ADVERTISEMENT

ಯುವಿ ಆಟಕ್ಕೆ ಮುರಳಿ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 14 ಮೇ 2014, 19:30 IST
Last Updated 14 ಮೇ 2014, 19:30 IST
ಯುವಿ ಆಟಕ್ಕೆ ಮುರಳಿ ಮೆಚ್ಚುಗೆ
ಯುವಿ ಆಟಕ್ಕೆ ಮುರಳಿ ಮೆಚ್ಚುಗೆ   

‌ಬೆಂಗಳೂರು: ಡೆಲ್ಲಿ ಡೇರ್‌ಡೆವಿಲ್ಸ್‌ ಮತ್ತು ರಾಜಸ್ತಾನ ರಾಯಲ್ಸ್ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ತೋರಿರುವ ಯುವರಾಜ್‌ ಸಿಂಗ್‌ ಆಟದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸ್ಪಿನ್‌ ಮಾಂತ್ರಿಕ ಮುತ್ತಯ್ಯ ಮರಳೀಧರನ್‌ ‘ಯುವರಾಜ್‌ಗೆ 2015ರ ಏಕದಿನ ವಿಶ್ವಕಪ್‌ ಗೆಲ್ಲಿಸಿಕೊಡುವ ಸಾಮರ್ಥ್ಯ ವಿದೆ’ ಎಂದು ಹೇಳಿದ್ದಾರೆ.

ಈ ಸಲದ ಐಪಿಎಲ್‌ ಆರಂಭದಲ್ಲಿ ಪಂಜಾಬ್‌ನ ಯುವಿ ಅಷ್ಟೇನು ಗಮನಾರ್ಹ ಪ್ರದರ್ಶನ ತೋರಿರಲಿಲ್ಲ. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಡೇರ್‌ಡೆವಿಲ್ಸ್‌ ವಿರುದ್ಧದ ಪಂದ್ಯದಲ್ಲಿ 29 ಎಸೆತಗಳಲ್ಲಿ 68 ರನ್‌ ಸಿಡಿಸಿದ್ದರು. ಇದರಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 16 ರನ್‌ಗಳ ಗೆಲುವು ಪಡೆದಿತ್ತು.

ಆರ್‌ಸಿಬಿ ನೀಡಿದ್ದ ಗುರಿಯನ್ನು ಮುಟ್ಟಲು ಪರದಾಡಿದ ಡೇರ್‌ಡೆವಿಲ್ಸ್‌ ನಿಗದಿತ ಓವರ್‌ಗಳು ಕೊನೆಗೊಂಡಾಗ 170 ರನ್‌ಗಳನ್ನಷ್ಟೇ ಕಲೆ ಹಾಕಿತ್ತು. ಈ ಪಂದ್ಯದ ನಂತರ ಮುರಳೀಧರನ್ ಮಾತನಾಡಿದರು.

‘ನಿಗದಿತ ಓವರ್‌ಗಳ ಪಂದ್ಯಕ್ಕೆ ಯುವರಾಜ್‌ ಸೂಕ್ತ ಬ್ಯಾಟ್ಸ್‌ಮನ್‌. ಟ್ವೆಂಟಿ–20 ವಿಶ್ವಕಪ್‌ನ ಫೈನಲ್‌ ಪಂದ್ಯದ ನಂತರ ಅಭಿಮಾನಿಗಳು ಅವರ ಮೇಲೆ ಹೆಚ್ಚು ಒತ್ತಡ ಹೇರುತ್ತಿದ್ದಾರೆ. ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದ್ದರಿಂದ ಯುವಿ ಆತ್ಮವಿಶ್ವಾಸ ಕೊಂಚ ಕಡಿಮೆಯಾದಂತಿದೆ. ಒತ್ತಡದಲ್ಲೂ ಅವರು ಸೊಗಸಾದ ಆಟವಾಡಿದರು’ ಎಂದು ಲಂಕಾದ ಸ್ಪಿನ್ನರ್‌ ನುಡಿದರು.

ಪೀಟರ್‌ಸನ್‌ ಶ್ಲಾಘನೆ: ‘ಯುವಿಗೆ ಸಾಕಷ್ಟು ಟೀಕೆಗಳು ಎದುರಾದರೂ ಅದೆಲ್ಲದಕ್ಕೂ ಅವರ ಉತ್ತರ ಬ್ಯಾಟ್‌ ಮೂಲಕವೇ. ಸಿಕ್ಸರ್‌ ಬಾರಿಸುವ ರೀತಿ ಕಂಡು ಸಾಕಷ್ಟು ಸಲ ಅಚ್ಚರಿಗೊಂಡಿದ್ದೇನೆ’ ಎಂದು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ನಾಯಕ ಕೆವಿನ್‌ ಪೀಟರ್‌ಸನ್‌ ಶ್ಲಾಘಿಸಿದ್ದಾರೆ.

ಕೊಹ್ಲಿ ಮೆಚ್ಚುಗೆ: ಯುವಿ ಭಾರತ ಏಕದಿನ ವಿಶ್ವಕಪ್‌ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದಾರೆ. ದೇಶದ ಕ್ರಿಕೆಟ್‌ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಾಮರ್ಥ್ಯ ಏನೆಂಬುದು ಈಗ ಗೊತ್ತಾ ಯಿತಲ್ಲಾ’ ಎಂದು ಆರ್‌ಸಿಬಿ ತಂಡದ ನಾಯಕ ಕೊಹ್ಲಿ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.