ADVERTISEMENT

ರಣಜಿ ಫೈನಲ್: ವಿನೀತ್, ಆಕಾಶ್ ಜುಗಲ್‌ಬಂದಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಚೆನ್ನೈ: ಹಾಲಿ ಚಾಂಪಿಯನ್ ರಾಜಸ್ತಾನ ತಂಡದವರು ಮೊದಲ ದಿನವೇ ತಮಿಳುನಾಡು ತಂಡದವರಿಗೆ ಬಿಸಿ ಮುಟ್ಟಿಸಿದ್ದಾರೆ. ಆತಿಥೇಯ ತಂಡದವರು ದಿನವಿಡೀ ಬೆವರು ಹರಿಸಿದರೂ ಹೃಷಿಕೇಶ್ ಕಾನಿಟ್ಕರ್ ಪಡೆಯ ಒಂದೂ ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ರಣಜಿ ಟ್ರೋಫಿ  ಕ್ರಿಕೆಟ್ ಟೂರ್ನಿಯ ಪಂದ್ಯದ ಮೊದಲ ದಿನದ ಗೌರವವೆಲ್ಲಾ ರಾಜಸ್ತಾನ ತಂಡಕ್ಕೆ ಸಲ್ಲಬೇಕು. ಈ ತಂಡದವರು ಮೊದಲ ದಿನದ ಆಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 221 ರನ್ ಗಳಿಸಿದ್ದಾರೆ.

ಐದು ದಿನಗಳ ಈ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಕಾಡಿದ್ದು ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವಿನೀತ್ ಸಕ್ಸೇನಾ (ಬ್ಯಾಟಿಂಗ್ 120; 268 ಎಸೆತ, 16 ಬೌಂಡರಿ) ಹಾಗೂ ಆಕಾಶ್ ಚೋಪ್ರಾ (ಬ್ಯಾಟಿಂಗ್ 86; 273 ಎಸೆತ, 10 ಬೌಂಡರಿ). ನಿಧಾನಗತಿಯ ಆಟಕ್ಕೆ ಮೊರೆ ಹೋದ ಇವರಿಬ್ಬರು ಯಾವುದೇ ಅಪಾಯಕ್ಕೆ ಆಸ್ಪದ ನೀಡಲಿಲ್ಲ. ತಾಳ್ಮೆಯ ಆಟವಾಡಿದರು. ಈ ಮೂಲಕ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವತ್ತ ಮೊದಲ ದಿನವೇ ದಿಟ್ಟ ದಾಪುಗಾಲಿಟ್ಟಿದ್ದಾರೆ.

ಆದರೆ ನಾಯಕ ಲಕ್ಷ್ಮಿಪತಿ ಬಾಲಾಜಿ ಪ್ರಯೋಗಿಸಿದ ಎಲ್ಲಾ ತಂತ್ರಗಳು ವಿಫಲವಾದವು. ಬೌಲಿಂಗ್ ಮಾಡಲು ಏಳು ಮಂದಿಗೆ ಚೆಂಡು ಕೊಟ್ಟು ನೋಡಿದರು. ಆದರೆ ಆರಂಭಿಕ ಜೊತೆಯಾಟವನ್ನು ತುಂಡರಿಸಲು ಸಾಧ್ಯವಾಗಲಿಲ್ಲ. 

2010-11ರ ಸೆಮಿಫೈನಲ್‌ನಲ್ಲಿ ಕೂಡ ತಮಿಳುನಾಡು ಎದುರು ರಾಜಸ್ತಾನದ ಆರಂಭಿಕ ಬ್ಯಾಟ್ಸ್‌ಮನ್‌ಗಳು 181 ರನ್ ಗಳಿಸಿದ್ದರು. ಆ ಪಂದ್ಯದಲ್ಲಿ ಯಶಸ್ಸು ಪಡೆದು ಚಾಂಪಿಯನ್ ಆಗಿದ್ದರು. ಈ ಬಾರಿಯೂ ಅದು ಪುನರಾವರ್ತನೆಯಾದಂತಿದೆ.

ಸ್ಕೋರ್ ವಿವರ:
ರಾಜಸ್ತಾನ ಮೊದಲ ಇನಿಂಗ್ಸ್ 90 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 221
ಆಕಾಶ್ ಚೋಪ್ರಾ ಬ್ಯಾಟಿಂಗ್  86
ವಿನೀತ್ ಸಕ್ಸೇನಾ ಬ್ಯಾಟಿಂಗ್  120
ಇತರೆ (ಬೈ-5, ಲೆಗ್‌ಬೈ-5, ವೈಡ್-2, ನೋಬಾಲ್-3) 15
ಬೌಲಿಂಗ್: ಎಲ್.ಬಾಲಾಜಿ 13-6-33-0 (ನೋಬಾಲ್-2), ಜಗನಾಥನ್ ಕೌಶಿಕ್ 18-6-30-0, ಯೋ ಮಹೇಶ್ 13-2-42-0 (ವೈಡ್-2), ಆಶಿಕ್ ಶ್ರೀನಿವಾಸ್ 30-11-55-0, ಸನ್ನಿ ಗುಪ್ತಾ 13-1-40-0, ಅಭಿನವ್ ಮುಕುಂದ್ 2-0-6-0, ಕೆ.ವಾಸುದೇವದಾಸ್ 1-0-5-0
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.