ADVERTISEMENT

ಮುನ್ನಡೆಯಲ್ಲಿ ಬಾಲಕಿಶನ್, ಶ್ರೀರಾಮ್

ರಾಜ್ಯ 25 ವರ್ಷದೊಳಗಿನವರ ಚೆಸ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 19:59 IST
Last Updated 6 ಜುಲೈ 2013, 19:59 IST

ದಾವಣಗೆರೆ: ಕಳೆದ ಬಾರಿಯ ವಿಜೇತ ಎ.ಬಾಲಕಿಶನ್, ಆರನೇ ಸುತ್ತಿನಲ್ಲಿ ಕೊನೆಯದಾಗಿ ಮುಗಿದ ದೀರ್ಘ ಪಂದ್ಯದಲ್ಲಿ ಶಿವಮೊಗ್ಗದ ಕಿಶನ್ ಗಂಗೊಳ್ಳಿ ವಿರುದ್ಧ `ಪಾಸರ್ ಪಾನ್' ನೆರವಿನಿಂದ ಗೆಲುವು ಸಾಧಿಸಿದರು.

ಬೆಂಗಳೂರಿನ ಬಾಲಕಿಶನ್ ಈ ಗೆಲುವಿನಿಂದ ರಾಜ್ಯ 25 ವರ್ಷದೊಳಗಿನವರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಅಗ್ರ ಶ್ರೇಯಾಂಕದ ಶ್ರೀರಾಮ ಸರ್ಜಾ (ಶಿವಮೊಗ್ಗ) ಜತೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ಅಭಿನವ ರೇಣುಕಾ ಮಂದಿರದಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಇಬ್ಬರೂ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಗರಿಷ್ಠ ಆರು ಪಾಯಿಂಟ್ಸ್ ಸಂಗ್ರಹಿಸ್ದ್ದಿದಾರೆ.

ಒಂದು ಪಾಯಿಂಟ್ ಹಿಂದೆಬಿದ್ದಿರುವ ಏಳು ಮಂದಿ ತಲಾ ಐದು ಪಾಯಿಂಟ್‌ಗಳೊಡನೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಅವರೆಂದರೆ- ಎ.ಆಗಸ್ಟಿನ್ (ಕೊಡಗು), ಆರ್.ಶ್ರೀಧರ್ (ಶಿವಮೊಗ್ಗ), ಆಂಡ್ರಿಯಾ ಡಿಸೋಜ (ಮಂಗಳೂರು), ಎ.ಅಮಿತ್ (ಬೆಂಗಳೂರು), ಲಿಖಿತ್ ಚಿಲ್ಕುರಿ (ದಾವಣಗೆರೆ), ಮನೋಜ್ ಕುಲಕರ್ಣಿ (ಬೆಳಗಾವಿ) ಮತ್ತು ನರೇಶ್ ಬಿ. (ಉಡುಪಿ).

ಆರನೇ ಸುತ್ತಿನ ಫಲಿತಾಂಶ: ಮೊದಲ ಬೋರ್ಡ್‌ನಲ್ಲಿ ಶ್ರೀರಾಮ್ ಸರ್ಜಾ, ಮಾಜಿ ಚಾಂಪಿಯನ್ ಎ.ಆಗಸ್ಟಿನ್ ವಿರುದ್ಧ ಆರಂಭಿಕ ಮೇಲುಗೈಯನ್ನು 55ನೇ ನಡೆಯಲ್ಲಿ ಗೆಲುವಾಗಿ ಪರಿವರ್ತಿಸಿದರು. ಮೂರನೇ ಬೋರ್ಡ್‌ನಲ್ಲಿ ಆರ್.ಶ್ರೀಧರ್ ಮತ್ತು ಶಿವಮೊಗ್ಗದ ಕೇದಾರ್ ವಝೆ (4.5) ನಡುವಣ ಸೆಣಸಾಟ `ಡ್ರಾ' ಆಯಿತು.

ಕಪ್ಪು ಕಾಯಿಗಳಲ್ಲಿ ಆಡಿದ ಆಂಡ್ರಿಯಾ ಡಿಸೋಜ, ಧಾರವಾಡದ ಓಂಕಾರ್ ಎಸ್.ಗಣೇಶಕರ (4) ವಿರುದ್ಧ, ಎ.ಅಮಿತ್, ಧಾರವಾಡದ ಪ್ರಜ್ವಲೇಶ್ (4) ವಿರುದ್ಧ ಜಯಗಳಿಸಿದರು. ಲಿಖಿತ್ ಚಿಲ್ಕುರಿ, ಬಳ್ಳಾರಿಯ ಎಸ್.ಆಕಾಶ್ (4) ವಿರುದ್ಧ, ಬಿ.ನರೇಶ್, ದಾವಣಗೆರೆಯ ಟಿ.ಜಿ.ಅರ್ಜುನ್ (4) ವಿರುದ್ಧ ಗೆಲುವನ್ನು ದಾಖಲಿಸಿದರು.

ಕಾರವಾರದ ಅವಿನಾಶ ಡಿ.ಮರಾಠೆ (4.5), ಬೆಂಗಳೂರಿನ ಓಜಸ್ ಕುಲಕರ್ಣಿ (4.5) ಜೊತೆ `ಶಾಂತಿ ಒಪ್ಪಂದ'ಕ್ಕೆ ಸಹಿಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.