ADVERTISEMENT

ಮಹಮ್ಮಡನ್‌ಗೆ ಅಗ್ರಸ್ಥಾನ

ಐ ಲೀಗ್ ಫುಟ್‌ಬಾಲ್ ಎರಡನೇ ಡಿವಿಷನ್: ಟೈಗರ್ಸ್‌ಗೆ ಆಘಾತ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST
ರಂಗದೇಜಿದ್ ಯುನೈಟೆಡ್ ಕ್ಲಬ್ ತಂಡದ ಎ. ಬಾಬಾತುಂದೆ ಅಯೊಮಿಡೆ (ಬಲಬದಿ) ಅವರು ಮಹಮ್ಮಡನ್ ಸ್ಪೋರ್ಟಿಂಗ್ ವಿರುದ್ಧದ ಪಂದ್ಯದಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆಯಲು ಪ್ರಯತ್ನಿಸಿದ ರೀತಿ	-ಪ್ರಜಾವಾಣಿ ಚಿತ್ರ
ರಂಗದೇಜಿದ್ ಯುನೈಟೆಡ್ ಕ್ಲಬ್ ತಂಡದ ಎ. ಬಾಬಾತುಂದೆ ಅಯೊಮಿಡೆ (ಬಲಬದಿ) ಅವರು ಮಹಮ್ಮಡನ್ ಸ್ಪೋರ್ಟಿಂಗ್ ವಿರುದ್ಧದ ಪಂದ್ಯದಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆಯಲು ಪ್ರಯತ್ನಿಸಿದ ರೀತಿ -ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಹಮ್ಮಡನ್ ಸ್ಪೋರ್ಟಿಂಗ್ ತಂಡ ಐ ಲೀಗ್ ಫುಟ್‌ಬಾಲ್ ಟೂರ್ನಿಯ ಎರಡನೇ ಡಿವಿಷನ್‌ನ ಅಂತಿಮ ಹಂತದ ಸೋಮವಾರದ ಪಂದ್ಯದಲ್ಲಿ 1-0ಗೋಲುಗಳಿಂದ ರಂಗದೇಜಿದ್ ಯುನೈಟೆಡ್ ಕ್ಲಬ್ ಎದುರು ಗೆಲುವು ಸಾಧಿಸಿತು. ಈ ಮೂಲಕ ಮಹಮ್ಮಡನ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಅಶೋಕನಗರದಲ್ಲಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತದ ಮಹಮ್ಮಡನ್ ತಂಡದ ಜೆರ್ರಿ ಜಿರ್‌ಸಿಂಗ್ 50ನೇ ನಿಮಿಷದಲ್ಲಿ ಗೋಲು ಗಳಿಸಿ ಜಯ ತಂದುಕೊಟ್ಟರಲ್ಲದೇ, ಗೆಲುವಿನ ರೂವಾರಿ ಎನಿಸಿದರು.

ಮಹಮ್ಮಡನ್ ನಾಲ್ಕು ಪಂದ್ಯಗಳನ್ನಾಡಿದ್ದು ಹತ್ತು ಅಂಕಗಳನ್ನು ಕಲೆ ಹಾಕಿದೆ. ಈ ತಂಡಕ್ಕೆ ಇನ್ನೊಂದು ಪಂದ್ಯ ಬಾಕಿಯಿದೆ.

ಮುಂದಿನ ಪಂದ್ಯದಲ್ಲೂ ಕೋಲ್ಕತ್ತದ ತಂಡ ಗೆಲುವು ಸಾಧಿಸಿದರೆ, ಐ ಲೀಗ್ ಮೊದಲ ಡಿವಿಷನ್‌ಗೆ ಅರ್ಹತೆ ಗಳಿಸಲಿದೆ.

ಸದರ್ನ್ ಸಮಿತಿ ಹಾಗೂ ಲ್ಯಾಂಗ್‌ಸ್ನಿಂಗ್ ಫುಟ್‌ಬಾಲ್ ಕ್ಲಬ್ ತಂಡಗಳನ್ನು ಹೊರತು ಪಡಿಸಿ ಉಳಿದ ತಂಡಗಳು ತಲಾ ನಾಲ್ಕು ಪಂದ್ಯಗಳನ್ನಾಡಿವೆ. ರಂಗದೇಜಿದ್ ನಾಲ್ಕು ಪಾಯಿಂಟ್‌ಗಳನ್ನು ಮಾತ್ರ ಹೊಂದಿದ್ದು ಐ ಲೀಗ್ ಪ್ರವೇಶಿಸುವ ಈ ತಂಡದ ಕನಸು ಅಸ್ತಮಿಸಿದೆ.

ಟೈಗರ್ಸ್‌ಗೆ ಆಘಾತ: ಬಲಿಷ್ಠ ಹಾಗೂ ರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಆಟಗಾರರನ್ನು ಒಳಗೊಂಡಿರುವ ಮುಂಬೈ ಟೈಗರ್ಸ್ ತಂಡ 2-3ಗೋಲುಗಳಿಂದ ಕೋಲ್ಕತ್ತದ ಭಾವನಿಪುರೆ ಎದುರು ಆಘಾತ ಅನುಭವಿಸಿತು.

ಸೋಮವಾರ ನಡೆದ ನಾಲ್ಕನೇ ಲೀಗ್ ಪಂದ್ಯದಲ್ಲಿ ಟೈಗರ್ಸ್ ತಂಡದ ದೆಂಬಾ ದಿಖಾತೆ 7ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇನ್ನೊಂದು ಗೋಲನ್ನು ಭಾರತ ತಂಡದ ಮಾಜಿ ಸ್ಟ್ರೈಕರ್ ಎನ್.ಪಿ. ಪ್ರದೀಪ್ 62ನೇ ನಿಮಿಷದಲ್ಲಿ ಗಳಿಸಿದರು.

ಆದರೆ, ಟೈಗರ್ಸ್ ತಂಡದವರ ಆಟಕ್ಕೆ ಭಾವನಿಪುರೆ ಪ್ರಬಲ ಪ್ರತಿರೋಧ ತೋರಿತು. ಹ್ಯಾಟ್ರಿಕ್ ಗೋಲುಗಳನ್ನು ಗಳಿಸಿದ ಜೋಸ್ ಬರೆಟೊ ಟೈಗರ್ಸ್ ಗೆಲುವಿನ ಆಸೆಗೆ ಅಡ್ಡಿಯಾದರು. ಬರೆಟೊ 26, 64 ಹಾಗೂ 84ನೇ ನಿಮಿಷದಲ್ಲಿ ಗೋಲುಗಳನ್ನು ತಂದಿತ್ತು ಗೆಲುವಿನ ರೂವಾರಿ ಎನಿಸಿದರು.

ಮಂಗಳವಾರ ಸದರ್ನ್ ಸಮಿತಿ ಹಾಗೂ ಲ್ಯಾಂಗ್‌ಸ್ಲಿಂಗ್ ಫುಟ್‌ಬಾಲ್ ಕ್ಲಬ್ ನಡುವೆ ಸಂಜೆ 4 ಗಂಟೆಗೆ ಪಂದ್ಯ ನಡೆಯಲಿದೆ.

ಉದ್ಯಾನಗರಿಯಲ್ಲಿ ನಡೆದ `ಸಿ' ಗುಂಪಿನ ಲೀಗ್ ಪಂದ್ಯಗಳಲ್ಲಿ ಸದರ್ನ್ ತಂಡ ಅಗ್ರಸ್ಥಾನ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.