ADVERTISEMENT

ಮಿಲ್ಲರ್‌ ವಿಶ್ವದಾಖಲೆಯ ಶತಕ

ಏಜೆನ್ಸೀಸ್
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST
ಬಾಂಗ್ಲಾದೇಶ ವಿರುದ್ಧದ ಎರಡನೇ ಟಿ–20 ಪಂದ್ಯದಲ್ಲಿ ಶತಕ ಗಳಿಸಿದ ಬಳಿಕ ದಕ್ಷಿಣ ಆಫ್ರಿಕಾದ ಡೇವಿಡ್‌ ಮಿಲ್ಲರ್‌ ಸಂಭ್ರಮಿಸಿದರು. –ಎಎಫ್‌ಪಿ ಚಿತ್ರ
ಬಾಂಗ್ಲಾದೇಶ ವಿರುದ್ಧದ ಎರಡನೇ ಟಿ–20 ಪಂದ್ಯದಲ್ಲಿ ಶತಕ ಗಳಿಸಿದ ಬಳಿಕ ದಕ್ಷಿಣ ಆಫ್ರಿಕಾದ ಡೇವಿಡ್‌ ಮಿಲ್ಲರ್‌ ಸಂಭ್ರಮಿಸಿದರು. –ಎಎಫ್‌ಪಿ ಚಿತ್ರ   

ಪೊಷೆಫ್‌ಸ್ಟ್ರೂಮ್‌: ದಕ್ಷಿಣ ಆಫ್ರಿಕಾದ ಆಟಗಾರ ಡೇವಿಡ್‌ ಮಿಲ್ಲರ್‌ (ಔಟಾಗದೆ 101,36ಎ, 7ಬೌಂ,9ಸಿ) ಅಬ್ಬರಕ್ಕೆ ಭಾನುವಾರ ಸೆನ್‌ವೆಸ್‌ ಪಾರ್ಕ್‌ ಅಂಗಳದಲ್ಲಿ ಬಾಂಗ್ಲಾದೇಶದ ಬೌಲರ್‌ಗಳು ಬೆಚ್ಚಿದರು.

ಟಿ–20 ಮಾದರಿಯಲ್ಲಿ ಮಿಲ್ಲರ್‌ ದಾಖಲಿಸಿದ ವಿಶ್ವದಾಖಲೆಯ ಶತಕದ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಎರಡನೇ ಪಂದ್ಯದಲ್ಲಿ 83ರನ್‌ಗಳ ಜಯಭೇರಿ ಮೊಳಗಿಸಿತು.

ಮೊದಲು ಬ್ಯಾಟ್‌ ಮಾಡಿದ ಹರಿಣಗಳ ನಾಡಿನ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 224ರನ್‌ ಕಲೆಹಾಕಿತು. ಕಠಿಣ ಗುರಿ ಬೆನ್ನಟ್ಟಿದ ಬಾಂಗ್ಲಾ 18.3 ಓವರ್‌ಗಳಲ್ಲಿ 141ರನ್‌ ಗಳಿಗೆ ಹೋರಾಟ ಮುಗಿಸಿತು.

ADVERTISEMENT

ಮೊದಲು ಬ್ಯಾಟ್‌ ಮಾಡಿದ ಹರಿಣಗಳ ನಾಡಿನ ತಂಡ 78ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಅನುಭವಿ ಹಾಶಿಮ್‌ ಆಮ್ಲಾ (85; 51ಎ, 11ಬೌಂ, 1ಸಿ) ಮತ್ತು ಮಿಲ್ಲರ್‌ ಅಬ್ಬರಿಸಿದರು. ಇವರು ನಾಲ್ಕನೇ ವಿಕೆಟ್‌ಗೆ 79ರನ್‌ ಕಲೆಹಾಕಿದರು. ‌

17ನೇ ಓವರ್‌ನಲ್ಲಿ ಆಮ್ಲಾ, ಮಹಮ್ಮದ್‌ ಸೈಫುಲ್ಲಾಗೆ ವಿಕೆಟ್‌ ನೀಡಿದರು. ಬಳಿಕ ಮಿಲ್ಲರ್‌, ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದರು. ಅವರು ಕ್ರೀಸ್‌ನಲ್ಲಿದ್ದಷ್ಟು ಸಮಯ ಗ್ಯಾಲರಿಯಲ್ಲಿ ಕುಳಿತಿದ್ದ ಪ್ರೇಕ್ಷಕರೇ ಕ್ಷೇತ್ರರಕ್ಷಕರಾಗಿದ್ದರು!

ಮಿಲ್ಲರ್‌ ಬೌಂಡರಿ (7) ಮತ್ತು ಸಿಕ್ಸರ್‌ಗಳ (9) ಮೂಲವೇ 82ರನ್‌ ಗಳಿಸಿದ್ದು ಅವರ ಅಬ್ಬರಕ್ಕೆ ಸಾಕ್ಷಿಯಾಗಿತ್ತು.

ಅವರು, ಫರ್ಹಾನ್‌ ಬೆಹಾರ್ಡೀನ್‌ ಜೊತೆ ಮುರಿಯದ ಐದನೇ ವಿಕೆಟ್‌ ಪಾಲುದಾರಿಕೆಯಲ್ಲಿ 67ರನ್‌ ದಾಖಲಿಸಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 224 (ಹಾಶಿಮ್‌ ಆಮ್ಲಾ 85, ಎ.ಬಿ.ಡಿವಿಲಿಯರ್ಸ್‌ 20, ಡೇವಿಡ್‌ ಮಿಲ್ಲರ್‌ ಔಟಾಗದೆ 101; ಶಕೀಬ್‌ ಅಲ್‌ ಹಸನ್‌ 22ಕ್ಕೆ2, ಮಹಮ್ಮದ್‌ ಸೈಫುದ್ದೀನ್‌ 53ಕ್ಕೆ2).

ಬಾಂಗ್ಲಾದೇಶ: 18.3 ಓವರ್‌ಗಳಲ್ಲಿ 141(ಸೌಮ್ಯ ಸರ್ಕಾರ್‌ 44, ಮಹಮೂದುಲ್ಲಾ 24, ಮಹಮ್ಮದ್‌ ಸೈಫುದ್ದೀನ್‌ 23; ಜೆ.ಪಿ.ಡುಮಿನಿ 23ಕ್ಕೆ2, ಆ್ಯರನ್‌ ಫಂಗಿಸೊ 31ಕ್ಕೆ2, ಫ್ರೈಲಿಂಕ್‌ 9ಕ್ಕೆ1).

ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 83ರನ್‌ಗಳ ಗೆಲುವು. ಹಾಗೂ 2–0ರಲ್ಲಿ ಸರಣಿ.
ಪಂದ್ಯ ಮತ್ತು ಸರಣಿ ಶ್ರೇಷ್ಠ: ಡೇವಿಡ್‌ ಮಿಲ್ಲರ್‌.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.