ADVERTISEMENT

ಮುಂಬೈಗೆ ರೋಚಕ ಜಯ

ಆ್ಯಂಡ್ರ್ಯೂ ಟೈಗೆ ನಾಲ್ಕು ವಿಕೆಟ್

ಪಿಟಿಐ
Published 16 ಮೇ 2018, 20:01 IST
Last Updated 16 ಮೇ 2018, 20:01 IST
ಕಿಂಗ್ಸ್‌ ಇಲೆವನ್‌ ಪರ ಅರ್ಧಶತಕ ಗಳಿಸಿದ ಕೆ.ಎಲ್‌.ರಾಹುಲ್ ಬ್ಯಾಟಿಂಗ್ ವೈಖರಿ
ಕಿಂಗ್ಸ್‌ ಇಲೆವನ್‌ ಪರ ಅರ್ಧಶತಕ ಗಳಿಸಿದ ಕೆ.ಎಲ್‌.ರಾಹುಲ್ ಬ್ಯಾಟಿಂಗ್ ವೈಖರಿ   

ಮುಂಬೈ : ಜಸ್‌ಪ್ರೀತ್‌ ಬೂಮ್ರಾ (15ಕ್ಕೆ3) ಮತ್ತು ಮಿಷೆಲ್‌ ಮೆಕ್‌ಲೆನಾಗನ್‌ (37ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಮುಂಬೈ ಇಂಡಿಯನ್ಸ್‌ ತಂಡ ಐಪಿಎಲ್‌ 11ನೇ ಆವೃತ್ತಿಯ ಪಂದ್ಯದಲ್ಲಿ ಮೂರು ರನ್‌ಗಳಿಂದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ವಿರುದ್ಧ ಗೆದ್ದಿದೆ.

ಇದರೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿರುವ ರೋಹಿತ್‌ ಶರ್ಮಾ ಬಳಗ ‘ಪ್ಲೇ ಆಫ್‌’ ಪ್ರವೇಶಿಸುವ ಕನಸನ್ನು ಜೀವಂತವಾಗಿ ಇಟ್ಟುಕೊಂಡಿದೆ.

ಆರ್‌ಸಿಬಿ, ರಾಜಸ್ಥಾನ್‌ ರಾಯಲ್ಸ್‌, ಕಿಂಗ್ಸ್‌ ಇಲೆವನ್‌ ಪಂಜಾಬ್‌ ಮತ್ತು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡಗಳೂ ಪ್ಲೇ ಆಫ್‌ ರೇಸ್‌ನಲ್ಲಿವೆ.

ADVERTISEMENT

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 186 ರನ್ ಗಳಿಸಿತು. ಗುರಿ ಬೆನ್ನಟ್ಟಿದ್ದ ಆರ್‌.ಅಶ್ವಿನ್‌ ಮುಂದಾಳತ್ವದ ಕಿಂಗ್ಸ್‌ ಇಲೆವನ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 183ರನ್‌ ಗಳಿಸಿತು.

ಟಾಸ್ ಸೋತ ಮುಂಬೈ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಆರಂಭ ಉತ್ತಮವಾಗಿರಲಿಲ್ಲ. ಎವಿನ್ ಲೂಯಿಸ್ (9 ರನ್) ನಾಲ್ಕನೇ ಓವರ್‌ನಲ್ಲಿ ಔಟಾದರು. ಆ್ಯಂಡ್ರ್ಯೂ ಟೈ ಹಾಕಿದ ಆರನೇ ಓವರ್‌ನಲ್ಲಿ ಇಶಾನ್ ಕಿಶನ್ (20 ರನ್) ಡಗ್‌ಔಟ್‌ಗೆ ಮರಳಿದರು.

ನಂತರದ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ (27 ರನ್) ಕೂಡ ಔಟಾದರು. ನಾಯಕ ರೋಹಿತ್ ಶರ್ಮಾ (6 ರನ್ ) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ.

ಈ ಹಂತದಲ್ಲಿ ಜೊತೆಗೂಡಿದ ಕೃಣಾಲ್ ಪಾಂಡ್ಯ (32;23ಎ,1ಬೌಂ, 2ಸಿ) ಮತ್ತು ಕೀರನ್‌ ಪೊಲಾರ್ಡ್ (50; 23ಎ, 5ಬೌಂ, 3ಸಿ) ಅವರು ಕಿಂಗ್ಸ್‌ ಬೌಲರ್‌ಗಳನ್ನು ಕಾಡಿದರು. ಇವರು 5ನೇ ವಿಕೆಟ್‌ಗೆ 65 ರನ್ ಸೇರಿಸಿದರು. ಇದರಿಂದಾಗಿ ತಂಡವು ಉತ್ತಮ ಮೊತ್ತ ಗಳಿಸಿತು.

ಗುರಿ ಬೆನ್ನಟ್ಟಿದ ಕಿಂಗ್ಸ್‌ ಇಲೆವನ್‌ಗೆ ರಾಹುಲ್‌ ಮತ್ತು ಕ್ರಿಸ್‌ ಗೇಲ್‌ (18; 11ಎ, 2ಬೌಂ, 1ಸಿ) ಉತ್ತಮ ಆರಂಭ ನೀಡಿದರು. ಇವರು 3.5 ಓವರ್‌ಗಳಲ್ಲಿ 34ರನ್‌ ಕಲೆಹಾಕಿದರು.

ನಾಲ್ಕನೇ ಓವರ್‌ನಲ್ಲಿ ಗೇಲ್‌ ಔಟಾದರು. ನಂತರ ಬಂದ ಆ್ಯರನ್‌ ಫಿಂಚ್‌ (46; 35ಎ, 3ಬೌಂ, 1ಸಿ) ಮಿಂಚಿನ ಆಟ ಆಡಿ ತಂಡದ ಗೆಲುವಿನ ಆಸೆಗೆ ಬಲ ತುಂಬಿದರು. ಆದರೆ ಕೊನೆಯಲ್ಲಿ ರಾಹುಲ್‌ ಮತ್ತು ಯುವರಾಜ್‌ ಸಿಂಗ್‌ ವಿಕೆಟ್‌ ಉರುಳಿಸಿದ ಮುಂಬೈ ಬೌಲರ್‌ಗಳು ರೋಹಿತ್‌ ಪಡೆಗೆ ಗೆಲುವು ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 186 (ಸೂರ್ಯಕುಮಾರ್ ಯಾದವ್ 27, ಇಶಾನ್ ಕಿಶನ್ 20, ಕೃಣಾಲ್ 32, ಕೀರನ್ ಪೊಲಾರ್ಡ್ 50, ಆ್ಯಂಡ್ರ್ಯೂ ಟೈ 16ಕ್ಕೆ4, ಆರ್. ಅಶ್ವಿನ್ 18ಕ್ಕೆ2). ಕಿಂಗ್ಸ್‌ ಇಲೆವನ್‌ ಪಂಜಾಬ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 183 (ಕೆ.ಎಲ್‌.ರಾಹುಲ್‌ 94, ಕ್ರಿಸ್‌ ಗೇಲ್‌ 18, ಆ್ಯರನ್‌ ಫಿಂಚ್‌ 46, ಅಕ್ಷರ್‌ ಪಟೇಲ್‌ ಔಟಾಗದೆ 10; ಮಿಷೆಲ್‌ ಮೆಕ್‌ಲೆನಾಗನ್‌ 37ಕ್ಕೆ2, ಜಸ್‌ಪ್ರೀತ್‌ ಬೂಮ್ರಾ 15ಕ್ಕೆ3).

ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 3ರನ್‌ ಗೆಲುವು.

ಪಂದ್ಯಶ್ರೇಷ್ಠ: ಜಸ್‌ಪ್ರೀತ್‌ ಬೂಮ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.