ADVERTISEMENT

ಮಹಿಳೆಯರಿಗೆ ಈ ಪದಕ ಅರ್ಪಣೆ - ಮೇರಿ ಕೋಮ್

ಕೆ.ಓಂಕಾರ ಮೂರ್ತಿ
Published 16 ಆಗಸ್ಟ್ 2012, 19:30 IST
Last Updated 16 ಆಗಸ್ಟ್ 2012, 19:30 IST

ಬೆಂಗಳೂರು: `ನಾನು ಮದುವೆ ಆದಾಗಬಾಕ್ಸಿಂಗ್‌ಗೆ ವಿದಾಯ ಹೇಳಬೇಕೆಂಬ ಒತ್ತಡ ನನ್ನ ಕುಟುಂಬದಿಂದಲೇ ಬಂದಿತ್ತು. ಅದಕ್ಕೂ ನಾನು ಮಣಿದಿರಲಿಲ್ಲ. ಅವಳಿ ಮಕ್ಕಳಾದ ಬಳಿಕ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದೆ. ಆಗಲೂ ಬಾಕ್ಸಿಂಗ್ ತ್ಯಜಿಸು ಎಂದು ಒತ್ತಡ ಹೇರಿದ್ದರು. ಆದರೆ ದೊಡ್ಡ ಸಾಧನೆಯ ಭರವಸೆ ನೀಡಿ ಎಲ್ಲರ ಮನವೊಲಿಸಿದ್ದೆ. ಆ ಮಾತನ್ನು ಉಳಿಸಿಕೊಂಡಿದ್ದೇನೆ~

-ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಮೇರಿ ಕೋಮ್ ತಮ್ಮ ಬಾಕ್ಸಿಂಗ್ ಹಾದಿಯನ್ನು ಚುಟುಕಾಗಿ ತೆರೆದಿಟ್ಟ ಪರಿ ಇದು.

ಮೇರಿ ಕೇವಲ ಪುಟಾಣಿ ಮಕ್ಕಳ ತಾಯಿ ಅಷ್ಟೆ ಅಲ್ಲ, ಅದೆಷ್ಟೊ ಮಹಿಳೆಯರಿಗೆ ಸ್ಫೂರ್ತಿ. ಮದುವೆಯಾದ ಮೇಲೆ ಹೆಚ್ಚಿನ ಮಹಿಳೆಯರು ಕ್ರೀಡಾ ಕ್ಷೇತ್ರ ತೊರೆಯುತ್ತಾರೆ. ಅದರಲ್ಲೂ ಮಕ್ಕಳಾದರೆ ಮುಗಿಯಿತು. ಅಂಥದ್ದರಲ್ಲಿ ಅವಳಿ ಮಕ್ಕಳ ತಾಯಿ ಮೇರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಸಾಧನೆ ಅಮೋಘ. ಒಲಿಂಪಿಕ್ಸ್ ಸಿದ್ಧತೆಗಾಗಿ ಒಂದೂವರೆ ವರ್ಷದ ಅವಧಿಯಲ್ಲಿ 300 ದಿನ ತರಬೇತಿ ಹಾಗೂ ಸ್ಪರ್ಧೆ ಎಂದು ಕೋಮ್ ತಮ್ಮ ಪುಟ್ಟ ಮಕ್ಕಳಿಂದ ದೂರ ಉಳಿದಿದ್ದರು. ಆ ತ್ಯಾಗಕ್ಕೆ ಈಗ ಪ್ರತಿಫಲ ಸಿಕ್ಕಿದೆ.

29 ವರ್ಷ ವಯಸ್ಸಿನ ಮೇರಿಗೆ ಈಗ ಕೊಂಚವೂ ಬಿಡುವಿಲ್ಲ. ಸನ್ಮಾನ, ಅಭಿಮಾನಿಗಳ ಅಭಿನಂದನೆ ಸ್ವೀಕಾರ, ಪುಟ್ಟ ಮಕ್ಕಳ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ತವರೂರು ಮಣಿಪುರಕ್ಕೆ ಹೋಗಲೂ ಸಾಧ್ಯವಾಗಿಲ್ಲ. ತಮ್ಮ ಕನಸು ನನಸಾದ ರೀತಿ ಸೇರಿದಂತೆ ಹಲವು ವಿಷಯಗಳನ್ನು ಮೇರಿ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

* ಪದಕ ಗೆದ್ದ ಮೇಲೆ ಜೀವನ ಹೇಗಿದೆ?
ಇಡೀ ದೇಶ ನನಗೆ ಬೆಂಬಲ ವ್ಯಕ್ತಪಡಿಸುತ್ತಿದೆ. ನನ್ನ ಸಾಧನೆಯನ್ನು ಕೊಂಡಾಡುತ್ತಿದೆ. ಇದು ಕಂಚಿನ ಪದಕ ಗೆದ್ದ ಸಾಧನೆಗಿಂತ ಹೆಚ್ಚು ಖುಷಿ ನೀಡಿದೆ. ಬಾಕ್ಸಿಂಗ್ ಕ್ಷೇತ್ರಕ್ಕೆ ಹೋಗಬೇಡ ಎಂದಿದ್ದ ಪೋಷಕರು, ಪತಿ ಹಾಗೂ ಹಿತೈಷಿಗಳು ಈಗ ಸಂತೋಷದಿಂದ ಬೀಗುತ್ತಿದ್ದಾರೆ. ಲಂಡನ್‌ಗೆ ತೆರಳುವ ಮೊದಲೇ ನಾನು ಪದಕದ ಭರವಸೆ ನೀಡಿದ್ದೆ. ಆ ಮಾತನ್ನು ಉಳಿಸಿಕೊಂಡಿದ್ದೇನೆ.

* ಈ ಪದಕವನ್ನು ಯಾರಿಗೆ ಅರ್ಪಿಸುತ್ತೀರಿ?
ಇದು ಭಾರತೀಯ ನಾರಿಯರ ಪದಕ ಎಂದು ಒಲಿಂಪಿಕ್ಸ್ ವಿಜಯ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ನಾನು ಪ್ರತಿಕ್ರಿಯಿಸಿದ್ದೆ. ದೇಶದ ಮಹಿಳೆಯರಿಗೆ ಈ ಪದಕ ಅರ್ಪಣೆ. ಇಂತಹ ಸಾಧನೆ ಮಾಡುವ ಶಕ್ತಿ ಅದೆಷ್ಟೊ ಮಹಿಳೆಯರಿಗಿದೆ. ಆದರೆ ಆ ಹಾದಿಯಲ್ಲಿ ಎದುರಾಗುವ ಅಡತಡೆಗಳನ್ನು ಧೈರ್ಯದಿಂದ ದಾಟಿ ನಿಲ್ಲಬೇಕು ಅಷ್ಟೆ. ಮದುವೆಯಾದ ಮಾತ್ರಕ್ಕೆ ಕ್ರೀಡೆ ತೊರೆಯಬಾರದು. 

* ಅವಳಿ ಮಕ್ಕಳ ತಾಯಿಯಾಗಿ ಬಾಕ್ಸಿಂಗ್‌ನಂತಹ ಕಠಿಣ ಕ್ಷೇತ್ರದಲ್ಲಿ ಈ ಸಾಧನೆ ಮಾಡಿದ್ದೀರಿ. ಇಂತಹ ಸಾಧನೆ ಮಾಡಲು ಉಳಿದ ಮಹಿಳೆಯರಿಗೂ ಸಾಧ್ಯವೇ?
ನಾನು ಬಡಕುಟುಂಬದಿಂದಲೇ ಬೆಳೆದು ಬಂದವಳು. ನನಗೆ ಬಹುಮಾನ ರೂಪದಲ್ಲಿ ಈಗ ಸಾಕಷ್ಟು ಹಣ ಬರುತ್ತಿರಬಹುದು. ಆದರೆ ಬೆಳಿಗ್ಗೆ ಬೇಗ ಎದ್ದು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಸಂಜೆ ಮಕ್ಕಳು ಮನೆಗೆ ಬರುವ ಹಾದಿಯನ್ನು ಕಾಯುತ್ತಿರಬೇಕೆಂಬ ಆಸೆ ನನಗೂ ಇದೆ.
 
ತಾಯಿ ಸದಾ ತಮ್ಮ ಜೊತೆಗಿರುವುದನ್ನು ಮಕ್ಕಳೂ ಇಷ್ಟಪಡುತ್ತಾರೆ. ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ತುಡಿತವಿದೆ. ಆದರೆ ಇಷ್ಟಕ್ಕೆ ನಾನು ಬದ್ಧವಾಗಿದ್ದರೆ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದನ್ನು ಗಳಿಸಲು ಇನ್ನೊಂದನ್ನು ತ್ಯಜಿಸಬೇಕಾಗುತ್ತದೆ. 

* ಬಾಕ್ಸಿಂಗ್ ತ್ಯಜಿಸಲು ಒತ್ತಡ ಬಂದಿತ್ತು ಎಂದಿದ್ದೀರಿ. ಅದಕ್ಕೆ ಕಾರಣವೇನು?
ನಮ್ಮದು ಬುಡಕಟ್ಟು ಜನಾಂಗ. ಬಾಕ್ಸಿಂಗ್ ಏನು ಎಂಬುದೇ ಪೋಷಕರಿಗೆ ಗೊತ್ತಿರಲಿಲ್ಲ. ಇದರಲ್ಲಿ ಪಾಲ್ಗೊಳ್ಳುವುದರಿಂದ ನನ್ನನ್ನು ಯಾರೂ ಮದುವೆಯಾಗುವುದಿಲ್ಲ ಎಂಬ ಭಯ ತಂದೆಗಿತ್ತು. ಬಾಕ್ಸಿಂಗ್‌ನಲ್ಲಿ ಪಾಲ್ಗೊಳ್ಳುವುದರಿಂದ ನನ್ನ ರೂಪದ ಮೇಲೆ ಪರಿಣಾಮ ಬೀರಬಹುದು ಎಂಬುದು ಅವರ ಆತಂಕವಾಗಿತ್ತು. ಜೊತೆಗೆ ನಾನು ಬಾಕ್ಸರ್ ಆಗಿದ್ದನ್ನು ಕಂಡು ನನ್ನ ಸಂಬಂಧಿಗಳೇ ವ್ಯಂಗ್ಯವಾಡಿದ್ದರು. ವಿಶ್ವ ಚಾಂಪಿಯನ್ ಆದರೂ ಟೀಕೆ, ಮುಜುಗರ ತಪ್ಪಿರಲಿಲ್ಲ.

* ಮಕ್ಕಳಿಗೆ ನಿಮ್ಮ ಈ ಸಾಧನೆ ಅರ್ಥವಾಗಿದೆಯೇ?
ಅವರಿನ್ನೂ ತುಂಬಾ ಚಿಕ್ಕವರು. ಆಟಿಕೆ ತರುವುದಾಗಿ ಅವರಿಗೆ ಸುಳ್ಳು ಹೇಳಿ ಲಂಡನ್‌ಗೆ ತೆರಳಿದ್ದೆ. ಲಂಡನ್‌ನಲ್ಲಿದ್ದಾಗ ದಿನಕ್ಕೆ ನಾಲ್ಕು ಬಾರಿ ಕರೆ ಮಾಡುತ್ತಿದ್ದೆ. ಯಾವಾಗ ವಾಪಸ್ ಬರುತ್ತೀಯ ಎಂದು ಮಕ್ಕಳು ಕೇಳಿದಾಗಲೆಲ್ಲಾ ನನಗೆ ಕಣ್ಣೀರುಬರುತಿತ್ತು. ಅವರ ಐದನೇ ಹುಟ್ಟು ಹಬ್ಬವನ್ನೂ ನಾನು ತಪ್ಪಿಸಿಕೊಂಡೆ. 

* ಲಂಡನ್‌ನಿಂದ ಮಕ್ಕಳಿಗೆ ಏನು ಉಡುಗೊರೆ ತಂದಿದ್ದೀರಿ?

ಪದಕವೇ ದೊಡ್ಡ ಉಡುಗೊರೆ. ನನ್ನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಮಕ್ಕಳೂ ಬಂದಿದ್ದರು. ತಕ್ಷಣ ಅವರ ಕೊರಳಿಗೆ ಆ ಪದಕ ಹಾಕಿದೆ. ಇದು ಬೇಡ ಆಟಿಕೆ ಕೊಡು ಎಂದು ಕೇಳಿದರು. ಇಬ್ಬರಿಗೂ ಸ್ಪೈಡರ್‌ಮನ್ ಜಾಕೆಟ್, ಸ್ಕೇಟ್‌ಬೋರ್ಡ್ಸ್, ಕೇಕ್, ಚಾಕಲೇಟ್ ನೀಡಿದೆ.

* ಮಕ್ಕಳು ಕೂಡ ಬಾಕ್ಸರ್ ಆಗುವುದನ್ನು ಇಷ್ಟಪಡುತ್ತೀರಾ?
ನನ್ನ ಮಕ್ಕಳು ಬಾಕ್ಸರ್ ಆಗುವುದನ್ನು ನಾನು ಇಷ್ಟಪಡುವುದಿಲ್ಲ. ಆದರೆ ಅವರು ಇಷ್ಟಪಟ್ಟರೆ ಅದಕ್ಕೆ ನನ್ನ ಅಭ್ಯಂತರವಿಲ್ಲ.

* ಈಗ ಲಭಿಸಿರುವ ಬಹುಮಾನ ಹಣವನ್ನು ಏನು ಮಾಡಬೇಕು ಎಂದುಕೊಂಡಿದ್ದೀರಿ?
ಈ ಹಣವನ್ನು ನನ್ನ ಬಾಕ್ಸಿಂಗ್ ಅಕಾಡೆಮಿಗೆ ಬಳಸುತ್ತೇನೆ. ಇದರ ಉದ್ದೇಶ ಮಹಿಳಾ ಬಾಕ್ಸರ್‌ಗಳನ್ನು ರೂಪಿಸುವುದು.

..............

ನನ್ನ ಪತ್ನಿ ಈಗ ಆರು ತಿಂಗಳ ಗರ್ಭಿಣಿ. ಹೆಣ್ಣು ಮಗುವಾದರೆ ಅದಕ್ಕೆ ಮೇರಿ ಎಂದು ಹೆಸರಿಡುತ್ತೇನೆ. ದೊಡ್ಡವಳಾದ ಮೇಲೆ ನಿಮ್ಮ ಅಕಾಡೆಮಿಗೆ ಸೇರಿಸುತ್ತೇನೆ. ಆಕೆಯನ್ನು ಬಾಕ್ಸರ್ ಮಾಡುವ ಜವಾಬ್ದಾರಿ ನಿಮ್ಮದು ಎಂದು ಮಣಿಪುರದಿಂದ ಪರಿಚಯದ ವ್ಯಕ್ತಿಯೊಬ್ಬರು ದೂರವಾಣಿ ಕರೆ ಮಾಡಿ ಮಾತನಾಡಿದರು. ಆ ಮಾತು ಕೇಳಿ ನನ್ನ ಜೀವನ ಹಾಗೂ ಪದಕ ಗೆದ್ದ ಸಾಧನೆ ಸಾರ್ಥಕ ಎನಿಸಿತು 
 ಮೇರಿ ಕೋಮ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.