ಬೆಂಗಳೂರು: ಗೆಲುವೆಂಬ ಹಣ್ಣಿನ ಗೊಂಚಲನ್ನು ಎರಡೂ ತಂಡಗಳು ಆಸೆಗಣ್ಣಿನಿಂದ ನೋಡುತ್ತಿವೆ. ಆದರೆ, ಜಯದ ಗೊಂಚಲು ಯಾರ ಪಾಲಿಗೆ ಸಿಹಿಯಾಗಲಿದೆಯೋ ಎನ್ನುವ ಕುತೂಹಲ ಈ ರಣಜಿ ಪಂದ್ಯದ ರೋಚಕತೆಯನ್ನು ಹೆಚ್ಚಿಸಿದೆ.
ಈ ಸಲದ ರಣಜಿ ಋತುವಿನಲ್ಲಿ ಮೊದಲ ಗೆಲುವು ಪಡೆಯುವ ಕನಸು ಆತಿಥೇಯ ತಂಡದ್ದಾದರೆ, ಕರ್ನಾಟಕದ ವಿರುದ್ಧ ಚೊಚ್ಚಲ ಗೆಲುವು ಸಾಧಿಸಿ ಇತಿಹಾಸ ಬರೆಯುವ ಕನವರಿಕೆ ಒಡಿಶಾ ತಂಡದ್ದು. ಈ ಕಾಯುವಿಕೆಗೆ ಮಂಗಳವಾರ ಉತ್ತರ ದೊರೆಯಲಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕದ ಗೆಲುವಿನ ಇನ್ನೂ 202 ರನ್‌ಗಳ ಅಗತ್ಯವಿದೆ. ಈ ತಂಡ ಸೋಮವಾರದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 19 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 43 ರನ್ ಗಳಿಸಿದೆ. ಆರಂಭದಲ್ಲಿಯೇ ಕೆ.ಬಿ. ಪವನ್ (15) ಔಟಾದ ಕಾರಣ ವಿನಯ್ ಪಡೆ ಸಂಕಷ್ಟಕ್ಕೆ ಸಿಲುಕಿದೆ. ಒಡಿಶಾ ದ್ವಿತೀಯ ಇನಿಂಗ್ಸ್‌ನಲ್ಲಿ 74 ಓವರ್‌ಗಳಲ್ಲಿ 255 ರನ್ ಕಲೆಹಾಕಿತು.
ವಿನಯ್ ಮಿಂಚು: ಭಾನುವಾರ ಒಡಿಶಾ ತಂಡದ ಎರಡು ವಿಕೆಟ್ ಪಡೆದಿದ್ದ ವೇಗಿ ಆರ್. ವಿನಯ್ ಕುಮಾರ್ ಮೂರನೇ ದಿನವೂ ಮಿಂಚು ಹರಿಸಿದರು. ದಾವಣಗೆರೆಯ ಈ ವೇಗಿ ಸೋಮವಾರ ಐದು ವಿಕೆಟ್ ಉರುಳಿಸಿದರು. ಇದರಿಂದ ರಣಜಿ ಕ್ರಿಕೆಟ್‌ನಲ್ಲಿ ಒಡಿಶಾದ ಎದುರು ಹತ್ತು ವಿಕೆಟ್ ಪಡೆದ ಕರ್ನಾಟಕ ಮೂರನೇ ಬೌಲರ್ ಎನ್ನುವ ಕೀರ್ತಿಗೂ ಪಾತ್ರರಾದರು. ವಿನಯ್ ಮೊದಲ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ಪಡೆದಿದ್ದರು.
ಮೂರನೇ ದಿನ ಗೋವಿಂದ ಪೊದ್ದಾರ (16) ಅವರ ಮಿಡ್‌ವಿಕೆಟ್ ಎಗರಿಸುವ ಮೂಲಕ ವಿನಯ್ ತಮ್ಮ ವಿಕೆಟ್ `ಯಾತ್ರೆ'ಗೆ ಚಾಲನೆ ನೀಡಿದರು. ಮೊನಚಾದ ಲೇನ್ ಹಾಗೂ ಲೆಂಗ್ತ್‌ಗಳನ್ನು ಹಾಕಿದ ಈ ಬಲಗೈ ಬೌಲರ್ ಸುಭ್ರಜಿತ್ ಸಾಹೂ (48, 109ಎಸೆತ, 8 ಬೌಂಡರಿ), ಬಿಪ್ಲವ್ ಸಾಮಂತ್ರಿಯೆ (86, 138ಎಸೆತ, 13 ಬೌಂಡರಿ) ವಿಕೆಟ್ ಉರುಳಿಸಿ ಒಡಿಶಾದ ರನ್ ಓಟಕ್ಕೆ ಕಡಿವಾಣ ಹಾಕಿದರು.
ಅತ್ತ ಇತ್ತ: ಕರ್ನಾಟಕದ ಗೆಲುವಿಗೆ ಅಲ್ಪ ಮೊತ್ತದ ಗುರಿಯಿದ್ದರೂ ಬಲಿಷ್ಠ ಬೌಲಿಂಗ್ ಶಕ್ತಿ ಹೊಂದಿರುವ ಒಡಿಶಾದ ಎದುರು ಇದು ಸುಲಭದ ಮಾತಲ್ಲ. ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ತಂಡ ಕೇವಲ 213 ರನ್‌ಗೆ ಆಲ್‌ಔಟ್ ಆಗಿದ್ದೇ ಇದಕ್ಕೆ ಸಾಕ್ಷಿ. ಆದ್ದರಿಂದ ಗೆಲುವಿನ ಅವಕಾಶ ಎರಡೂ ತಂಡಗಳಿಗೂ ಇದೆ.
ಮೂರೂ ದಿನವೂ ಬೆಳಿಗ್ಗಿನ ಅವಧಿಯ ಪಿಚ್ ಬೌಲರ್‌ಗಳಿಗೆ ನೆರವು ನೀಡಿದೆ. ಇದೇ ಆತಂಕ ವಿನಯ್ ಬಳಗವನ್ನೀಗ ಕಾಡುತ್ತಿದೆ. ಆದ್ದರಿಂದ ಮೊದಲ ಅವಧಿಯಲ್ಲಿ ವಿಕೆಟ್ ಕಳೆದುಕೊಳ್ಳದೇ ಇದ್ದರೆ, ಕರ್ನಾಟಕದ ಜಯದ ಕನಸಿಗೆ ಬಲ ಬರಬಹುದು. ಇಲ್ಲವಾದರೆ, ಒಡಿಶಾಕ್ಕೆ ಇತಿಹಾಸ ಬರೆಯಲು ಅನುವು ಮಾಡಿಕೊಟ್ಟಂತಾಗುತ್ತದೆ.
ನೆರವಾದ ವಿಪ್ಲವ್ ಆಟ: ಹುಣ್ಣಿಮೆ ಹತ್ತಿರ ಬಂದರೆ ಭೋರ್ಗೆರೆಯುವ ಸಮುದ್ರದಂತೆ ಒಡಿಶಾದ ಬ್ಯಾಟ್ಸ್‌ಮನ್‌ಗಳು ಮೇಲಿಂದ ಮೇಲೆ ವಿಕೆಟ್ ಒಪ್ಪಿಸಿದರು. ಆದರೆ, ಇನ್ನೊಂದು ಬದಿಯಿದ್ದ ವಿಪ್ಲವ್ ಮಾತ್ರ ಶಾಂತ ಸಾಗರದಂತೆ ತಳವೂರಿ ನಿಂತುಬಿಟ್ಟರು.
ಒಡಿಶಾ ತಂಡದ ಒಟ್ಟು ಮೊತ್ತ 34 ಓವರ್‌ಗಳಲ್ಲಿ 105 ಆಗಿದ್ದಾಗ ಶಿವಮೊಗ್ಗದ ಎಸ್.ಎಲ್. ಅಕ್ಷಯ್ ಓವರ್‌ನಲ್ಲಿ ನಟರಾಜ್ ಬೆಹೆರಾ (17) ಬೌಲ್ಡ್ ಆದರು. ಈ ಸಂದರ್ಭದಲ್ಲಿ ಒಡಿಶಾ 50 ರನ್ ಗಳಿಸುವ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಬಂದ ಸುಭ್ರಜಿತ್ ಸಾಹೂ ಮಾತ್ರ ವಿಪ್ಲವ್‌ಗೆ ಉತ್ತಮವಾಗಿ ಸಹಕಾರ ನೀಡಿದರು. ಈ ಜೋಡಿ ಆರನೇ ವಿಕೆಟ್ ಜೊತೆಯಾಟದಲ್ಲಿ 166 ಎಸೆತಗಳಲ್ಲಿ 100 ರನ್ ಕಲೆ ಹಾಕಿತು. ಮುಖ್ಯವಾಗಿ ಎರಡು ಗಂಟೆ ಕಾಲ ಕ್ರೀಸ್‌ನಲ್ಲಿ ನಿಂತು ವಿಕೆಟ್ `ಯಾತ್ರೆ'ಗೆ ತಡೆಯೊಡ್ಡಿತು. ಈ ಜೋಡಿಯಿಂದ ಉತ್ತಮ ಜೊತೆಯಾಟ ಮೂಡಿ ಬರದೇ ಹೋಗಿದ್ದರೆ, ಕರ್ನಾಟಕದ ನಾಯಕ ವಿನಯ್ ಭಾನುವಾರ ಹೇಳಿದ್ದ ಮಾತು ಸತ್ಯವಾಗಿ ಬಿಡುತ್ತಿತ್ತು. ಎದುರಾಳಿ ತಂಡವನ್ನು 200 ರನ್ ಒಳಗೆ ನಿಯಂತ್ರಿಸುವ ಗುರಿ ನಮ್ಮದು ಎಂದು ಅವರು ನುಡಿದಿದ್ದರು.
ಬಲಗೈ ಬ್ಯಾಟ್ಸ್‌ಮನ್ ವಿಪ್ಲವ್ ಶತಕದ ಹೊಸ್ತಿಲಲ್ಲಿದ್ದಾಗ ವಿನಯ್ ಮತ್ತೆ ಆರ್ಭಟಿಸಿದರು. 62ನೇ ಓವರ್‌ನ ಮೂರನೇ ಎಸೆತದ ಚೆಂಡು ವಿಪ್ಲವ್ ಬ್ಯಾಟಿಗೆ ಬಡಿದು ಸ್ಲಿಪ್‌ನಲ್ಲಿದ್ದ ಮನೀಷ್ ಪಾಂಡೆ ತೆಕ್ಕೆಯಲ್ಲಿ ಭದ್ರವಾಗಿತ್ತು. ಈ ಜೋಡಿಯನ್ನು ಅಲುಗಿಸಿದ ಆತಿಥೇಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ನಂತರ ಬಂದ ದೀಪಕ್ ಬೆಹೆರಾ (7), ಲಗ್ನಜಿತ್ ಸಮಲ್ (ಔಟಾಗದೆ 20), ಬಸಂತ್ ಮೊಹಾಂತಿ (5) ಮತ್ತು ಅಲೋಕ್ ಮಂಗರಾಜ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.
ಬೆಲೆ ಕಟ್ಟಿದ ಕರ್ನಾಟಕ: ಕಳೆದ ವರ್ಷ ನವೆಂಬರ್‌ನಲ್ಲಿ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ ಇದೇ ಕ್ರೀಡಾಂಗಣದಲ್ಲಿ ರಣಜಿ ಪಂದ್ಯವನ್ನಾಡಿತ್ತು. ಆ ಪಂದ್ಯದಲ್ಲಿ ಆತಿಥೇಯರು ಆರು ಕ್ಯಾಚ್ ಕೈಚಲ್ಲಿ ಪಂದ್ಯವನ್ನೂ ಕೈ ಬಿಟ್ಟಿದ್ದರು. ಒಡಿಶಾ ವಿರುದ್ಧದ ಪಂದ್ಯದಲ್ಲೂ ಅದೇ ತಪ್ಪುಗಳು ಮರುಕಳಿಸಿದವು.
ಮಂಡ್ಯದ ಶರತ್ ಬೌಲಿಂಗ್‌ನಲ್ಲಿ ನಟರಾಜ್ ಬೆಹೆರಾ ಅವರಿಗೆ ವಿಕೆಟ್ ಕೀಪರ್ ಸಿ.ಎಂ. ಗೌತಮ್ ಮೊದಲ ಜೀವದಾನ ನೀಡಿದರೆ, 66.1ನೇ ಓವರ್‌ನಲ್ಲಿ ಲಗ್ನಜಿತ್ ಸಮಲ್ ಹೊಡೆತದ ಚೆಂಡನ್ನು ಸ್ಲಿಪ್‌ನಲ್ಲಿದ್ದ ಕೆ.ಬಿ. ಪವನ್ ಕೈಚೆಲ್ಲುವ ಮೂಲಕ ಮತ್ತೊಂದು ಜೀವದಾನ ನೀಡಿದರು. ಇಲ್ಲವಾದರೆ, ಒಡಿಶಾವನ್ನು ಇನ್ನೂ ಬೇಗನೇ ಕಟ್ಟಿಹಾಕಬಹುದಿತ್ತು.
ಸ್ಕೋರ್ ವಿವರ:
ಒಡಿಶಾ ಮೊದಲ ಇನಿಂಗ್ಸ್ 79.3 ಓವರ್‌ಗಳಲ್ಲಿ 202
ಕರ್ನಾಟಕ ಪ್ರಥಮ ಇನಿಂಗ್ಸ್ 77.5 ಓವರ್‌ಗಳಲ್ಲಿ 213
ಒಡಿಶಾ ಎರಡನೇ ಇನಿಂಗ್ಸ್ 74 ಓವರ್‌ಗಳಲ್ಲಿ 255
(ಭಾನುವಾರದ ಅಂತ್ಯಕ್ಕೆ 12 ಓವರ್‌ಗಳಲ್ಲಿ 2 ವಿಕೆಟ್‌ಗೆ 30)
ಅಲೋಕ್ ಸಾಹೂ ಎಲ್‌ಬಿಡಬ್ಲ್ಯು ಸ್ಟುವರ್ಟ್ ಬಿನ್ನಿ 37
ಗೋವಿಂದ ಪೊದ್ದಾರ ಬಿ ಆರ್. ವಿನಯ್ ಕುಮಾರ್ 16
ವಿಪ್ಲವ್ ಸಾಮಂತ್ರಯೆ ಸಿ ಮನೀಷ್ ಪಾಂಡೆ ಬಿ ಆರ್. ವಿನಯ್ ಕುಮಾರ್ 86
ನಟರಾಜ್ ಬೆಹೆರಾ ಬಿ ಎಸ್.ಎಲ್ ಅಕ್ಷಯ್ 17
ಸುಭ್ರಜಿತ್ ಸಾಹೂ ಎಲ್‌ಬಿಎಬ್ಲ್ಯು ಬಿ ಆರ್. ವಿನಯ್ ಕುಮಾರ್ 48
ದೀಪಕ್ ಬೆಹೆರಾ ಸಿ ಸಿ.ಎಂ. ಗೌತಮ್ ಬಿ ಆರ್. ವಿನಯ್ ಕುಮಾರ್ 07
ಲಗ್ನಜಿತ್ ಸಮಲ್ ಔಟಾಗದೆ 20
ಬಸಂತ್ ಮೊಹಾಂತಿ ಸಿ ಸಿ.ಎಂ. ಗೌತಮ್ ಬಿ ಆರ್. ವಿನಯ್ ಕುಮಾರ್ 05
ಅಲೋಕ್ ಮಂಗರಾಜ್ ಬಿ ಎಸ್.ಎಲ್. ಅಕ್ಷಯ್ 00
ಇತರೆ: (ಬೈ-4, ಲೆಗ್ ಬೈ-6, ನೋ ಬಾಲ್-5) 15
ವಿಕೆಟ್ ಪತನ: 1-0 (ಸಂದೀಪ್; 0.5), 2-8 (ನಿರಂಜನ್; 2.8), 3-54 (ಪೊದ್ದಾರ; 18.4), 4-64 (ಅಲೋಕ್; 21.3), 5-105 (ನಟರಾಜ್; 33.6), 6-205 (ವಿಪ್ಲವ್; 61.3), 7-216 (ದೀಪಕ್; 63.6), 8-242 (ಸುಭ್ರಜಿತ್; 70.6), 9-252 (ಬಸಂತ್; 72.5), 10-255 (ಮಂಗರಾಜ್; 73.6).
ಬೌಲಿಂಗ್: ಆರ್. ವಿನಯ್ ಕುಮಾರ್ 21-6-58-7, ಎಸ್.ಎಲ್. ಅಕ್ಷಯ್ 13-1-43-2, ಎಚ್.ಎಸ್. ಶರತ್ 17-1-70-0, ಕೆ.ಪಿ. ಅಪ್ಪಣ್ಣ 6-0-23-0, ಅಮಿತ್ ವರ್ಮಾ 1-0-4-0, ಸ್ಟುವರ್ಟ್ ಬಿನ್ನಿ 14-5-39-1, ರಾಬಿನ್ ಉತ್ತಪ್ಪ 2-0-8-0.
ಕರ್ನಾಟಕ ದ್ವಿತೀಯ ಇನಿಂಗ್ಸ್ 19 ಓವರ್‌ಗಳಲ್ಲಿ 1 ವಿಕೆಟ್‌ಗೆ 43
ಕೆ.ಬಿ. ಪವನ್ ಸಿ ಸುಭ್ರಜಿತ್ ಸಾಹೂ ಬಿ ಅಲೋಕ್ ಮಂಗರಾಜ್ 12
ರಾಬಿನ್ ಉತ್ತಪ್ಪ ಬ್ಯಾಟಿಂಗ್ 25
ಗಣೇಶ್ ಸತೀಶ್ ಬ್ಯಾಟಿಂಗ್ 05
ಇತರೆ: (ಲೆಗ್ ಬೈ-1) 01
ವಿಕೆಟ್ ಪತನ: 1-27 (ಪವನ್; 9.5).
ಬೌಲಿಂಗ್: ಬಸಂತ್ ಮೊಹಾಂತಿ 6-1-11-0, ಅಲೋಕ್ ಮಂಗರಾಜ್ 7-2-19-1, ವಿಪ್ಲವ್ ಸಾಮಂತ್ರೆಯ 4-1-10-0, ದೀಪಕ್ ಬೆಹೆರಾ 2-1-2-0.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.