ADVERTISEMENT

ಮೋದಿ ಮೇಲೆ ಆಜೀವ ನಿಷೇಧ

ಬಿಸಿಸಿಐ ವಿಶೇಷ ಮಹಾಸಭೆಯಲ್ಲಿ ಮಹತ್ವದ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ಚೆನ್ನೈ (ಪಿಟಿಐ/ಐಎಎನ್‌ಎಸ್‌): ಭಾರತದ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿದ ಐಪಿಎಲ್‌ ಟೂರ್ನಿಯ ಪರಿಕಲ್ಪನೆಗೆ ಕಾರಣವಾಗಿದ್ದ ಲಲಿತ್‌ ಮೋದಿ ಈಗ ಅನಾಥರಾಗಿದ್ದಾರೆ. ಅವರ ಮೇಲೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಆಜೀವ ನಿಷೇಧ ಹೇರಿದೆ.

ಹಲವು ಅಡೆತಡೆಗಳ ನಡುವೆ ಬುಧವಾರ ಮಧ್ಯಾಹ್ನ ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಮಂಡಳಿಯ ವಿಶೇಷ ಮಹಾಸಭೆಯಲ್ಲಿ ಅವಿರೋಧವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆ ಆರಂಭವಾಗಿ ಅರ್ಧ ಗಂಟೆಯಲ್ಲಿ ಮುಗಿದು ಹೋಯಿತು.

2008–2010ರ ಅವಧಿಯಲ್ಲಿ ಐಪಿಎಲ್‌ನಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರ, ಅಶಿಸ್ತು ಹಾಗೂ ಅನುಚಿತ ವರ್ತನೆ ಕಾರಣ ಮೋದಿ ಅವರ ಮೇಲೆ ಕ್ರಿಕೆಟ್‌ ಮಂಡಳಿ ಈ ಶಿಕ್ಷೆ ವಿಧಿಸಿದೆ. ಒಟ್ಟು ಎಂಟು ಆರೋಪಗಳ್ನು ಅವರ ಮೇಲೆ ಹೊರಿಸಲಾಗಿದೆ.

ವಿಶೇಷವೆಂದರೆ ಈ ಸಭೆಯ ಸಾರಥ್ಯ ವಹಿಸಿದ್ದು ಬಿಸಿಸಿಐ ಅಧ್ಯಕ್ಷ (ಅಧಿಕಾರ ರಹಿತ) ಎನ್‌.ಶ್ರೀನಿವಾಸನ್‌.

‘ಮೋದಿ ಅವರ ವಿಚಾರಣೆಯ ಸಂಬಂಧ ಷೋಕಾಸ್‌ ನೋಟಿಸ್‌ ನೀಡಿದ್ದರ ಬಗ್ಗೆ ಶಿಸ್ತು ಸಮಿತಿ ಸಲ್ಲಿಸಿದ್ದ ವರದಿಯ ಕುರಿತು ವಿಶೇಷ ಮಹಾಸಭೆಯಲ್ಲಿ ಚರ್ಚಿಸಲಾಯಿತು’ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್‌ ಪಟೇಲ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

‘ಮೋದಿ ಅಶಿಸ್ತು ಹಾಗೂ ಅನುಚಿತ ವರ್ತನೆ ತೋರಿರುವ ಕಾರಣ ನಾವು ಈ ಕ್ರಮಕ್ಕೆ ಮುಂದಾಗಿದ್ದೇವೆ. ನಿಯಮಗಳ ಪ್ರಕಾರ ನಾವು ಅವರನ್ನು ಮಂಡಳಿಯಿಂದ ಉಚ್ಛಾಟಿಸಿದ್ದೇವೆ. ಇನ್ನುಮುಂದೆ ಅವರು ಮಂಡಳಿಯ ಯಾವುದೇ ಹುದ್ದೆಯನ್ನು ಹೊಂದುವಂತಿಲ್ಲ’ ಎಂದು ಅವರು ಹೇಳಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಯಾವುದೇ ಸದಸ್ಯರು ಮೋದಿ ಅವರಿಗೆ ಬೆಂಬಲ ನೀಡಲಿಲ್ಲ ಎಂಬುದು ತಿಳಿದುಬಂದಿದೆ. ಮೋದಿ ಅವರ ಮೇಲೆ ಆಜೀವ ನಿಷೇಧ ಶಿಕ್ಷೆ ಹೇರಲು ಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಬೇಕಿತ್ತು. ಅಂದರೆ ಬಿಸಿಸಿಐನಲ್ಲಿ ಒಟ್ಟು 31 ಮತಗಳಿದ್ದು ಆಜೀವ ಶಿಕ್ಷೆ ವಿಧಿಸಲು 21 ಮತಗಳ ಅಗತ್ಯವಿತ್ತು.

‘ಮೋದಿ ನಿಷೇಧ ಸಂಬಂಧ ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ಹರಿಯಾಣದ ಅನಿರುಧ್‌ ಚೌಧರಿ ವಿಷಯ ಮಂಡಿಸಿದರು. ಅದಕ್ಕೆ ಒಡಿಶಾದ ರಂಜೀಬ್‌ ಬಿಸ್ವಾಲ್‌ ಅನುಮೋದನೆ ನೀಡಿದರು. ಈ ಸಭೆಯಲ್ಲಿ ಎಲ್ಲಾ ಸದಸ್ಯರು ಪಾಲ್ಗೊಂಡು ನಿಷೇಧದ ಪರ ಮತದಾನ ಮಾಡಿದರು’ ಎಂದು ಬಿಸಿಸಿಐ ಮಾಜಿ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ನುಡಿದರು.

ಶ್ರೀನಿವಾಸನ್‌ ಈ ಸಭೆಯ ನೇತೃತ್ವ ವಹಿಸಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಹಿಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿತ್ತು. ಹಾಗಾಗಿ ಅವರು ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು’ ಎಂದರು.

ಮೋದಿ ಐಪಿಎಲ್‌ನ ಮೊದಲ ಮೂರು ಅವತರಣಿಕೆಗಳಲ್ಲಿ ಅಧ್ಯಕ್ಷರಾಗಿದ್ದರು. ಆದರೆ ಹಣಕಾಸು ಅವ್ಯವಹಾರ ಆರೋಪ ಕಾರಣ 2010ರಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಲು ನೇಮಿಸಿದ್ದ ಅರುಣ್‌ ಜೇಟ್ಲಿ, ಜ್ಯೋತಿರಾದಿತ್ಯ ಸಿಂದಿಯಾ ಅವರನ್ನೊಳಗೊಂಡ ಶಿಸ್ತು ಸಮಿತಿ 134 ಪುಟಗಳ ವರದಿಯನ್ನು ಜುಲೈನಲ್ಲಿ ಸಲ್ಲಿಸಿತ್ತು. ಆದರೆ ಯಾವುದೇ ವಿಚಾರಣೆಗೆ ಮೋದಿ ಹಾಜರಾಗಿರಲಿಲ್ಲ.

ವಿಶೇಷ ಮಹಾಸಭೆ ಕರೆಯಲು ಮಂಡಳಿಗೆ ಹಲವು ಅಡೆತಡೆ ಸೃಷ್ಟಿಯಾಗಿದ್ದವು. ಸಭೆ ನಡೆಸದಂತೆ ಪಟಿಯಾಲ ಹೌಸ್‌ ಕೋರ್ಟ್‌ನಲ್ಲಿ ಮೋದಿ  ತಡೆಯಾಜ್ಞೆ ತಂದಿದ್ದರು. ಆದರೆ ಕೆಲ ದಿನಗಳ ಬಳಿಕ ದೆಹಲಿ ಹೈಕೋರ್ಟ್‌ ನೀಡಿದ ತೀರ್ಪು ಮೋದಿಗೆ ಹಿನ್ನಡೆಯಾಗಿ ಪರಿಣಮಿಸಿತು.

ಮೋದಿ ವಿರುದ್ಧದ ಆರೋಪಗಳು
*2010ರ ಹರಾಜು ಪ್ರಕ್ರಿಯೆಯಲ್ಲಿ ಕುತಂತ್ರ
*ಐಪಿಎಲ್‌ಗೆ ಪರ್ಯಾಯ ಲೀಗ್‌ ಸ್ಥಾಪಿಸಲು ಇಂಗ್ಲೆಂಡ್‌ನಲ್ಲಿ ಪ್ರಯತ್ನ
*ಬಿಸಿಸಿಐ–ಇಸಿಬಿ ನಡುವೆ ಘರ್ಷಣೆಗೆ ಕಾರಣವಾಗಿದ್ದು
*ಪ್ರಸಾರ ಹಕ್ಕಿನಲ್ಲಿ ಹಣಕಾಸು ಅವ್ಯವಹಾರ
*ಕೊಚ್ಚಿ ಫ್ರಾಂಚೈಸ್‌ಗೆ ಬೆದರಿಕೆ
*ಐಪಿಎಲ್‌ ವೆಬ್‌ಸೈಟ್‌ ಹಕ್ಕು ಖರೀದಿಸಿದ ಕಂಪೆನಿಯಲ್ಲಿ ಸಂಬಂಧಿಕರು ಷೇರು ಹೊಂದಿರುವುದನ್ನು ಬಹಿರಂಗಪಡಿಸದೇ ಇದ್ದದ್ದು
*ಥಿಯೇಟರಿನಲ್ಲಿ ಐಪಿಎಲ್‌ ವೀಕ್ಷಿಸಲು ಅನುವು ಮಾಡಿಕೊಟ್ಟ ಥಿಯೇಟರ್‌ ಹಕ್ಕು ಸಂಬಂಧ ವಿವಾದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.