸಿದ್ದರಿಂದ ತೀರ್ಪುಗಾರರು ಅವರ ಪರವಾಗಿ ಪಾಯಿಂಟ್ ನೀಡಿದರು.
ಎರಡನೇ ಸುತ್ತಿನಲ್ಲೂ ಎವಾಲ್ಡಸ್ ಆಕ್ರಮಣಕಾರಿ ಪ್ರದರ್ಶನ ಮುಂದುವರಿಸಿದರು. ಮನೋಜ್ ಹೆಚ್ಚಿನ ಅಂತರ ಕಾಯ್ದು ಕೊಂಡು ಎದು ರಾಳಿಯ ಪಂಚ್‌ನಿಂದ ತಪ್ಪಿಸಿಕೊಳ್ಳುತ್ತಿದ್ದರು.
ಕೊನೆಯ ಸುತ್ತಿನಲ್ಲೂ ತಮ್ಮ ತಂತ್ರಗಳನ್ನು ಬದಲಾಯಿಸಲು ಇಬ್ಬರು ಬಾಕ್ಸರ್‌ಗಳೂ ಮುಂದಾಗಲಿಲ್ಲ. ಎವಾಲ್ಡಸ್ ಒಂದೆರಡು ಪಂಚ್‌ಗಳನ್ನು ನೀಡಿದರೂ ಮನೋಜ್ ತಕ್ಷಣ ಸುಧಾರಿಸಿಕೊಂಡರು. ತೀರ್ಪುಗಾರರು ಅಂತಿಮವಾಗಿ ಮನೋಜ್ ಅವರನ್ನು ವಿಜಯಿ ಎಂದು ಪ್ರಕಟಿಸಿದರು.
‘ಕಳೆದ 20 ವರ್ಷಗಳಿಂದ ಕಠಿಣ ಪರಿಶ್ರಮ ಪಡುತ್ತಿದ್ದೇನೆ. ಆ ಪರಿಶ್ರಮಕ್ಕೆ ದೊರೆತ ಫಲ ಇದು’ ಎಂದು ಮನೋಜ್ ಪ್ರತಿಕ್ರಿಯಿಸಿದ್ದಾರೆ.
ಶಿವ ಥಾಪಾಗೆ ನಿರಾಸೆ
ಹೋದ ವರ್ಷ ವಿಶ್ವ ಅಮೆಚೂರ್ ಬಾಕ್ಸಿಂಗ್‌ನಲ್ಲಿ ಕಂಚು ಜಯಿಸಿದ್ದ ಭಾರತದ ಯುವ ಬಾಕ್ಸರ್ ಶಿವ ಥಾಪಾ ಇಲ್ಲಿ ಮೊದಲ ಸುತ್ತಿನಲ್ಲಿಯೇ ಸೋತರು.
56 ಕೆ.ಜಿಯ ಬಾಂಥಮ್‌ವೇಟ್ ವಿಭಾಗದಲ್ಲಿ ಅವರು 0–3ರಲ್ಲಿ ಕ್ಯೂಬಾದ ಒಬೆಯಿಸೆ ರಮಿರೆಜ್ ವಿರುದ್ಧ ಮಣಿದರು.
ಲಂಡನ್ ಒಲಿಂಪಿಕ್ಸ್ ನಲ್ಲಿಯೂ ಅವರು ಮೊದಲ ಸುತ್ತಿನಲ್ಲಿಯೇ ನಿರಾಸೆ ಕಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.