ADVERTISEMENT

ಮಾ.24ರಿಂದ ಜೂನಿಯರ್‌ ಹಾಕಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:30 IST
Last Updated 21 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌): ನಾಲ್ಕನೇ ಹಾಕಿ ಇಂಡಿಯಾ ರಾಷ್ಟ್ರೀಯ ಜೂನಿಯರ್‌ ಪುರುಷರ ಹಾಕಿ ಚಾಂಪಿಯನ್‌ಷಿಪ್‌ ಮಾರ್ಚ್‌ 24 ರಿಂದ ಏಪ್ರಿಲ್‌ 6ರವರೆಗೆ ಚೆನ್ನೈನಲ್ಲಿ  ನಡೆಯಲಿದೆ.

ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 35 ತಂಡಗಳು ಭಾಗವಹಿಸಲಿದ್ದು, ತಂಡಗಳನ್ನು ‘ಎ’ ಮತ್ತು   ‘ಬಿ’  ವಿಭಾಗಗಳನ್ನಾಗಿ ವಿಂಗಡಿ ಸಲಾಗಿದೆ. 
‘ಎ’ ವಿಭಾಗದಲ್ಲಿ 16 ಹಾಗೂ ‘ಬಿ’ ವಿಭಾಗದಲ್ಲಿ 19 ತಂಡಗಳಿರಲಿವೆ. ಎರಡೂ ವಿಭಾಗಗಳಲ್ಲೂ ನಾಲ್ಕು ಗುಂಪುಗಳನ್ನು ಮಾಡಲಾಗಿದೆ. ‘ಎ’ ವಿಭಾಗದ ಪ್ರತಿ ಗುಂಪು ನಾಲ್ಕು ತಂಡಗಳನ್ನು ಹೊಂದಿದ್ದರೆ, ‘ಬಿ’ ವಿಭಾಗದ  ಎ, ಬಿ, ಮತ್ತು ಸಿ ಗುಂಪಿನಲ್ಲಿ ಐದು ಮತ್ತು ಡಿ ಗುಂಪಿನಲ್ಲಿ ನಾಲ್ಕು ತಂಡಗಳು ಇರಲಿವೆ.

‘ಬಿ’ ವಿಭಾಗದ ಪಂದ್ಯಗಳು ಮಾ.24 ರಿಂದ 31 ಮತ್ತು ‘ಎ’ ವಿಭಾಗದ ಪಂದ್ಯಗಳು ಮಾ.29 ರಿಂದ ಏಪ್ರಿಲ್‌ 6ರವರೆಗೆ  ಎಸ್‌ಡಿಎಟಿ ಮೇಯರ್‌ ರಾಧಾಕೃಷ್ಣನ್‌ ಮತ್ತು ವೈಎಂಸಿಎ ನಂದಾನಮ್‌  ಹಾಕಿ ಕ್ರೀಡಾಂಗಣಗಳಲ್ಲಿ  ಜರುಗಲಿದೆ.

ಈ ಬಾರಿ ಸ್ಟೀಲ್‌ ಪ್ಲಾಂಟ್ಸ್‌  ಕ್ರೀಡಾ ಮಂಡಳಿ, ಹಾಕಿ ಗಂಗಪುರ ಮತ್ತು ವಿದರ್ಭ ಹಾಕಿ ಸಂಸ್ಥೆ ತಂಡಗಳು ಟೂರ್ನಿಗೆ ಹೊಸದಾಗಿ ಸೇರ್ಪಡೆ ಗೊಂಡಿವೆ.
ಕರ್ನಾಟಕ ತಂಡವು ‘ಎ’ ವಿಭಾಗದ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಮಾ.29 ರಂದು ನಡೆಯುವ ಪಂದ್ಯದಲ್ಲಿ  ಕರ್ನಾಟಕ ಹೋದ ಬಾರಿಯ ರನ್ನರ್‌ ಅಪ್‌ ಹಾಕಿ ಒಡಿಶಾದ ಸವಾಲು ಎದುರಿಸಲಿದೆ. ಇದೇ ದಿನ ನಡೆಯುವ ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಹಾಕಿ ಪಂಜಾಬ್‌ ತಂಡ ಚಂಡಿಗಡ ಒಲಿಂಪಿಕ್‌ ಅಸೋಸಿಯೇಷನ್‌ ಎದುರು ಆಡಲಿದೆ.

ಹಾಕಿ ಮಿಜೋರಾಂ ಮತ್ತು ಸ್ಟೀಲ್ ಪ್ಲಾಂಟ್‌ ಕ್ರೀಡಾ ಮಂಡಳಿ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದ್ದು,  ಇನ್ನೊಂದು ಪಂದ್ಯ ದಲ್ಲಿ ಪುದುಚೇರಿ ಹಾಗೂ ಹಾಕಿ ಗಂಗಪುರ ಪೈಪೋಟಿ ನಡೆಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.