ADVERTISEMENT

ಮೈಕಲ್‌ ಕ್ಲಾರ್ಕ್‌ ಶತಕ

ಕ್ರಿಕೆಟ್‌: ಆಸೀಸ್‌ ಸವಾಲಿನ ಮೊತ್ತ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ಕೇಪ್‌ ಟೌನ್‌ (ಎಎಫ್‌ಪಿ): ಮೈಕಲ್‌ ಕ್ಲಾರ್ಕ್‌ ಗಳಿಸಿದ ಅಜೇಯ ಶತಕದ(161) ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಬೃಹತ್‌ ಮೊತ್ತ ಪೇರಿಸಿದೆ.

ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಭಾನುವಾರ ಆಸೀಸ್‌ ತಂಡ 127.4 ಓವರ್‌ಗಳಲ್ಲಿ 7 ವಿಕೆಟ್‌ಗೆ 494 ರನ್‌ ಗಳಿಸಿದೆ. ಮಳೆಯ ಕಾರಣ ಎರಡನೇ ದಿನದ ಅಂತಿಮ ಅವಧಿಯ ಆಟ ನಡೆಯಲಿಲ್ಲ.

ಆಸೀಸ್‌ ತಂಡ ಮೂರು ವಿಕೆಟ್‌ಗೆ 331 ರನ್‌ಗಳಿಂದ ಆಟ ಮುಂದುವರಿಸಿತ್ತು. ಮೊದಲ ದಿನ ಡೇವಿಡ್‌ ವಾರ್ನರ್‌ ಶತಕದ ಮೂಲಕ ಮಿಂಚಿದ್ದರೆ, ಎರಡನೇ ದಿನ ನಾಯಕ ಮೈಕಲ್‌ ಕ್ಲಾರ್ಕ್‌ ಬ್ಯಾಟಿಂಗ್‌ ವೈಭವ ತೋರಿದರು.

ಕ್ಲಾರ್ಕ್‌ ಮತ್ತು ಸ್ಟೀವನ್‌ ಸ್ಮಿತ್‌ ಕ್ರಮವಾಗಿ 92 ಹಾಗೂ 50 ರನ್‌ಗಳಿಂದ ದಿನದಾಟ ಮುಂದುವರಿಸಿದ್ದರು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಕ್ಲಾರ್ಕ್‌ ಅವರು ವೆರ್ನಾನ್‌ ಫಿಲಾಂಡರ್‌ ಎಸೆತದಲ್ಲಿ ಬೌಂಡರಿ ಗಳಿಸಿ ಶತಕ ಪೂರೈಸಿದರು. ಸ್ಮಿತ್‌ (84, 155 ಎಸೆತ) ಶತಕ ಗಳಿಸುವ ಅವಕಾಶ ಕಳೆದುಕೊಂಡರು. ಅವರು ಔಟಾಗುವ ಮುನ್ನ ಕ್ಲಾರ್ಕ್‌ ಜೊತೆ ನಾಲ್ಕನೇ ವಿಕೆಟ್‌ಗೆ 184 ರನ್‌ ಸೇರಿಸಿದರು.

ಆಸೀಸ್‌ ತಂಡ ದಿನದ ಮೊದಲ ಅವಧಿಯಲ್ಲಿ ಸ್ಮಿತ್‌ ಅವರ ವಿಕೆಟ್‌ ಕಳೆದುಕೊಂಡು 103 ರನ್‌ ಕಲೆಹಾಕಿತು. ಎರಡನೇ ಅವಧಿಯಲ್ಲಿ 13.4 ಓವರ್‌ಗಳ ಆಟ ನಡೆದಾಗ ಮಳೆ ಸುರಿಯಿತು. ಆ ಬಳಿಕ ಆಟ ನಡೆಯಲಿಲ್ಲ. 301 ಎಸೆತಗಳನ್ನು ಎದುರಿಸಿರುವ ಕ್ಲಾರ್ಕ್‌ 17 ಬೌಂಡರಿ ಗಳಿಸಿದ್ದಾರೆ.

73 ರನ್‌ಗಳಿಗೆ ನಾಲ್ಕು ವಿಕೆಟ್‌ ಪಡೆದ ಜೆ.ಪಿ. ಡುಮಿನಿ ದಕ್ಷಿಣ ಆಫ್ರಿಕಾ ಪರ ಯಶಸ್ವಿ ಬೌಲರ್‌ ಎನಿಸಿಕೊಂಡರು. ಮೊದಲ ದಿನ ಗಾಯದ ಸಮಸ್ಯೆ ಎದುರಿಸಿದ್ದ ಡೇಲ್‌ ಸ್ಟೇನ್‌ ಎರಡನೇ ದಿನ ಬೌಲಿಂಗ್‌ ಮಾಡಲಿಲ್ಲ.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ 127.4 ಓವರ್‌ಗಳಲ್ಲಿ 7 ವಿಕೆಟ್‌ಗೆ 494 (ಮೈಕಲ್‌ ಕ್ಲಾರ್ಕ್‌ ಬ್ಯಾಟಿಂಗ್‌ 161, ಸ್ಟೀವನ್‌ ಸ್ಮಿತ್‌ 84, ಶೇನ್‌ ವಾಟ್ಸನ್‌ 40, ಜೆ.ಪಿ. ಡುಮಿನಿ 73ಕ್ಕೆ 4)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.