ADVERTISEMENT

ರತ್ನಾಕರ್ ಶೆಟ್ಟಿ ಮೇಲೆ ಐದು ವರ್ಷ ನಿಷೇಧ

ಅವ್ಯವಹಾರ ಆರೋಪ ಮಾಡಿದ್ದಕ್ಕೆ ಎಂಸಿಎನಿಂದ ಕಠಿಣ ಕ್ರಮ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 19:59 IST
Last Updated 4 ಜೂನ್ 2013, 19:59 IST

ಮುಂಬೈ (ಪಿಟಿಐ): ಅವ್ಯವಹಾರ ಆರೋಪ ಮಾಡಿದ್ದಕ್ಕಾಗಿ ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ಪ್ರೊ.ರತ್ನಾಕರ್ ಶೆಟ್ಟಿ ಅವರ ಮೇಲೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಐದು ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. ಎಂಸಿಎನ ಎಲ್ಲಾ ಕಾರ್ಯ ಚಟುವಟಿಕೆಗಳಿಂದ ಶೆಟ್ಟಿ ಅವರನ್ನು ದೂರವಿರಿಸಲು ಸಂಸ್ಥೆ ತೀರ್ಮಾನಿಸಿದೆ.

2012ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಟ್ವೆಂಟಿ-20 ಪಂದ್ಯದ ಟಿಕೆಟ್‌ಗಳನ್ನು ಎಂಸಿಎ ಸದಸ್ಯರು ಕಾಳಸಂತೆಯಲ್ಲಿ (ಬ್ಲಾಕ್) ಮಾರಾಟ ಮಾಡಿರುವ ಸಾಧ್ಯತೆ ಇದೆ ಎಂದು ರತ್ನಾಕರ್ ಶೆಟ್ಟಿ ಆರೋಪಿಸಿದ್ದರು.

`ಹೌದು, ಶೆಟ್ಟಿ ಮೇಲೆ ಐದು ವರ್ಷ ನಿಷೇಧ ವಿಧಿಸಲಾಗಿದೆ. ಈ ಅವಧಿಯಲ್ಲಿ ಅವರು ಎಂಸಿಎ ಅಧೀನದಲ್ಲಿ ಬರುವ ಯಾವುದೇ ಕ್ಲಬ್ ಪ್ರತಿನಿಧಿಸುವಂತಿಲ್ಲ. ಆದರೆ ಎಂಸಿಎ ಕಟ್ಟಡ ಪ್ರವೇಶ ನಿರ್ಬಂಧಿಸಿಲ್ಲ' ಎಂದು ಎಂಸಿಎ ಅಧ್ಯಕ್ಷ ರವಿ ಸಾವಂತ್ ನುಡಿದಿದ್ದಾರೆ.

`ಶೆಟ್ಟಿ ಅವರು ಮಾಡಿದ್ದ ಆರೋಪ ಸಂಬಂಧ ನಾವು ತನಿಖೆ ನಡೆಸಿದ್ದೆವು. ಆದರೆ ಅವರ ಆರೋಪ ಸುಳ್ಳು ಎಂಬುದು ಸಾಬೀತಾಗಿದೆ. ಮೇ 14ರಂದು ನಡೆದ ಸಂಸ್ಥೆಯ ವ್ಯವಸ್ಥಾಪಕ ಸಮಿತಿ ಸಭೆಯಲ್ಲಿ ನಿಷೇಧ ಹೇರಲು ತೀರ್ಮಾನಿಸಲಾಯಿತು' ಎಂದೂ ಅವರು ಹೇಳಿದ್ದಾರೆ.

ನಿಷೇಧ 2018ರ ಜೂನ್ ಎರಡರವರೆಗೆ ಜಾರಿಯಲ್ಲಿರಲಿದೆ. ಆದರೆ ನಿಷೇಧ ಶಿಕ್ಷೆಯ ವಿರುದ್ಧ ಶೆಟ್ಟಿ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ.

ಶೆಟ್ಟಿ ಅವರು ಬಿಸಿಸಿಐ ಹಿರಿಯ ಅಧಿಕಾರಿ ಕೂಡ. ಎಂಸಿಎ ಆವರಣದಲ್ಲಿಯೇ ಬಿಸಿಸಿಐ ಕಚೇರಿ ಇದೆ. ಅಷ್ಟು ಮಾತ್ರವಲ್ಲದೇ, ಅವರು ಈ ಹಿಂದೆ ಎಂಸಿಎ ಕಾರ್ಯದರ್ಶಿ, ಖಜಾಂಚಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.