ADVERTISEMENT

ಮಾ. 25ಕ್ಕೆ ವಿಚಾರಣೆ ಮುಂದೂಡಿಕೆ

ಐಪಿಎಲ್‌ ಹಗರಣ: ಸುದ್ದಿ ವಾಹಿನಿಗಳ ಗೋಪ್ಯ ಕಾರ್ಯಾಚರಣೆ ಪರಿಗಣಿಸಲಿರುವ ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:30 IST
Last Updated 7 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌):  ಐಪಿಎಲ್‌ ನಲ್ಲಿ ನಡೆದಿದೆ ಎನ್ನಲಾದ ಬೆಟ್ಟಿಂಗ್‌ ಹಾಗೂ ಕಳ್ಳಾಟ ಸಂಬಂಧ ನ್ಯಾಯಮೂರ್ತಿ ಮುಕುಲ್‌ ಮುದ್ಗಲ್‌ ಸಾರಥ್ಯದ ಸಮಿತಿ ಸಲ್ಲಿಸಿರುವ ವರದಿಯ ವಿಚಾರಣೆ ಯನ್ನು ಸುಪ್ರೀಂ ಕೋರ್ಟ್‌ ಮಾರ್ಚ್‌ 25ಕ್ಕೆ ಮುಂದೂಡಿದೆ.

ಫೆಬ್ರುವರಿ 10ರಂದು ಸಲ್ಲಿಸಲಾಗಿದ್ದ ವರದಿ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಳ್ಳಬೇಕಿತ್ತು. ಆದರೆ ಈ ವರದಿಗೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರತಿಕ್ರಿಯೆಯ ಬಗ್ಗೆ ಇನ್ನಷ್ಟು ಪರಿಶೀಲನೆ ನಡೆಸಲು ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.  

‘ಪ್ರಕರಣದ ವಿಚಾರಣೆಗೆ ತುಂಬಾ ಸಮಯಬೇಕು. ಮುಖ್ಯ ವಿಷಯವಾಗಿ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು. ಅಷ್ಟು ಮಾತ್ರವಲ್ಲದೇ,  ಸುದ್ದಿ ವಾಹಿನಿಗಳು ನಡೆಸಿರುವ ಗೋಪ್ಯ ಕಾರ್ಯಾ ಚರಣೆಯ ಅಂಶಗಳನ್ನು ಪರಿಗಣಿಸಲಾಗುವುದು’ ಎಂದು ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್‌ ನೇತೃತ್ವದ ಪೀಠ ತಿಳಿಸಿದೆ.

ಬಿಸಿಸಿಐ ಅಧ್ಯಕ್ಷ ಎನ್‌.ಶ್ರೀನಿವಾಸನ್‌ ಅವರ ಅಳಿಯ ಗುರುನಾಥ್‌ ಮೇಯಪ್ಪನ್‌ ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ವರದಿ ಯಲ್ಲಿ ಮುದ್ಗಲ್‌ ಸಾರಥ್ಯದ ಸಮಿತಿ ಹೇಳಿತ್ತು. ಮೇಯಪ್ಪನ್‌ ಚೆನ್ನೈ ಸೂಪರ್‌ ಕಿಂಗ್ಸ್‌ನ ಅಧಿಕಾರಿ ಯಾಗಿದ್ದರು ಎಂದು ಖಚಿತಪಡಿಸಿರುವ ಸಮಿತಿಯು, ಅವರು ಕಳ್ಳಾಟದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಸಮಗ್ರ ತನಿಖೆ ನಡೆಸುವ ಅಗತ್ಯವಿದೆ ಎಂದಿತ್ತು.

ಅಷ್ಟು ಮಾತ್ರವಲ್ಲದೇ, ಈ ಪ್ರಕರಣದ ವಿಚಾರಣೆ ಯನ್ನು ತಮಿಳುನಾಡು ಪೊಲೀಸರು ಸರಿಯಾಗಿ ನಡೆಸಿಲ್ಲ ಎಂದಿದ್ದ ಸಮಿತಿ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಲೀಕರೂ ಆಗಿರುವ ಶ್ರೀನಿವಾಸನ್‌ ಅವರು ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿರುವ ವಿವಾದ ವನ್ನು ಸುಪ್ರೀಂ ಕೋರ್ಟ್‌ ತೀರ್ಮಾನಕ್ಕೆ ಬಿಟ್ಟಿರುವುದಾಗಿ ಹೇಳಿತ್ತು.

ನಾಲ್ಕು ತಿಂಗಳ ಹಿಂದೆ ಸುಪ್ರೀಂ ಕೋರ್ಟ್‌ ನೇಮಿಸಿದ್ದ ಸಮಿತಿಯಲ್ಲಿ ಪಂಜಾಬ್‌ ಹಾಗೂ ಹರಿಯಾಣದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮುದ್ಗಲ್‌ ಅವರಲ್ಲದೇ, ಹಿರಿಯ ನ್ಯಾಯವಾದಿ ಎನ್‌.ನಾಗೇಶ್ವರ್‌ ರಾವ್‌ ಹಾಗೂ ಅಸ್ಸಾಂ ಕ್ರಿಕೆಟ್‌ ಸಂಸ್ಥೆ ಸದಸ್ಯ ನಿಲಯ ದತ್ತ ಇದ್ದಾರೆ.
ಸಮಿತಿ ಸಲ್ಲಿಸಿರುವ ವರದಿಯಲ್ಲಿ ಬಾರತ ತಂಡದ ಪ್ರಮುಖ ಆರು ಆಟಗಾರರು ಕಳ್ಳಾಟದಲ್ಲಿ ಭಾಗಿ ಯಾಗಿರುವ ಮಾಹಿತಿ ಇದೆ ಎನ್ನಲಾಗಿದೆ. ಜೊತೆಗೆ ರಾಜಸ್ತಾನ ರಾಯಲ್ಸ್‌ ಮಾಲೀಕರೂ ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿರುವ ಬಗ್ಗೆ ಗುಮಾನಿ ವ್ಯಕ್ತಪಡಿಸಿದೆ.

ಸಮಿತಿಯ ವರದಿ ಸಂಬಂಧ ತನ್ನ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ, ವಿಚಾರಣೆಯ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ. ಆದರೆ ಮುದ್ಗಲ್‌ ಹಾಗೂ ನಿಲಯ ದತ್ತ ಅವರು ಸಲ್ಲಿಸಿರುವ ವರದಿಯಲ್ಲಿ ಭಿನ್ನಾಭಿಪ್ರಾಯ ಇರುವ ಬಗ್ಗೆಯೂ ಮಂಡಳಿಯು ನ್ಯಾಯಾಲಯದ ಗಮನ ಸೆಳೆದಿದೆ. ಅಷ್ಟು ಮಾತ್ರವಲ್ಲದೇ, ವರದಿಯಲ್ಲಿ ಹಾಲಿ ಆಟಗಾರರ ಹೆಸರು ಇದ್ದರೆ ಅದನ್ನು ಬಹಿರಂಗ ಪಡಿಸದಂತೆ ಮನವಿ ಮಾಡಿದೆ.

‘ಒಂದು ವೇಳೆ ಹೆಸರು ಬಹಿರಂಗಗೊಂಡರೆ ಆಟಗಾರರ ಕ್ರೀಡಾ ಜೀವನಕ್ಕೆ ಕುತ್ತು ಬರಲಿದೆ. ಕ್ರೀಡೆಯ ಘನತೆಗೆ ಧಕ್ಕೆ ಉಂಟಾಗಲಿದೆ. ಆದ್ದರಿಂದ ಹಾಲಿ ಆಟಗಾರರ ಹೆಸರನ್ನು ಬಹಿರಂಗ ಮಾಡಬಾರದು’ ಎಂದು ಬಿಸಿಸಿಐ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.