ADVERTISEMENT

ಯೂಕಿ ಭಾಂಬ್ರಿಗೆ ಬರ್ಡಿಕ್‌ ಸವಾಲು

ಆಸ್ಟ್ರೇಲಿಯಾ ಓಪನ್‌ ಟೆನಿಸ್ ಡ್ರಾ ಪ್ರಕಟ

​ಪ್ರಜಾವಾಣಿ ವಾರ್ತೆ
Published 15 ಜನವರಿ 2016, 19:31 IST
Last Updated 15 ಜನವರಿ 2016, 19:31 IST
ಯೂಕಿ ಭಾಂಬ್ರಿಗೆ ಬರ್ಡಿಕ್‌ ಸವಾಲು
ಯೂಕಿ ಭಾಂಬ್ರಿಗೆ ಬರ್ಡಿಕ್‌ ಸವಾಲು   

ಮೆಲ್ಬರ್ನ್‌ (ಪಿಟಿಐ/ಐಎಎನ್‌ಎಸ್‌): ಈ ಋತುವಿನ ಮೊದಲ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಪ್ರಧಾನ ಹಂತದಲ್ಲಿ ಮೊದಲ ಬಾರಿಗೆ ಆಡುವ ಅವಕಾಶ ಗಳಿಸಿರುವ ಭಾರತದ ಪ್ರಮುಖ ಆಟಗಾರ ಯೂಕಿ ಭಾಂಬ್ರಿಗೆ ಮೊದಲ ಸುತ್ತಿನಲ್ಲಿಯೇ ಕಠಿಣ ಸವಾಲು ಎದುರಾಗಿದೆ.

ಶುಕ್ರವಾರ ಆಸ್ಟ್ರೇಲಿಯಾ ಓಪನ್‌ ಟೂರ್ನಿಯ ಡ್ರಾ ಪ್ರಕಟಗೊಂಡಿದ್ದು ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನಲ್ಲಿ ಯೂಕಿ ಜೆಕ್‌ ಗಣರಾಜ್ಯದ ವಿಶ್ವದ ಆರನೇ ಕ್ರಮಾಂಕದ ಆಟಗಾರ ಥಾಮಸ್‌ ಬರ್ಡಿಕ್‌ ಎದುರು ಸೆಣಸಲಿದ್ದಾರೆ. ವಿಶ್ವದ ಅಗ್ರಮಾನ್ಯ ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌  ಸೆಮಿಫೈನಲ್‌ನಲ್ಲಿ ಮುಖಾ ಮುಖಿಯಾಗುವ ಸಾಧ್ಯತೆ ಇದೆ.

ಹೋದ ವರ್ಷದ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆದಿದ್ದ ಭಾರತದ ಎದುರಿನ ಡೇವಿಸ್‌ಕಪ್‌ ಟೂರ್ನಿಯ ಪಂದ್ಯದಿಂದ ಬರ್ಡಿಕ್‌ ಹಿಂದೆ ಸರಿದಿದ್ದರು. ಹೀಗಾಗಿ ಯೂಕಿ ಮತ್ತು ಬರ್ಡಿಕ್‌ ಪೈಪೋಟಿಯ ನಿರೀಕ್ಷೆ ಹುಸಿ ಯಾಗಿತ್ತು. ಆದರೆ ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್‌ನಲ್ಲಿ ಉಭಯ ಆಟಗಾರರ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ.

ಹೋದ ಋತುವಿನಲ್ಲಿ ಅಮೋಘ ಸಾಮರ್ಥ್ಯ ತೋರಿದ್ದ ಯೂಕಿ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರ ನೂರರ ಒಳಗಿನ ಸ್ಥಾನ ಗಳಿಸಿದ್ದರು. ಇದರೊಂದಿಗೆ  ಟೂರ್ನಿಯ ಪ್ರಧಾನ ಹಂತಕ್ಕೆ ನೇರ ಅರ್ಹತೆ ಗಳಿಸಿದ್ದಾರೆ.

ಅರ್ಹತೆಯ ಸನಿಹ ಮೈನೇನಿ: ಭಾರತದ  ಸಾಕೇತ್‌ ಮೈನೇನಿ ಟೂರ್ನಿಯ ಮುಖ್ಯ ಸುತ್ತಿಗೆ ಅರ್ಹತೆ ಗಳಿಸುವ ಸನಿಹ ದಲ್ಲಿದ್ದಾರೆ.
ಶುಕ್ರವಾರ ನಡೆದ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪೈಪೋಟಿ ಯಲ್ಲಿ ಸಾಕೇತ್‌ 6–1, 7–6ರ ನೇರ ಸೆಟ್‌ಗಳಿಂದ ಇಟಲಿಯ ಲೊರೆಂಜೊ ಜಿಯುಸ್ಟಿನೊ ಅವರನ್ನು ಪರಾಭವ ಗೊಳಿಸಿದರು. ಇದಕ್ಕಾಗಿ  ಒಂದು ಗಂಟೆ 25 ನಿಮಿಷ ಪೈಪೋಟಿ ನಡೆಸಿದರು.
ಮೂರನೇ ಸುತ್ತಿನಲ್ಲಿ ಸಾಕೇತ್‌  ಬೋಸ್ನಿಯಾ ಮತ್ತು ಹೆರ್ಜೆಗೊವಿನಾದ ಮಿರ್ಜಾ ಬೇಸಿಕ್‌ ಎದುರು ಆಡಲಿದ್ದಾರೆ. ಪ್ರಧಾನ ಹಂತಕ್ಕೆ ಅರ್ಹತೆ ಗಳಿಸಲು ಭಾರತದ ಆಟ ಗಾರನಿಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.

ನೊವಾಕ್‌–ಫೆಡರರ್‌ ಪೈಪೋಟಿ ?: ನಿರೀಕ್ಷೆಯಂತೆ ನಡೆದರೆ ಐದು ಬಾರಿಯ ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಜೊಕೊವಿಚ್‌ ಮತ್ತು ಹೆಚ್ಚು ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದ ದಾಖಲೆ ಹೊಂದಿರುವ ಫೆಡರರ್‌ ಸಿಂಗಲ್ಸ್‌  ಸೆಮಿಫೈನಲ್‌ನಲ್ಲಿ ಪೈಪೋಟಿ ನಡೆಸ ಲಿದ್ದಾರೆ.  10 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ಜಯಿಸಿರುವ ಜೊಕೊವಿಚ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಜಪಾನ್‌ನ ಏಳನೇ ಶ್ರೇಯಾಂಕಿತ ಆಟಗಾರ ಕೀ ನಿಶಿಕೋರಿ ಎದುರು ಸೆಣಸಲಿದ್ದರೆ, 17 ಗ್ರ್ಯಾಂಡ್‌ ಸ್ಲಾಮ್‌ ಜಯಿಸಿರುವ  ಫೆಡರರ್‌ಗೆ ಎಂಟರ ಘಟ್ಟದಲ್ಲಿ ಜೆಕ್‌ ಗಣರಾಜ್ಯದ ಬರ್ಡಿಕ್‌ ಸವಾಲು ಎದುರಾಗಲಿದೆ.

ಸೆರೆನಾ ಮೇಲೆ ನಿರೀಕ್ಷೆ:  ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ.

ಸೆರೆನಾ ಜತೆಗೆ ಸಿಮೊನಾ ಹಲೆಪ್‌, ಗಾರ್ಬೈನ್‌ ಮುಗುರುಜಾ, ಅಗ್ನಿಸ್ಕಾ ರಾಡ್ವಾಂಸ್ಕಾ, ಮರಿಯಾ ಶರಪೋವಾ, ಪೆಟ್ರಾ ಕ್ವಿಟೋವಾ ಮತ್ತು ವೀನಸ್‌ ವಿಲಿಯಮ್ಸ್‌ ಅವರೂ ಪ್ರಶಸ್ತಿಯ ರೇಸ್‌ನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.