ADVERTISEMENT

ಮಿಶ್ರ ಡಬಲ್ಸ್‌ನಲ್ಲಿ ಮಣಿಕಾ–ಸತ್ಯನ್‌ ಮಿಂಚು; ಶರತ್‌ಗೆ ಕಂಚು

ಟೇಬಲ್‌ ಟೆನಿಸ್‌: ಭಾರತ ತಂಡದ ಶ್ರೇಷ್ಠ ಸಾಧನೆ; ಕೂಟದಲ್ಲಿ ನಾಲ್ಕನೆ ಪದಕ ಗೆದ್ದ ಬಾತ್ರಾ

ಪಿಟಿಐ
Published 15 ಏಪ್ರಿಲ್ 2018, 19:30 IST
Last Updated 15 ಏಪ್ರಿಲ್ 2018, 19:30 IST
ಅಚಂತ ಶರತ್ ಕಮಲ್ ಅವರ ಆಟದ ಭಂಗಿ
ಅಚಂತ ಶರತ್ ಕಮಲ್ ಅವರ ಆಟದ ಭಂಗಿ   

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ ಅಂತಿಮ ದಿನವಾದ ಭಾನುವಾರ ಟೇಬಲ್‌ ಟೆನಿಸ್‌ ವಿಭಾಗದಲ್ಲಿ ಭಾರತದ ಖಾತೆಗೆ ಎರಡು ಪದಕಗಳು ಸೇರ್ಪಡೆಯಾದವು.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಮಣಿಕಾ ಬಾತ್ರಾ ಮತ್ತು ಜ್ಞಾನಶೇಖರನ್‌ ಸತ್ಯನ್‌ ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಅಚಂತ ಶರತ್‌ ಕಮಲ್‌ ಅವರು ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು.

ಮಿಶ್ರ ಡಬಲ್ಸ್‌ ವಿಭಾಗದ ಕಂಚಿನ ಪದಕದ ಹೋರಾಟದಲ್ಲಿ ಮಣಿಕಾ ಮತ್ತು ಸತ್ಯನ್‌ 11–6, 11–2, 11–4ರ ನೇರ ಗೇಮ್‌ಗಳಿಂದ ಭಾರತದವರೇ ಆದ ಶರತ್‌ ಕಮಲ್‌ ಮತ್ತು ಮೌಮಾ ದಾಸ್‌ ಅವರನ್ನು ಪರಾಭವಗೊಳಿಸಿದರು. ಕೂಟದಲ್ಲಿ ಮಣಿಕಾ ಜಯಿಸಿದ ನಾಲ್ಕನೆ ಪದಕ ಇದಾಗಿದೆ.

ADVERTISEMENT

ಸಿಂಗಲ್ಸ್‌ ಮತ್ತು ತಂಡ ವಿಭಾಗಗಳಲ್ಲಿ ಚಿನ್ನ ಜಯಿಸಿದ್ದ ಅವರು ಮಹಿಳೆಯರ ಡಬಲ್ಸ್‌ನಲ್ಲಿ ಮೌಮಾ ದಾಸ್‌ ಜೊತೆಗೂಡಿ ಬೆಳ್ಳಿಯ ಪದಕ ಗೆದ್ದಿದ್ದರು.

ಸಿಂಗಲ್ಸ್‌ ವಿಭಾಗದಲ್ಲಿ ವಿಶ್ವದ ಬಲಿಷ್ಠ ಆಟಗಾರ್ತಿಯರನ್ನು ಮಣಿಸಿದ್ದ ಮಣಿಕಾ, ಮಿಶ್ರ ಡಬಲ್ಸ್‌ ವಿಭಾಗದ ಹೋರಾಟದಲ್ಲೂ ಮಿಂಚಿದರು.

ಮೊದಲ ಗೇಮ್‌ನಲ್ಲಿ ಮಣಿಕಾ ಮತ್ತು ಸತ್ಯನ್‌ ಮೋಡಿ ಮಾಡಿದರು. ಶರವೇಗದ ಸರ್ವ್‌ಗಳನ್ನು ಮಾಡಿದ ಭಾರತದ ಜೋಡಿ, ಟಾಪ್‌ಸ್ಪಿನ್‌ ರಿಟರ್ನ್‌ಗಳಿಂದ ಶರತ್‌ ಮತ್ತು ಮೌಮಾ ಅವರನ್ನು ಕಂಗೆಡಿಸಿತು.

ಎರಡನೆ ಗೇಮ್‌ನಲ್ಲೂ ಮಣಿಕಾ ಮತ್ತು ಸತ್ಯನ್‌ ಅವರ ಆಟ ರಂಗೇರಿತು. ಬ್ಯಾಕ್‌ಹ್ಯಾಂಡ್‌ ಮತ್ತು ಫೋರ್‌ಹ್ಯಾಂಡ್‌ ಹೊಡೆತಗಳ ಮೂಲಕ ವೇಗವಾಗಿ ಪಾಯಿಂಟ್ಸ್‌ ಗಳಿಸಿದ ಅವರು ಗೇಮ್‌ ಜಯಿಸಿ 2–0ರ ಮುನ್ನಡೆ ಪಡೆದರು.

ಮೂರನೆ ಗೇಮ್‌ನಲ್ಲಿ ಶರತ್‌ ಮತ್ತು ಮೌಮಾ ತಿರುಗೇಟು ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು. ಅಬ್ಬರದ ಆಟ ಆಡಿದ ಸತ್ಯನ್‌ ಮತ್ತು ಮಣಿಕಾ ನಿರಾಯಾಸವಾಗಿ ಎದುರಾಳಿಗಳ ಸವಾಲು ಮೀರಿದರು.

ಶರತ್‌ಗೆ ಕಂಚು: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಶರತ್‌ ಕಮಲ್‌ ಕಂಚಿನ ಸಾಧನೆ ಮಾಡಿದರು.

ಕಂಚಿನ ಪದಕದ ಹಣಾಹಣಿಯಲ್ಲಿ ಶರತ್‌ 11–7, 11–9, 9–11, 11–6, 12–10ರಲ್ಲಿ ಇಂಗ್ಲೆಂಡ್‌ನ ಸ್ಯಾಮುಯೆಲ್‌ ವಾಕರ್‌ ಅವರನ್ನು ಸೋಲಿಸಿದರು.

ಭಾರತಕ್ಕೆ ಅಗ್ರಸ್ಥಾನ: ಈ ಬಾರಿಯ ಕೂಟದಲ್ಲಿ ಭಾರತ ತಂಡ ಒಟ್ಟು ಎಂಟು ಪದಕಗಳನ್ನು ಜಯಿಸಿ ಟೇಬಲ್‌ ಟೆನಿಸ್‌ನ ವಿಭಾಗದಲ್ಲಿ ಅತಿ ಹೆಚ್ಚು ಪದಕ ಗೆದ್ದ ಹಿರಿಮೆ ತನ್ನದಾಗಿಸಿಕೊಂಡಿತು. 10 ಸದಸ್ಯರನ್ನೊಳಗೊಂಡ ಭಾರತ ಮೂರು ಚಿನ್ನ, ಎರಡು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಮಡಿಲಿಗೆ ಹಾಕಿಕೊಂಡಿತು.

ಸಿಂಗಪುರ ಮತ್ತು ಇಂಗ್ಲೆಂಡ್‌ ತಂಡಗಳು ಕ್ರಮವಾಗಿ ಎರಡು ಮತ್ತು ಮೂರನೆ ಸ್ಥಾನಗಳಲ್ಲಿ ಕಾಣಿಸಿಕೊಂಡವು. ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಗ್ಲಾಸ್ಗೊ ಕೂಟದಲ್ಲಿ ಭಾರತ ತಂಡ ಒಂದು ಬೆಳ್ಳಿಯ ಪದಕ ಗೆದ್ದಿತ್ತು. 2010ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕೂಟದಲ್ಲಿ ಭಾರತದ ಟೇಬಲ್‌ ಟೆನಿಸ್‌ ಆಟಗಾರರು ಐದು ಪದಕಗಳನ್ನು ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.