ADVERTISEMENT

ಮುರಳಿ ವಿಜಯ್ ಶತಕ

ಇರಾನಿ ಕಪ್: ಸವಾಲಿನ ಮೊತ್ತದತ್ತ ಭಾರತ ಇತರೆ ದಿಟ್ಟ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2013, 19:59 IST
Last Updated 6 ಫೆಬ್ರುವರಿ 2013, 19:59 IST
ಮುಂಬೈನಲ್ಲಿ ರಣಜಿ ಚಾಂಪಿಯನ್ ಮುಂಬೈ ಎದುರು ಬುಧವಾರ ಆರಂಭವಾದ ಇರಾನಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ 144 ರನ್ ಸೇರಿಸಿದ ಭಾರತ ಇತರೆ ತಂಡದ ಮುರಳಿ ವಿಜಯ್ (ಎಡಬದಿ) ಹಾಗೂ ಶಿಖರ್ ಧವನ್ ತಮಾಷೆಯಲ್ಲಿ ತೊಡಗಿದ್ದ ಕ್ಷಣ     	-ಪಿಟಿಐ ಚಿತ್ರ
ಮುಂಬೈನಲ್ಲಿ ರಣಜಿ ಚಾಂಪಿಯನ್ ಮುಂಬೈ ಎದುರು ಬುಧವಾರ ಆರಂಭವಾದ ಇರಾನಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ 144 ರನ್ ಸೇರಿಸಿದ ಭಾರತ ಇತರೆ ತಂಡದ ಮುರಳಿ ವಿಜಯ್ (ಎಡಬದಿ) ಹಾಗೂ ಶಿಖರ್ ಧವನ್ ತಮಾಷೆಯಲ್ಲಿ ತೊಡಗಿದ್ದ ಕ್ಷಣ -ಪಿಟಿಐ ಚಿತ್ರ   

ಮುಂಬೈ (ಪಿಟಿಐ): ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ ಗಳಿಸಿದ ಶತಕದ ನೆರವಿನಿಂದ ಭಾರತ ಇತರೆ ತಂಡ ರಣಜಿ ಚಾಂಪಿಯನ್ ಮುಂಬೈ ವಿರುದ್ಧದ ಇರಾನಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆ ಹಾಕಿದೆ.

ವಾಂಖೇಡೆ  ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಐದು ದಿನಗಳ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಎದುರಾಳಿ ಇತರೆ ತಂಡಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು. ಇದೇ ಅವಕಾಶವನ್ನು ಬಳಸಿಕೊಂಡ ಹರಭಜನ್ ಸಿಂಗ್ ನೇತೃತ್ವದ ಭಾರತ ಇತರೆ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 330 ರನ್ ಕಲೆ ಹಾಕಿದೆ.

ಮುರಳಿ ಶತಕ:
ಅತ್ಯುತ್ತಮ ಕವರ್ ಡ್ರೈವ್ ಹೊಡೆತಗಳ ಮೂಲಕ ಮುರಳಿ ಮುಂಬೈ ಬೌಲರ್‌ಗಳನ್ನು ಕಾಡಿದರು. ಈ ಬಲಗೈ ಬ್ಯಾಟ್ಸ್‌ಮನ್ 206 ಎಸೆತಗಳಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 116 ರನ್ ಗಳಿಸಿದರು. ಈ ಶತಕ ಭಜ್ಜಿ ಪಡೆ ಮೊದಲ ದಿನ ಗೌರವಾರ್ಹ ಮೊತ್ತ ಗಳಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿತು. ಮುರಳಿ ಇರಾನಿ ಕಪ್‌ನಲ್ಲಿ ಗಳಿಸಿದ ಎರಡನೇ ಶತಕವಿದು.

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ದ್ವಿಶತಕ (266) ಗಳಿಸಿದ್ದರು. ತಮಿಳುನಾಡಿನ ಈ ಬ್ಯಾಟ್ಸ್‌ಮನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಗಳಿಸಿದ 11ನೇ ಶತಕ ಇದಾಯಿತು. ಮುರಳಿ ಹಾಗೂ ಶಿಖರ್ ಧವನ್ (63, 101ಎಸೆತ, 11ಬೌಂಡರಿ) ಮೊದಲ ವಿಕೆಟ್ ಜೊತೆಯಾಟದಲ್ಲಿ 144 ರನ್ ಕಲೆ ಹಾಕಿದರು. ಇದು ಮೊದಲ ದಿನದಾಟದಲ್ಲಿ ಮೂಡಿಬಂದ ಗರಿಷ್ಠ ರನ್ ಜೊತೆಯಾಟ.

ಶಿಖರ್ ಅವರನ್ನು ಶರ್ದೂಲ್ ಠಾಕೂರ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವ ಮೂಲಕ ಈ ಜೊತೆಯಾಟಕ್ಕೆ ತಡೆ ಒಡ್ಡಿದರು.
ಪರದಾಟ: ತವರಿನ ಕ್ರೀಡಾಂಗಣದಲ್ಲಿಯೇ ಆತಿಥೇಯ ಬೌಲರ್‌ಗಳು ವಿಕೆಟ್ ಪಡೆಯಲು ಸಾಕಷ್ಟು ಪರದಾಟ ನಡೆಸಬೇಕಾಯಿತು. ಆದರೆ, ರಣಜಿ ಫೈನಲ್ ಪಂದ್ಯದಲ್ಲಿ ಮುಂಬೈ ಬೌಲರ್‌ಗಳು ಇದೇ ಪಿಚ್‌ನಲ್ಲಿ ಹೆಚ್ಚಿನ ವಿಕೆಟ್ ಕಬಳಿಸುವಲ್ಲಿ ಯಶಸ್ಸು ಕಂಡಿದ್ದರು. ಮೊದಲ ಹಾಗೂ ಮೂರನೇ ದಿನದಾಟದಲ್ಲಿ ಸೌರಾಷ್ಟ್ರ ತಂಡವನ್ನು ಎರಡೂ ಇನಿಂಗ್ಸ್‌ಗಳಲ್ಲಿ ಆಲ್‌ಔಟ್ ಮಾಡಿದ್ದರು.

ಗಮನ ಸೆಳೆದ ಅಭಿಷೇಕ್: ದಿನದಾಟದಲ್ಲಿ ಎರಡನೇ ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಿದ ವೇಗಿ ಅಭಿಷೇಕ್ ನಾಯರ್ ಬೇಗನೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಒಂಬತ್ತು ರನ್‌ಗಳ ಅಂತರದಲ್ಲಿ ಎರಡು ವಿಕೆಟ್ ಉರುಳಿಸಿದ್ದೇ ಇದಕ್ಕೆ ಸಾಕ್ಷಿ.

ಮುಂಬೈ ತಂಡದ ನಾಯಕ ಅಭಿಷೇಕ್ ಶತಕ ಗಳಿಸಿದ್ದ ವಿಜಯ್ ಅವರನ್ನು ಬೌಲ್ಡ್ ಮಾಡಿದರೆ, ಮನೋಜ್ ತಿವಾರಿ (37, 67ಎಸೆತ, 7ಬೌಂಡರಿ) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ನಂತರ ಬಂದ ಅಂಬಟಿ ರಾಯುಡು (51, 83ಎಸೆತ, 9 ಬೌಂಡರಿ), ಸುರೇಶ್ ರೈನಾ (ಬ್ಯಾಟಿಂಗ್ 36, 68ಎಸೆತ, 4ಬೌಂಡರಿ 1 ಸಿಕ್ಸರ್) ತಂಡ ಸಂಕಷ್ಟಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸಿದರು.

ವೀರೂ ಅಲಭ್ಯ
ಮುಂಬೈ:
ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಪಂದ್ಯ ಆರಂಭವಾಗುವ ಕೊಂಚ ಹೊತ್ತಿನ ಮುನ್ನ ತೀವ್ರ ಹೊಟ್ಟೆ ನೋವಿನಿಂದ ಬಳಲಿದ ಕಾರಣ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಆದ್ದರಿಂದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸುವ ನಿಟ್ಟಿನಲ್ಲಿ ಆಯ್ಕೆದಾರರ ಗಮನ ಸೆಳೆಯಲು ಸೆಹ್ವಾಗ್‌ಗೆ ಈ ಪಂದ್ಯ ಉತ್ತಮ ಅವಕಾಶವಾಗಿತ್ತು.

ಸ್ಕೋರ್ ವಿವರ

ADVERTISEMENT

ಭಾರತ ಇತರೆ 90 ಓವರ್‌ಗಳಲ್ಲಿ 5 ವಿಕೆಟ್‌ಗೆ 330
ಶಿಖರ್ ಧವನ್  ಬಿ ಶಾರ್ದೂಲ್ ಠಾಕೂರ್  63
ಮುರಳಿ ವಿಜಯ್ ಬಿ ಅಭಿಷೇಕ್ ನಾಯರ್  116
ಮನೋಜ್ ತಿವಾರಿ ಎಲ್‌ಬಿಡಬ್ಲ್ಯು ಬಿ ಅಭಿಷೇಕ್ ನಾಯರ್  37
ಅಂಬಟಿ ರಾಯುಡು ಸಿ ಜಾಫರ್ ಬಿ ರೋಹಿತ್ ಶರ್ಮ  51
ಸುರೇಶ್ ರೈನಾ ಬ್ಯಾಟಿಂಗ್ 36
ವೃದ್ಧಿಮಾನ್ ಸಹಾ ಎಲ್‌ಬಿಡಬ್ಲ್ಯು ಬಿ ಧವಳ್ ಕುಲಕರ್ಣಿ  17
ಹರಭಜನ್ ಸಿಂಗ್ ಬ್ಯಾಟಿಂಗ್  00
ಇತರೆ: (ಲೆಗ್ ಬೈ-4, ವೈಡ್-1, ನೋ ಬಾಲ್-5)  10
ವಿಕೆಟ್ ಪತನ: 1-144 (ಧವನ್; 38.1), 2-222 (ತಿವಾರಿ; 58.6), 3-231 (ವಿಜಯ್; 62.6), 4-309 (ರಾಯುಡು; 83.2), 5-330 (ಸಹಾ; 88.5).
ಬೌಲಿಂಗ್: ಜಾವೇದ್ ಖಾನ್ 14-4-41-0, ಧವಳ್ ಕುಲಕರ್ಣಿ 17-3-64-1, ಶಾರ್ದೂಲ್ ಠಾಕೂರ್ 12-1-55-1, ವಿಶಾಲ್ ದಬೋಲ್ಕರ್ 18-2-64-0, ಅಭೀಷೇಕ್ ನಾಯರ್ 19-9-49-2, ಅಂಕಿತ್ ಚವ್ಹಾಣ್ 5-0-33-0, ರೋಹಿತ್ ಶರ್ಮ 5-2-20-1.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.