ADVERTISEMENT

ಮಾಜಿ ಕ್ರಿಕೆಟಿಗರ ಟೀಕೆಗೆ ತಿರುಗೇಟು

ಮತ್ತೆ ಹೇಳುತ್ತಿದ್ದೇನೆ ತಿರುವು ನೀಡುವ ಪಿಚ್ ಬೇಕು: ದೋನಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ಕೋಲ್ಕತ್ತ: `ಮೊದಲ ದಿನದಿಂದಲೇ ತಿರುವು ನೀಡುವ ಪಿಚ್ ಬೇಕು' ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ತಮ್ಮ ನಿಲುವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.`ಉಪಖಂಡದ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಫಲಿತಾಂಶ ಯಾವುದೇ ರೀತಿಯಲ್ಲಿ ಇರಲಿ, ತಿರುವು ನೀಡುವ ಪಿಚ್ ಹಾಗೂ ಸ್ಪಿನ್ನರ್‌ಗಳು ನಮ್ಮ ಬಲ. ಹಾಗಾಗಿ ಮತ್ತೆ ಹೇಳುತ್ತಿದ್ದೇನೆ ಸ್ವದೇಶದಲ್ಲಿ ಆಡುವಾಗ ತಿರುವು ನೀಡುವ ಪಿಚ್ ಬೇಕು' ಎಂದು ಅವರು ಮಂಗಳವಾರ ನುಡಿದರು.

`ತಮಗೆ ಬೇಕಾದಂತೆ ಪಿಚ್ ರೂಪಿಸಿಕೊಳ್ಳದೇ ಇದ್ದರೆ ಸ್ವದೇಶದಲ್ಲಿ ಆಡುವ ಉದ್ದೇಶಕ್ಕೆ ಅರ್ಥವೇ ಇರುವುದಿಲ್ಲ. ಹಾಗಾಗಿ ಭಾರತಕ್ಕೆ ಬಂದಾಗ ತಿರುವ ನೀಡುವ ಪಿಚ್‌ನಲ್ಲಿ ಆಡಲು ಎದುರಾಳಿಗಳು ಸಿದ್ಧರಾಗಿರಬೇಕು. ಕೆಲ ಪಂದ್ಯಗಳಲ್ಲಿ ನಾವೂ ಸೋಲಬಹುದು. ವೇಗಿಗಳಿಗೆ ನೆರವು ನೀಡುವ ಪಿಚ್‌ಗಳಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಸೋಲು ಕಂಡಿಲ್ಲವೇ?' ಎಂದು ಮಹಿ ಹೇಳಿದರು.
ತಿರುವು ನೀಡುವ ಪಿಚ್ ಬೇಕು ಎಂಬ ತಮ್ಮ ಹೇಳಿಕೆಯನ್ನು ಟೀಕಿಸಿರುವ ಮಾಜಿ ಕ್ರಿಕೆಟಿಗರು ಹಾಗೂ ವೀಕ್ಷಕ ವಿವರಣೆಗಾರರಿಗೆ ಈ ಮೂಲಕ ದೋನಿ ತಿರುಗೇಟು ನೀಡಿದರು.

`ಟೀಕೆಗೆ ಉತ್ತರ ನೀಡಲು ನನಗೆ ಸಮಯವಿಲ್ಲ. ಜೊತೆಗೆ ಅವರ ರೀತಿ ವೇದಿಕೆ ಕೂಡ ಇಲ್ಲ. ನಾನು ಅಂಕಣ ಬರೆಯುವುದಿಲ್ಲ, ಟಿವಿಯಲ್ಲಿ ಕ್ರಿಕೆಟ್ ಬಗ್ಗೆ ಚರ್ಚಿಸುವುದಿಲ್ಲ. ಆದರೆ ಟೀಕೆ ಎಂಬುದು ಕ್ರೀಡೆಯಲ್ಲಿ ಇದ್ದದ್ದೇ. ಉತ್ತಮ ಪ್ರದರ್ಶನ ತೋರಿದರೆ ಹಾಡಿ ಹೊಗಳುತ್ತಾರೆ, ಕೆಳಗೆ ಬಿದ್ದರೆ ನಿಮ್ಮ ಮೇಲೆ ಹತ್ತಿ ನಿಲ್ಲುತ್ತಾರೆ' ಎಂದು ಅವರು ನುಡಿದರು.

ಈಡನ್ ಗಾರ್ಡನ್ಸ್ ಪಿಚ್ ಬಗ್ಗೆ ಪ್ರತಿಕ್ರಿಯಿಸಿದ ದೋನಿ, `ಪಿಚ್ ಚೆನ್ನಾಗಿರುವಂತೆ ಕಾಣುತ್ತಿದೆ. ಆರಂಭದಲ್ಲಿ ಸ್ಪಿನ್ನರ್‌ಗಳಿಗೆ ಅಷ್ಟೊಂದು ನೆರವು ನೀಡುವುದಿಲ್ಲ. ಹಾಗಾಗಿ ವೇಗಿಗಳ ಪಾತ್ರವೂ ಇಲ್ಲಿ ಮುಖ್ಯವಾಗಿದೆ. ಆದರೆ ಯಾವ ರೀತಿ ವರ್ತಿಸಲಿದೆ ಎಂಬುದು ಕಣಕ್ಕಿಳಿದ ಮೇಲೆ ಚೆನ್ನಾಗಿ ಗೊತ್ತಾಗಲಿದೆ' ಎಂದರು.

ಉತ್ತಮ ಆರಂಭ ನೀಡುವಲ್ಲಿ ವಿಫಲರಾಗುತ್ತಿರುವ ಸೆಹ್ವಾಗ್ ಹಾಗೂ ಗಂಭೀರ್ ಅವರನ್ನು ದೋನಿ ಸಮರ್ಥಿಸಿಕೊಂಡರು. `ವೀರೂ ಹಾಗೂ ಗಂಭೀರ್ ಸಾಮರ್ಥ್ಯ ಏನು ಎಂಬುದು ನಮಗೆ ಗೊತ್ತಿದೆ. ಈ ಹಿಂದೆ ಅತ್ಯುತ್ತಮ ಇನಿಂಗ್ಸ್ ಕಟ್ಟಿದ ಉದಾಹರಣೆ ಇದೆ. ಅವರಾಟ ಆಡಲು ಬಿಡಬೇಕು. ಸುಮ್ಮನೇ ಒತ್ತಡ ಹೇರಬಾರದು' ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.