ADVERTISEMENT

ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಭಾರತ

ತ್ರೀಕೋನ ಏಕದಿನ ಸರಣಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 11:05 IST
Last Updated 1 ಜುಲೈ 2013, 11:05 IST
ಗೆಲುವಿನ ಸಂಭ್ರಮದಲ್ಲಿ ಕೆಮರ್ ರೋಚ್ ಮತ್ತು ಟಿನೊ ಬೆಸ್ಟ್  - ಎಎಫ್‌ಪಿ ಚಿತ್ರ
ಗೆಲುವಿನ ಸಂಭ್ರಮದಲ್ಲಿ ಕೆಮರ್ ರೋಚ್ ಮತ್ತು ಟಿನೊ ಬೆಸ್ಟ್ - ಎಎಫ್‌ಪಿ ಚಿತ್ರ   

ಕಿಂಗ್‌ಸ್ಟನ್ : ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವು ವೆಸ್ಟ್‌ಇಂಡೀಸ್ ವಿರುದ್ಧ ಭಾನುವಾರ ಆಡಿದ ಮೊದಲ ಪಂದ್ಯದಲ್ಲೇ ಸೋತಿದೆ. ಇನ್ನೂ 14 ಎಸೆತಗಳು ಬಾಕಿ ಇರುವಂತೆಯೇ ವಿಂಡೀಸ್ ಒಂದು ವಿಕೆಟ್ ಗಳ ಗೆಲುವು ಪಡೆಯಿತು.

ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ಟಾಸ್ ಸೋತರೂ ದೋನಿ ಬಳಗಕ್ಕೆ ಮೊದಲು ಬ್ಯಾಟ್ ಮಾಡಲು ಅವಕಾಶ ಲಭಿಸಿತು. ಆದರೆ ವಿಂಡೀಸ್ ದಾಳಿಗೆ ಸಿಲುಕಿ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 229 ರನ್ ಕಲೆಹಾಕಿತು. ರೋಹಿತ್ ಶರ್ಮಾ ಅರ್ಧಶತಕ ಮತ್ತು ಸುರೇಶ್ ರೈನಾ 44 ರನ್ ತಂಡದ ಪರ ಅತ್ಯಧಿಕ ಮೊತ್ತ.
    
ವಿಂಡೀಸ್ ತಂಡದ ಕೆಮರ್ ರೋಚ್, ಟಿನೊ ಬೆಸ್ಟ್ ಮತ್ತು ಡರೆನ್ ಸಮಿ ತಲಾ ಎರಡು ವಿಕೆಟ್ ಪಡೆದರು. ಮಾರ್ಲೊನ್ ಸ್ಯಾಮುಯೆಲ್ಸ್ 9 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ ಒಂದು ವಿಕೆಟ್ ಕಿತ್ತರು.

ಬಳಿಕ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಕೀರನ್ ಪೊಲಾರ್ಡ್ ನಾಯಕತ್ವದ ವಿಂಡೀಸ್ ತಂಡವೂ ಭಾರತದ ಕರಾರುವಕ್ಕಾದ ದಾಳಿಗೆ ನಲುಗಿತು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಗೇಲ್ (11ರನ್) ನಿರ್ಗಮನ ತಂಡಕ್ಕೆ ಆಘಾತ ನೀಡಿತು. ಆದರೆ ಚಾರ್ಲ್ಸ್ (95 ರನ್ 100 ಎಸೆತ) ಮತ್ತು ಬ್ರಾವೋ (55ರನ್ 78ಎಸೆತ) ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ನರೇನ್ ಮತ್ತು ರೋಚ್ ತಂಡವನ್ನು ಗೆಲುವಿನ ದಡ ಸೇರಿಸಿದರು.

ADVERTISEMENT

ಭಾರತದ ಪರ ಉತ್ತಮ ದಾಳಿ ನಡೆಸಿದ ವೇಗಿಗಳಾದ ಉಮೇಶ್ ಯಾದವ್ 3, ಇಶಾಂತ್ ಶರ್ಮಾ 2, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು. ಸ್ಪಿನ್ನರ್ ಗಳಾದ ಅಶ್ವಿನ್ 2, ರೈನಾ 1 ವಿಕೆಟ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.