ADVERTISEMENT

ರಂಗ್‌ದಜೀದ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 19:59 IST
Last Updated 22 ಏಪ್ರಿಲ್ 2013, 19:59 IST
ಬೆಂಗಳೂರಿನಲ್ಲಿ ನಡೆಯುತ್ತಿರುವ ಐ ಲೀಗ್ ಫುಟ್‌ಬಾಲ್ ಲೀಗ್ ಎರಡನೇ ಡಿವಿಷನ್‌ನ ಸೋಮವಾರದ ಪಂದ್ಯದಲ್ಲಿ ಲ್ಯಾಂಗ್‌ಸ್ನಿಂಗ್ ಕ್ಲಬ್ ತಂಡದ ಡೇನಿಯಲ್ ಬಿಡೆಮಿ ಅಯೆನಿ (ಮಧ್ಯದಲ್ಲಿ) ಅವರಿಂದ ಚೆಂಡನ್ನು ಕಸಿದುಕೊಳ್ಳಲು ರಂಗ್‌ದಜೀದ್ ಯುನೈಟೆಡ್ ಫುಟ್‌ಬಾಲ್ ಕ್ಲಬ್ ತಂಡದ ಆಟಗಾರರು ಪ್ರಯತ್ನಿಸಿದರು	  -ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ನಡೆಯುತ್ತಿರುವ ಐ ಲೀಗ್ ಫುಟ್‌ಬಾಲ್ ಲೀಗ್ ಎರಡನೇ ಡಿವಿಷನ್‌ನ ಸೋಮವಾರದ ಪಂದ್ಯದಲ್ಲಿ ಲ್ಯಾಂಗ್‌ಸ್ನಿಂಗ್ ಕ್ಲಬ್ ತಂಡದ ಡೇನಿಯಲ್ ಬಿಡೆಮಿ ಅಯೆನಿ (ಮಧ್ಯದಲ್ಲಿ) ಅವರಿಂದ ಚೆಂಡನ್ನು ಕಸಿದುಕೊಳ್ಳಲು ರಂಗ್‌ದಜೀದ್ ಯುನೈಟೆಡ್ ಫುಟ್‌ಬಾಲ್ ಕ್ಲಬ್ ತಂಡದ ಆಟಗಾರರು ಪ್ರಯತ್ನಿಸಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಾಬಾತುಂದೆ ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ರಂಗ್‌ದಜೀದ್ ಯುನೈಟೆಡ್ ಕ್ಲಬ್ ತಂಡ ಐ-ಲೀಗ್ ಎರಡನೇ ಡಿವಿಷನ್ ಲೀಗ್ ಫುಟ್‌ಬಾಲ್ ಟೂರ್ನಿಯ ಎರಡನೇ ಹಂತದ ಪಂದ್ಯದಲ್ಲಿ ಜಯ ಸಾಧಿಸಿತು.

ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ರಂಗ್‌ದಜೀದ್ ತಂಡ 3-1 ಗೋಲುಗಳಿಂದ ಲ್ಯಾಂಗ್‌ಸ್ನಿಂಗ್ ಕ್ಲಬ್ ತಂಡವನ್ನು ಮಣಿಸಿತು.

ಶಿಲ್ಲಾಂಗ್‌ನ ಎರಡು ತಂಡಗಳ ನಡುವಿನ ಪಂದ್ಯ ಪ್ರಬಲ ಪೈಪೋಟಿಯಿಂದ ಕೂಡಿತ್ತು. ನಾಯಕ ಡೇನಿಯಲ್ ಬಿಡೆಮಿ ಅಯೇನಿ ಎಂಟನೇ ನಿಮಿಷದಲ್ಲಿ ಗೋಲು ಗಳಿಸಿ ಲ್ಯಾಂಗ್‌ಸ್ನಿಂಗ್ ತಂಡಕ್ಕೆ ಮುನ್ನಡೆ ತಂದಿತ್ತರು.

ಆದರೆ ಎರಡನೇ ಅವಧಿಯಲ್ಲಿ ರಂಗ್‌ದಜೀತ್ ಮರುಹೋರಾಟ ನಡೆಸಿತು. ನೈಜೀರಿಯದ ಸ್ಟ್ರೈಕರ್ ಬಾಬಾತುಂದೆ 48, 64 ಮತ್ತು 74ನೇ ನಿಮಿಷಗಳಲ್ಲಿ ಗೋಲು ಗಳಿಸಿ `ಹ್ಯಾಟ್ರಿಕ್' ಸಾಧನೆ ಮಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಗೆಲುವಿನ ಮೂಲಕ ರಂಗ್‌ದಜೀದ್ ಎಂಟು ಪಂದ್ಯಗಳಿಂದ ತನ್ನ ಪಾಯಿಂಟ್‌ಗಳನ್ನು 13ಕ್ಕೆ ಹೆಚ್ಚಿಸಿಕೊಂಡು ಜಂಟಿ ಎರಡನೇ ಸ್ಥಾನಕ್ಕೇರಿತು. ಭವಾನಿಪುರ್ ತಂಡ ಕೂಡಾ ಇಷ್ಟೇ ಪಾಯಿಂಟ್‌ಗಳನ್ನು ಹೊಂದಿದೆ.

ಮಹಮ್ಮಡನ್ ಸ್ಪೋರ್ಟಿಂಗ್ ತಂಡ 17 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಎಲ್ಲ ತಂಡಗಳಿಗೆ ಇನ್ನು ಎರಡು ಪಂದ್ಯಗಳನ್ನು ಆಡಬೇಕಿದೆ. ಆದ್ದರಿಂದ ಮೊದಲ ಎರಡು ಸ್ಥಾನಗಳಲ್ಲಿ ಕಾಣಿಸಿಕೊಳ್ಳಲು ಈ ಮೂರು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ಲ್ಯಾಂಗ್‌ಸ್ನಿಂಗ್ ತಂಡ ಮೊದಲ ಅವಧಿಯಲ್ಲಿ ಮೇಲುಗೈ ಪಡೆದಿತ್ತು. ಆದರೆ ಎರಡನೇ ಅವಧಿಯಲ್ಲಿ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟಿತು. ಡೇನಿಯಲ್ ಎಂಟನೇ ನಿಮಿಷದಲ್ಲಿ ಹೆಡರ್ ಮೂಲಕ ಗೋಲು ಗಳಿಸಿ ಎದುರಾಳಿ ತಂಡಕ್ಕೆ ಅಚ್ಚರಿ ಉಂಟುಮಾಡಿದರು.

ಈ ಗೋಲನ್ನು ತಡೆಯುವ ಪ್ರಯತ್ನದ ವೇಳೆ ರಂಗ್‌ದಜೀದ್ ಗೋಲ್‌ಕೀಪರ್ ಶಂಭು ಮಿಸ್ತ್ರಿ ಗಾಯಗೊಂಡು ಅಂಗಳದಿಂದ ಹೊರನಡೆದರು. ತುಟಿಯ ಗಾಯಕ್ಕೆ ಒಳಗಾದ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ಬಳಿಕ ಸುರ್ಜಯ್ ಪರಿಯಾರ್ ಗೋಲ್‌ಕೀಪರ್‌ನ ಜವಾಬ್ದಾರಿಯನ್ನು ನಿರ್ವಹಿಸಿದರು.

ಮಂಗಳವಾರ ವಿರಾಮದ ದಿನವಾಗಿದ್ದು, ಬುಧವಾರ ನಡೆಯುವ ಪಂದ್ಯಗಳಲ್ಲಿ ಮುಂಬೈ ಟೈಗರ್ಸ್- ಲ್ಯಾಂಗ್‌ಸ್ನಿಂಗ್ ಎಫ್‌ಸಿ (ಮಧ್ಯಾಹ್ನ 1.30ಕ್ಕೆ ಆರಂಭ) ಮತ್ತು ರಂಗ್‌ದಜೀದ್ ಯುನೈಟೆಡ್- ಸದರ್ನ್ ಸಮಿತಿ (ಸಂಜೆ 4.00) ತಂಡಗಳು ಎದುರಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.