
ಚೆನ್ನೈ (ಪಿಟಿಐ): ಪುಣೆ ವಾರಿಯರ್ಸ್‌ಗೆ ತಿರುಗೇಟು ನೀಡುವ ವಿಶ್ವಾಸ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದವರು ಅಬ್ಬರದ ಬ್ಯಾಟಿಂಗ್‌ನಿಂದ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸಲು ಸಜ್ಜಾಗಿದ್ದಾರೆ.
ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಐಪಿಎಲ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯ ಲೀಗ್ ಪಂದ್ಯವು ಸೂಪರ್ ಕಿಂಗ್ಸ್‌ಗೆ ಹೆಚ್ಚು ಮಹತ್ವದ್ದೂ ಆಗಿದೆ. ಪುಣೆಯಲ್ಲಿ ವಾರಿಯರ್ಸ್ ವಿರುದ್ಧ ಏಳು ವಿಕೆಟ್‌ಗಳ ಸೋಲು ಅದಕ್ಕೆ ಸಹನೀಯ ಎನಿಸಿರಲಿಲ್ಲ. ಆ ನಿರಾಸೆಗೆ ತಿರುಗುತ್ತರ ನೀಡುವುದಕ್ಕೆ ಈ ಪಂದ್ಯವು ಅವಕಾಶ ಒದಗಿಸಿದೆ.
ಮಹೇಂದ್ರ ಸಿಂಗ್ ದೋನಿ ನಾಯಕತ್ವದ ತಂಡವು ತಮ್ಮ ಅಭಿಮಾನಿಗಳಿಗೆ ಸಮಾಧಾನ ನೀಡುವಂಥ ಜಯ ಪಡೆಯಲು ಪಂದ್ಯ ಯೋಜನೆಯನ್ನಂತೂ ರೂಪಿಸಿಕೊಳ್ಳುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ರೋಚಕ ಗೆಲುವಿನ ನೆನಪು ಹಸಿರಾಗಿ ಇರುವಾಗಲೇ ಅದಕ್ಕೂ ಅದ್ಭುತವಾದ ವಿಜಯದಿಂದ ಪಾಯಿಂಟುಗಳ ಪಟ್ಟಿಯಲ್ಲಿ ಮೇಲೇರುವುದು `ಮಹಿ~ ಪಡೆಯ ಉದ್ದೇಶ.
ಲೀಗ್ ಪಟ್ಟಿಯಲ್ಲಿ ವಾರಿಯರ್ಸ್ ತಂಡವು ಸೂಪರ್ ಕಿಂಗ್ಸ್‌ಗಿಂತ ಮೇಲಿದೆ. ಈ ಲೆಕ್ಕಾಚಾರದಲ್ಲಿ ಅದೇ ಬಲಾಢ್ಯವೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಐಪಿಎಲ್ ಮೊದಲ ಅವತರಣಿಕೆಯಿಂದಲೂ ದೋನಿ ಪಡೆಯು ನಿಧಾನವಾಗಿ ಚೇತರಿಸಿಕೊಂಡು ಆ ನಂತರ ಬೆರಗಾಗುವಂಥ ಫಲಿತಾಂಶ ನೀಡಿರುವ ತಂಡ. ಸತತ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಪಡೆಯುವ ಆಸೆ ಹೊಂದಿರುವ ಅದು ಲೀಗ್ ಪಟ್ಟಿಯಲ್ಲಿ ಕೆಳಗೆ ಉಳಿಯಲು ಖಂಡಿತ ಇಷ್ಟಪಡದು.
ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ವಾರಿಯರ್ಸ್ ವಿರುದ್ಧದ ಸೋಲು ಸೂಪರ್ ಕಿಂಗ್ಸ್ ಖಾತೆಯಲ್ಲಿ ಪಾಯಿಂಟುಗಳು ಹೆಚ್ಚದೇ ಇರುವುದಕ್ಕೆ ಕಾರಣ. ಸೌರವ್ ಗಂಗೂಲಿ ನಾಯತ್ವದ ಪುಣೆ ವಾರಿಯರ್ಸ್ ಎದುರು ಮತ್ತೊಮ್ಮೆ ನಿರಾಸೆ ಹೊಂದುವುದು ಅದಕ್ಕೆ ಆಘಾತಕಾರಿ. ಆದ್ದರಿಂದ ಬಲವನ್ನೆಲ್ಲಾ ಒಗ್ಗೂಡಿಸಿ ಹೋರಾಡಿ ವಿಜಯ ಸಾಧಿಸುವುದು `ಮಹಿ~ ಪಡೆಯ ಗುರಿ. ರಾಯಲ್ ಚಾಲೆಂಜರ್ಸ್ ಎದುರು ಸಿಕ್ಕ ರೋಮಾಂಚನ ಮರೆಯುವ ಮುನ್ನ ಚಿಪಾಕ್‌ನಲ್ಲಿ ಮತ್ತೊಂದು ಯಶಸ್ಸು ಪಡೆದರೆ ಮುಂದಿನ ಹಾದಿಯೂ ಅದಕ್ಕೆ ಸುಗಮ ಎನಿಸುತ್ತದೆ.
ಪುಣೆಯಲ್ಲಿನ ಪಂದ್ಯದಲ್ಲಿ ಸೂಪರ್ ಕಿಂಗ್ಸ್ ಬ್ಯಾಟಿಂಗ್ ವಿಭಾಗದಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿರಲಿಲ್ಲ. ದೋನಿ ಬ್ಯಾಟ್‌ನಿಂದ ಹರಿದು ಬಂದಿದ್ದು ಕೇವಲ ಇಪ್ಪತ್ತಾರು ರನ್. ಆದ್ದರಿಂದ ನಾಯಕ ತನ್ನ ಮೇಲಿನ ನಿರೀಕ್ಷೆಯು ಹುಸಿಯಾಗದಂತೆ ಬ್ಯಾಟ್ ಬೀಸಬೇಕು ಎನ್ನುವುದು ಇಲ್ಲಿನ ಕ್ರಿಕೆಟ್ ಪ್ರೇಮಿಗಳ ಆಶಯ.
ಫಾಫ್ ಡು ಪ್ಲೆಸ್ಸಿಸ್ ಹಾಗೂ ರವೀಂದ್ರ ಜಡೇಜಾ ಅವರು ತಂಡದ ಖಾತೆಗೆ ರನ್‌ಗಳನ್ನು ಸೇರಿಸಲು ಶ್ರಮಿಸುತ್ತಾ ಬಂದಿದ್ದಾರೆ. ಆದರೂ ಇನ್ನೂ ಉತ್ತಮವಾದದ್ದು ಸಾಧ್ಯವಾಗಬೇಕು ಎನ್ನುವ ಒತ್ತಡ ಈ ತಂಡದ ಮೇಲೆ ಇದ್ದೇ ಇದೆ. ಏಕೆಂದರೆ ಸೂಪರ್ ಕಿಂಗ್ಸ್ ಚಾಂಪಿಯನ್ ತಂಡ.
`ದಾದಾ~ ನಾಯಕತ್ವದ ಪುಣೆ ಕೂಡ ತನ್ನ ಕೊನೆಯ ಪಂದ್ಯದಲ್ಲಿನ ನಿರಾಸೆಯಿಂದ ಆತಂಕಗೊಂಡಿದೆ. ಗೆಲುವಿನ ಹೊಸ್ತಿಲಲ್ಲಿ ರಾಯಲ್ ಚಾಲೆಂಜರ್ಸ್ ಎದುರು ಸೋಲನುಭವಿಸಿದ್ದು ಅದಕ್ಕೆ ಸಹನೀಯ ಎನಿಸಲಿಲ್ಲ. ಹೀಗೆ ನಿರಾಸೆ ಮತ್ತೆ ಕಾಡಬಾರದು. ಆ ನಿಟ್ಟಿನಲ್ಲಿ ಸೂಪರ್ ಕಿಂಗ್ಸ್ ಎದುರು ಜಯ ಪಡೆದು ಮತ್ತೆ ಪುಟಿದೇಳುವುದು ಅಗತ್ಯ.
ಇನ್ನೂ ಸಾಕಷ್ಟು ಪಂದ್ಯಗಳಿವೆ ಎಂದು ನಿರುಮ್ಮಳವಾಗಿ ಇರಲು ಆಗದು. ಹೆಚ್ಚು ಪಾಯಿಂಟುಗಳನ್ನು ಗಳಿಸಿದಷ್ಟು ಮುಂದಿನ ಹಂತದಲ್ಲಿ ಆಡುವ ಕನಸೂ ಬಲವಾಗುತ್ತದೆ. ಸದ್ಯಕ್ಕೆ ಪುಣೆ ವಾರಿಯರ್ಸ್ ತಂಡವು ಸೂಪರ್ ಕಿಂಗ್ಸ್‌ಗಿಂತ ಉತ್ತಮ ಸ್ಥಿತಿಯಲ್ಲಿ ಇರುವುದಂತೂ ನಿಜ. ಆಡಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಅದು ವಿಜಯ ಸಾಧಿಸಿದೆ. ಆದರೆ ದೋನಿ ಬಳಗಕ್ಕೆ ಸಿಕ್ಕಿದ್ದು ಕೇವಲ ಎರಡು ಗೆಲುವಿನ ಸಿಹಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.