ADVERTISEMENT

ಮಹಿ ಬಳಗಕ್ಕೆ ಕಿವೀಸ್ ಪಡೆಯ ಸವಾಲು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 19:30 IST
Last Updated 22 ಆಗಸ್ಟ್ 2012, 19:30 IST

ಹೈದರಾಬಾದ್: ಹದಿನಾರು ವರ್ಷಗಳಲ್ಲಿ ಇದೇ ಮೊದಲ ಬಾರಿ ಭಾರತ ತಂಡ ರಾಹುಲ್ ದ್ರಾವಿಡ್ ಹಾಗೂ ವಿ.ವಿ.ಎಸ್.ಲಕ್ಷ್ಮಣ್ ಅನುಪಸ್ಥಿತಿಯಲ್ಲಿ ಟೆಸ್ಟ್ ಕ್ರಿಕೆಟ್ ಆಡಲು ಕಣಕ್ಕಿಳಿಯುತ್ತಿದೆ.

ಯುವ ಆಟಗಾರರನ್ನು ಒಳಗೊಂಡಿರುವ ಮಹೇಂದ್ರ ಸಿಂಗ್ ದೋನಿ ಬಳಗ ಮುತ್ತಿನ ನಗರಿಯಲ್ಲಿ ಗುರುವಾರ ಆರಂಭವಾಗಲಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.
ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಹಲವು ಕಾರಣಗಳಿಂದಾಗಿ ಕುತೂಹಲ ಕೆರಳಿಸಿದೆ. ಈ ಪಂದ್ಯ ಯುವ ಆಟಗಾರರಿಗೆ ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯ ಪ್ರದರ್ಶಿಸಲು ಪ್ರಮುಖ ವೇದಿಕೆ ಕೂಡ.

`ಹಿರಿಯರ ಅನುಪಸ್ಥಿತಿ ನಮ್ಮನ್ನು ಕಾಡಬಾರದು. ಆ ರೀತಿ ಆಗಲು ನಮ್ಮ ಯುವ ಆಟಗಾರರು ಅವಕಾಶ ಕೊಡಬಾರದು. ಉತ್ತಮ ಪ್ರದರ್ಶನ ತೋರಲು ಅವರಿಗೆ ಈ ಸರಣಿ ವೇದಿಕೆ ಆಗಬೇಕು~ ಎಂದು ನಾಯಕ ದೋನಿ ಹೇಳಿದ್ದಾರೆ.

ಹಾಗೇ, ನ್ಯೂಜಿಲೆಂಡ್ ತಂಡದಲ್ಲಿ ಕೂಡ ಹೊಸ ಮುಖಗಳಿವೆ. ಆದರೆ ಕಿವೀಸ್ ಬಳಗವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಮಹಿ ನುಡಿದಿದ್ದಾರೆ. ಭಾರತ ಸತತ ಎಂಟು ಟೆಸ್ಟ್ ಪಂದ್ಯಗಳ ಸೋಲಿನ ಬಳಿಕ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಆ ಬಳಿಕ ದ್ರಾವಿಡ್ ಹಾಗೂ ಲಕ್ಷ್ಮಣ್ ವಿದಾಯ ಹೇಳಿದ್ದಾರೆ. ಹರಭಜನ್ ಸಿಂಗ್ ಕೂಡ ಈಗ ತಂಡದಲ್ಲಿಲ್ಲ.

ಈ ಕಾರಣ ಹಿರಿಯ ಹಾಗೂ ಅನುಭವಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಹೆಗಲ ಮೇಲೆ ಮತ್ತಷ್ಟು ಜವಾಬ್ದಾರಿ ಬಿದ್ದಿದೆ. ವಿರಾಟ್ ಕೊಹ್ಲಿ, ಸುರೇಶ್ ರೈನಾ ಹಾಗೂ ಚೇತೇಶ್ವರ ಪೂಜಾರ ಅವರಂಥ ಯುವ ಬ್ಯಾಟ್ಸ್‌ಮನ್‌ಗಳಿಗೆ ಅಗ್ನಿಪರೀಕ್ಷೆಯಾಗಿದೆ.

`ಈ ಸರಣಿ ಸುಲಭವಾಗಿರಲಿದೆ ಎಂದು ನಾನು ಹೇಳಲಾರೆ. ಆದರೆ ಎದುರಾಳಿ ತಂಡದಲ್ಲಿ ದ್ರಾವಿಡ್ ಹಾಗೂ ಲಕ್ಷ್ಮಣ್ ಇಲ್ಲ ಎಂಬುದು ಖುಷಿಯ ವಿಚಾರ. ಯುವ ಆಟಗಾರರ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತೇವೆ~ ಎಂದು ನ್ಯೂಜಿಲೆಂಡ್ ತಂಡದ ನಾಯಕ ಟೇಲರ್ ಹೇಳಿದ್ದಾರೆ.  ಭಾರತದ ನೆಲದಲ್ಲಿ ನ್ಯೂಜಿಲೆಂಡ್ ದಾಖಲೆ ಉತ್ತಮವಾಗಿಯೇ ಇದೆ.

ಏಕೆಂದರೆ 1990ರಿಂದ ಭಾರತದಲ್ಲಿ ಆಡಿದ 11 ಟೆಸ್ಟ್‌ಗಳಲ್ಲಿ ಎಂಟರಲ್ಲಿ ಡ್ರಾ ಸಾಧಿಸಿದ್ದಾರೆ. 2010ರಲ್ಲಿ ಅಹಮದಾಬಾದ್ ಟೆಸ್ಟ್‌ನಲ್ಲಿ ಗೆಲುವಿನ ಸನಿಹ ಬಂದಿದ್ದರು. ಆದರೆ ಲಕ್ಷ್ಮಣ್ ಹಾಗೂ ಹರಭಜನ್ ಆಟ ತಂಡವನ್ನು ಅಪಾಯದಿಂದ ಪಾರು ಮಾಡಿತ್ತು.

ಈ ಬಾರಿ ಕಿವೀಸ್ ಪಡೆಗೆ ದೊಡ್ಡ ಹಿನ್ನಡೆ ಎಂದರೆ ಎಡಗೈ ಸ್ಪಿನ್ನರ್ ಡೇನಿಯಲ್ ವೆಟೋರಿ ಅವರ ಅನುಪಸ್ಥಿತಿ. ಹಾಗಾಗಿ ಈ ತಂಡದವರು ಮೂವರು ವೇಗಿಗಳೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ. ಬ್ಯಾಟಿಂಗ್ ವಿಭಾಗದಲ್ಲಿ ಟೇಲರ್, ಬ್ರೆಂಡನ್ ಮೆಕ್ಲಮ್ ಹಾಗೂ ಮಾರ್ಟಿನ್ ಗುಪ್ಟಿಲ್ ಈ ತಂಡದ ಬೆನ್ನೆಲುಬು.

ತಂಡಗಳು ಇಂತಿವೆ
ಭಾರತ:
ಮಹೇಂದ್ರ ಸಿಂಗ್ ದೋನಿ (ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಚೇತೇಶ್ವರ ಪೂಜಾರ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಆರ್.ಅಶ್ವಿನ್, ಜಹೀರ್ ಖಾನ್, ಉಮೇಶ್ ಯಾದವ್, ಪ್ರಗ್ಯಾನ್ ಓಜಾ, ಅಜಿಂಕ್ಯ ರಹಾನೆ, ಎಸ್.ಬದರೀನಾಥ್, ಪಿಯೂಷ್ ಚಾವ್ಲಾ ಹಾಗೂ ಇಶಾಂತ್ ಶರ್ಮ.

ನ್ಯೂಜಿಲೆಂಡ್: ರಾಸ್ ಟೇಲರ್ (ನಾಯಕ), ಡೇನಿಯಲ್ ಫ್ಲಿನ್, ಮಾರ್ಟಿನ್ ಗುಪ್ಟಿಲ್, ಬ್ರೆಂಡನ್ ಮೆಕ್ಲಮ್, ಬ್ರಾಡ್ಲಿ-ಜಾನ್ ವಾಟ್ಲಿಂಗ್, ಕೇನ್ ವಿಲಿಯಮ್ಸ, ಕ್ರುಗರ್ ವಾನ್ ವಿಕ್ (ವಿಕೆಟ್ ಕೀಪರ್), ನೀಲ್ ವಾಗ್ನರ್, ಜೇಮ್ಸ ಫ್ರಾಂಕ್ಲಿನ್, ಕ್ರಿಸ್ ಮಾರ್ಟಿನ್, ಟ್ರೆಂಟ್ ಬಾಲ್ಟ್, ಡಗ್ ಬ್ರೇಸ್‌ವೆಲ್, ತರುಣ್ ನೇತುಲಾ, ಟಿಮ್ ಸೌಥಿ ಹಾಗೂ ಜೀತನ್ ಪಟೇಲ್.

ಅಂಪೈರ್‌ಗಳು: ಇಯಾನ್ ಗೌಲ್ಡ್ (ಇಂಗ್ಲೆಂಡ್) ಹಾಗೂ ಸ್ಟೀವ್ ಡೇವಿಸ್ (ಆಸ್ಟ್ರೇಲಿಯಾ). ಮ್ಯಾಚ್ ರೆಫರಿ: ಕ್ರಿಸ್ ಬ್ರಾಡ್ (ಇಂಗ್ಲೆಂಡ್)

ಪಂದ್ಯ ಆರಂಭ: ಬೆಳಿಗ್ಗೆ 9.30ಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.