ADVERTISEMENT

ಮಾಕನ್ ವಿರುದ್ಧ ಕಲ್ಮಾಡಿ ಕಿಡಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 19:30 IST
Last Updated 14 ಜುಲೈ 2012, 19:30 IST

ಪುಣೆ (ಪಿಟಿಐ): ಲಂಡನ್ ಒಲಿಂಪಿಕ್ಸ್‌ಗೆ ತೆರಳುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕನ್ ವಿರುದ್ಧ ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

`ಕ್ರೀಡಾ ಸಚಿವರು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ನಾನು ಐಒಎ ನಿಯೋಗದೊಂದಿಗೆ ಒಲಿಂಪಿಕ್ಸ್‌ಗೆ ತೆರಳುತ್ತಿಲ್ಲ. ನನ್ನ ಮೇಲಿನ ಯಾವುದೇ ಆರೋಪ ಸಾಬೀತಾಗಿಲ್ಲ. ಅವರೇಕೆ ನನ್ನನ್ನು ತಡೆಯುತ್ತಿದ್ದಾರೆ.

ಒಲಿಂಪಿಕ್ಸ್‌ಗೆ ತೆರಳುವ ನನ್ನ ನಿರ್ಧಾರಕ್ಕೆ ಬದ್ಧ~ ಎಂದು ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಕಲ್ಮಾಡಿ ತಿರುಗೇಟು ನೀಡಿದ್ದಾರೆ. `ಇದೊಂದು ದುರದೃಷ್ಟಕರ ಘಟನೆ. ಭಾರತದ ಕ್ರೀಡಾಪಟುಗಳ ಜೊತೆ ಕಲ್ಮಾಡಿ ತೆರಳದಂತೆ ತಡೆಯೊಡ್ಡಲು ಒಬ್ಬ ಕ್ರೀಡಾ ಸಚಿವನಾಗಿ ನಾನು ಪೂರ್ಣ ಪ್ರಮಾಣದ ಪ್ರಯತ್ನ ಹಾಕುತ್ತೇನೆ~ ಎಂದಿದ್ದರು ಮಾಕನ್.

`ಒಲಿಂಪಿಕ್ಸ್‌ಗೆ ತೆರಳಲು ನ್ಯಾಯಾಲಯವೇ ಅನುಮತಿ ನೀಡಿದೆ. ಆದರೆ ಮಾಕನ್ ಅದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಅವರ ಹೇಳಿಕೆ ಓದಿ ನನಗೆ ಆಘಾತವಾಯಿತು. ತೀರ್ಪಿಗೆ ವಿರುದ್ಧವಾದ ಹೇಳಿಕೆ ನೀಡುತ್ತಿದ್ದಾರೆ. ಅವರು ರಾಜೀನಾಮೆ ನೀಡಬೇಕು. ಈ ಸಂಬಂಧ ನಾನು ಪ್ರಧಾನಿ ಅವರಲ್ಲಿ ಮನವಿ ಮಾಡುತ್ತೇನೆ~ ಎಂದು ಕಲ್ಮಾಡಿ ಹೇಳಿದ್ದಾರೆ.

ನಿಯೋಗದಲ್ಲಿಲ್ಲ: ಕಲ್ಮಾಡಿ ಭಾರತ ತಂಡದ ನಿಯೋಗದ ಭಾಗವಾಗಿಲ್ಲ ಎಂದು ಭಾರತ ಒಲಿಂಪಿಕ್ ಸಂಸ್ಥೆಯ ಹಂಗಾಮಿ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ ಹೇಳಿದ್ದಾರೆ.

ಪ್ರತಿಕ್ರಿಯಿಸುವುದಿಲ್ಲ: `ಕಲ್ಮಾಡಿ ವಿರುದ್ಧ ಸಿಬಿಐ ದೋಷಾರೋಪಣ ಪಟ್ಟಿ ಸಲ್ಲಿಸಿದೆ. ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಲಾಗಿದೆ. ಅಂತಹ ವ್ಯಕ್ತಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ~ ಎಂದು ಮಾಕನ್ ನುಡಿದಿದ್ದಾರೆ. ಈ ಮೊದಲು ನೀಡಿದ ಹೇಳಿಕೆಗೆ ತಾವು ಬದ್ಧರಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.