ADVERTISEMENT

ಮೂರನೇ ಸುತ್ತಿಗೆ ಪೇಸ್-ಭೂಪತಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 19:30 IST
Last Updated 22 ಜನವರಿ 2011, 19:30 IST
ಮೂರನೇ ಸುತ್ತಿಗೆ ಪೇಸ್-ಭೂಪತಿ
ಮೂರನೇ ಸುತ್ತಿಗೆ ಪೇಸ್-ಭೂಪತಿ   

ಮೆಲ್ಬರ್ನ್ (ಪಿಟಿಐ): ವಿಶ್ವಾಸಪೂರ್ಣ ಆಟವಾಡಿದ ಮೂರನೇ ಶ್ರೇಯಾಂಕಿತ ಆಟಗಾರರಾದ ಭಾರತದ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದರು. ಶನಿವಾರ ಇಲ್ಲಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಪೇಸ್-ಭೂಪತಿ ಜೋಡಿ 7-6, 6-4ರಲ್ಲಿ ಸ್ಪೇನ್‌ನ ಫೆಲಿಸಿನೋ ಲೊಪೆಜ್ ಹಾಗೂ ಅರ್ಜೆಂಟೀನಾದ ಜೂವಾನ್ ಮೊನಾಕೊ ವಿರುದ್ಧ ಗೆಲುವು ಸಾಧಿಸಿತು. ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತದ ಜೋಡಿ ಮೊದಲ ಸೆಟ್‌ನಲ್ಲಿ ಎದುರಾಳಿ ಆಟಗಾರರಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಈ ಪಂದ್ಯವು 90 ನಿಮಿಷಗಳವರೆಗೆ ನಡೆಯಿತು.

ಭಾರತದ ಈ ಜೋಡಿ ಮೂರನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಮಾರ್ಸೆಲ್ ಗ್ರಾನೊಲ್ಲೆರ್ಸ್‌ ಮತ್ತು ಟಾಮಿ ರಾಬ್ರೆಡೊ ವಿರುದ್ಧ ಪೈಪೋಟಿ ನಡೆಸಲಿದೆ. ಎರಡನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಜೋಡಿ 7-5, 6-3ರಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್ ಡೊಗೊಪೋಲೊವಾ ಹಾಗೂ ಜೆಕ್ ಗಣರಾಜ್ಯದ ಜಾನ್ ಹಾಜೆಕ್ ಜೋಡಿಯನ್ನು ಮಣಿಸಿತು.

ನಡಾಲ್‌ಗೆ ಜಯ: ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಆಟಗಾರ ಸ್ಪೇನ್‌ನ ರಫೆಲ್ ನಡಾಲ್ 6-2, 7-5, 6-3 ರಲ್ಲಿ ಆಸ್ಟ್ರೇಲಿಯಾದ ಬರ್ನಾರ್ಡ್ ಟೊಮಿಕ್ ಅವರನ್ನು ಮಣಿಸಿದರು. ಇತರ ಪಂದ್ಯಗಳಲ್ಲಿ ಸ್ವೀಡನ್‌ನ ನಾಲ್ಕನೇ ಶ್ರೇಯಾಂಕಿತ ರಾಬಿನ್ ಸೊಡೆರ್‌ಲಿಂಗ್ 6-3, 6-1, 6-4ರಲ್ಲಿ ಜೆಕ್ ಗಣರಾಜ್ಯದ ಜಾನ್ ಹೆನ್ರಿಚ್ ಮೇಲೂ, ಕ್ರೊಯೇಷಿಯಾದ ಮರಿನ್ ಸಿಲಿಕ್ 4-6, 6-2, 6-7, 7-6, 9-7ರಲ್ಲಿ ಅಮೆರಿಕದ ಜಾನ್ ಇಸ್ನೆರ್ ವಿರುದ್ಧವೂ, ಸ್ಪೇನ್‌ನ ಡೇವಿಡ್ ಫೆರರ್ 6-2, 6-2, 6-1ರಲ್ಲಿ ಲಿಥುವೇನಿಯಾದ ರಿಚರ್ಡ್ ಬೆರನಿಕಿಸ್ ಮೇಲೂ, ಕೆನಡಾದ ಮಿಲೋಸ್ ರಾನಿಕ್ 6-4, 7-5, 4-6, 6-4ರಲ್ಲಿ ರಷ್ಯಾದ ಮೆಕಾಯಿಲ್ ಯೂಜ್ನಿ ವಿರುದ್ಧವೂ ಗೆಲುವು ಪಡೆದರು.

ಸ್ಟಾಸರ್ ನಿರ್ಗಮನ: ಐದನೇ ಶ್ರೇಯಾಂಕದ ಆಟಗಾರ್ತಿ ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್ ಅವರು ಮಹಿಳೆಯರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನಲ್ಲಿ ಸೋಲು ಅನುಭವಿಸಿದರು. ಶನಿವಾರ ನಡೆದ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ 7-6, 6-3 ರಲ್ಲಿ ಸ್ಟಾಸರ್ ಅವರನ್ನು ಮಣಿಸಿದರು.

ಎರಡನೇ ಶ್ರೇಯಾಂಕದ ಆಟಗಾರ್ತಿ ವೆರಾ ಜೊನಾರೇವಾ 6-3, 7-6ರಲ್ಲಿ ಜೆಕ್ ಗಣರಾಜ್ಯದ ಲುಸಿಯಾ ಸಫರೋವಾ ಮೇಲೆ ಗೆಲುವು ಪಡೆದರು. ಮೂರನೇ ಶ್ರೇಯಾಂಕದ ಆಟಗಾರ್ತಿ ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ ಅವರು 7-6, 6-3ರಲ್ಲಿ ಫ್ರಾನ್ಸ್‌ನ ಅಲಿಜಾ ಕಾರ್ನೆಟ್ ಮೇಲೆ ಗೆಲುವು ಪಡೆದು ಮುಂದಿನ ಹಂತ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.