ADVERTISEMENT

ರನ್ ಹೊಳೆ ನಂತರ ಮಳೆ!

‌ಮುರಳಿ ವಿಜಯ್‌ ಶತಕ; ಅಜಿಂಕ್ಯ ರಹಾನೆ ಬಿರುಸಿನ ಬ್ಯಾಟಿಂಗ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2015, 19:45 IST
Last Updated 12 ಜೂನ್ 2015, 19:45 IST
ಫಟುಲ್ಲಾದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ದಾಖಲಿಸಿದ ಭಾರತದ ಮುರಳಿ ವಿಜಯ್‌ ಬ್ಯಾಟಿಂಗ್ ವೈಖರಿ  ಎಎಫ್‌ಪಿ ಚಿತ್ರ
ಫಟುಲ್ಲಾದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ದಾಖಲಿಸಿದ ಭಾರತದ ಮುರಳಿ ವಿಜಯ್‌ ಬ್ಯಾಟಿಂಗ್ ವೈಖರಿ ಎಎಫ್‌ಪಿ ಚಿತ್ರ   

ಫಟುಲ್ಲಾ (ಪಿಟಿಐ): ಶುಕ್ರವಾರವೂ ಮತ್ತೆ ಮಳೆಯ ಆಟ. ಸಿಕ್ಕ ಅವಕಾಶದಲ್ಲಿಯೇ ರನ್‌ಗಳ ಹೊಳೆ ಹರಿಸಿದ ಭಾರತದ ಬ್ಯಾಟ್ಸ್‌ಮನ್‌ಗಳು!

ಖಾನ್‌ ಸಾಹೇಬ್ ಒಸ್ಮಾನ್ ಅಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ  ಮುರಳಿ ವಿಜಯ್ (150; 272ಎ, 12ಬೌಂ, 1ಸಿ) ಮತ್ತು ಶತಕವಂಚಿತ ಅಜಿಂಕ್ಯ ರಹಾನೆ (98; 103ಎ, 14ಬೌಂ) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಭಾರತ  ತಂಡವು 103.3 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 462 ರನ್ ಗಳಿಸಿದೆ. ಶುಕ್ರವಾರ ಮಧ್ಯಾಹ್ನ ಮಳೆ ಸುರಿಯುವ ಮುನ್ನ ಕೇವಲ 47.3 ಓವರ್‌ಗಳಲ್ಲಿ 223 ರನ್‌ಗಳು ಹರಿದುಬಂದವು.

ಮೊದಲ ದಿನ ಮಳೆಯಿಂದಾಗಿ ಕೇವಲ 56 ಓವರ್‌ಗಳ ಪಂದ್ಯ ನಡೆದಿತ್ತು. ಆರಂಭಿಕ ಬ್ಯಾಟ್ಸ್‌ಮನ್ (150) ಮತ್ತು ಮುರಳಿ ವಿಜಯ್ (89)  ಮುರಿಯದ ಮೊದಲ ವಿಕೆಟ್ ಜೊತೆಯಾಟದಲ್ಲಿ 239 ರನ್ ಗಳಿಸಿತ್ತು. ಆದರೆ, ಗುರುವಾರ ಬೆಳಿಗ್ಗೆಯಿಂದಲೇ ಸುರಿದ ಮಳೆಯಿಂದಾಗಿ  ಆಟ ನಡೆದಿರಲಿಲ್ಲ. 

ಶಕೀಬ್ ಅಲ್ ಹಸನ್ (4ಕ್ಕೆ105) ಅವರು ಪರಿಣಾಮಕಾರಿ ದಾಳಿ ನಡೆಸಿದ್ದು ರನ್ ಗಳಿಕೆಗೆ ಸ್ವಲ್ಪ ತಡೆಯೊಡ್ಡಿತು.
ಬೆಳಿಗ್ಗೆ ಆಟ ಮುಂದುವರಿದಾಗ ಶಿಖರ್ ಧವನ್ ಮತ್ತು ಮುರಳಿ ಜೋಡಿಯು ವೇಗದ ಆಟಕ್ಕೆ ಒತ್ತು ನೀಡಿದರು. ದ್ವಿಶತಕದತ್ತ ಸಾಗಿದ್ದ ಶಿಖರ್ ನೇರ ಹೊಡೆತಕ್ಕೆ ಯತ್ನಿಸಿ, ಬೌಲರ್ ಶಕೀಬ್ ಅಲ್ ಹಸನ್ ಅವರಿಗೆ ಕ್ಯಾಚ್ ನೀಡಿದರು.  ಇದಕ್ಕೂ ಮುನ್ನ ಮುರಳಿ ವಿಜಯ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಆರನೇ ಶತಕ (100; 201ಎ, 10ಬೌಂ, 1ಸಿ)  ಪೂರೈಸಿದರು. ತದನಂತರ ಅವರೂ ಬ್ಯಾಟ್‌ ಬೀಸಲು ಆರಂಭಿಸಿದರು.

‌‌ರೋಹಿತ್ ಶರ್ಮಾ ಮತ್ತು ನಾಯಕ ವಿರಾಟ್ ಕೊಹ್ಲಿಯವರನ್ನು ಶಕೀಬ್ ಬಹಳ ಬೇಗನೆ ಪೆವಿಲಿಯನ್‌ಗೆ ಕಳಿಸಿ ಕೇಕೆ ಹಾಕಿದರು. ಆದರೆ, ಮುರಳಿ ಜೊತೆಗೂಡಿದ ಅಜಿಂಕ್ಯ ರಹಾನೆ ಐಪಿಎಲ್ ಪಂದ್ಯದ ನೆನಪು ಮರುಕಳಿಸುವಂತೆ ಮಾಡಿದರು!

ರಹಾನೆ ಅಬ್ಬರ: ಐಪಿಎಲ್‌ನಲ್ಲಿ ರಾಜಸ್ತಾನ್ ರಾಯಲ್ಸ್‌ ತಂಡದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ್ದ ಅಜಿಂಕ್ಯ ರಹಾನೆ ಟಿ20 ಮಾದರಿಯ ಬ್ಯಾಟಿಂಗ್ ಮಾಡಿದರು.  ಆರು ಮಂದಿ ಬೌಲರ್‌ಗಳ ಎಸೆತಗಳನ್ನು ದಂಡಿಸಿದರು. ಫ್ರಂಟ್‌ಫುಟ್‌ ಹೊಡೆತಗಳ ಆಕರ್ಷಕ ಆಟ ಮನಸೆಳೆಯಿತು. 

ಆದರೆ, ಶತಕ ದಂಚಿನಲ್ಲಿ ಅವರು ಎಡವಿದರು. ಮತ್ತೊ ಮ್ಮೆ ಮಿಂಚಿದ ಶಕೀಬ್ ಎಸೆತಕ್ಕೆ ಬೀಟ್ ಆದ ಅವರು ಕ್ಲೀನ್‌ಬೌಲ್ಡ್ ಆದರು.  ಅದಕ್ಕೂ ಮುನ್ನ ಮುರಳಿ ವಿಜಯ್ ಶತ ಕೋತ್ತರ ಅರ್ಧಶತಕ ಗಳಿಸಿ ಪೆವಿಲಿಯನ್ ಸೇರಿದ್ದರು.  ಅವರು ಕಳೆದ 12 ತಿಂಗಳಲ್ಲಿ ಒಂದು ಸಾವಿರ ರನ್‌ಗಳನ್ನು ಪೂರೈಸಿದ ಸಾಧನೆ ಮಾಡಿದರು.  ಮಧ್ಯಾಹ್ನ ಮಳೆ ಆರಂಭವಾಗಿ ಪಂದ್ಯವನ್ನು ನಿಲ್ಲಿಸಲಾಯಿತು.

ಮುಖ್ಯಾಂಶಗಳು
* ಮೂರನೇ ದಿನವೂ ಕಾಡಿದ ಮಳೆ

* ಒಂದು ವರ್ಷದಲ್ಲಿ ಒಂದು ಸಾವಿರ ರನ್ ಗಳಿಸಿದ ಮುರಳಿ ವಿಜಯ್
* ಮಿಂಚಿದ ಶಕೀಬ್‌ ಅಲ್ ಹಸನ್

ಸ್ಕೋರ್‌ಕಾರ್ಡ್‌
ಭಾರತ ಮೊದಲ ಇನಿಂಗ್ಸ್ 6 ಕ್ಕೆ 462   (103.3 ಓವರ್‌ಗಳಲ್ಲಿ)

ಮುರಳಿ ವಿಜಯ್ ಎಲ್‌ಬಿಡಬ್ಲ್ಯು ಬಿ ಶಕೀಬ್ ಅಲ್ ಹಸನ್   150
ಶಿಖರ್ ಧವನ್ ಸಿ ಮತ್ತು ಬಿ ಶಕೀಬ್ ಅಲ್ ಹಸನ್   173
ರೋಹಿತ್ ಶರ್ಮಾ ಬಿ ಶಕೀಬ್ ಅಲ್ ಹಸನ್   06
ವಿರಾಟ್ ಕೊಹ್ಲಿ ಬಿ ಜುಬೇರ್ ಹೊಸೈನ್   14
ಅಜಿಂಕ್ಯ ರಹಾನೆ ಬಿ ಶಕೀಬ್ ಅಲ್ ಹಸನ್   98
ವೃದ್ಧಿಮಾನ್ ಸಹಾ ಬಿ ಜುಬೇರ್ ಹೊಸೈನ್   06
ಆರ್. ಅಶ್ವಿನ್ ಬ್ಯಾಟಿಂಗ್   02
ಹರಭಜನ್ ಸಿಂಗ್ ಬ್ಯಾಟಿಂಗ್   07
ಇತರೆ:  (ಬೈ 4, ಲೆಗ್‌ಬೈ 1, ನೋಬಾಲ್‌ 1)             06

ADVERTISEMENT

ವಿಕೆಟ್ ಪತನ:  1–283 (ಧವನ್; 67.5), 2–291 (ಶರ್ಮಾ; 69.5), 3–310 (ಕೊಹ್ಲಿ;74.6), 4–424 (ವಿಜಯ್ 97.4), 5–445 (ಸಹಾ; 100.6), 6–453 (ರಹಾನೆ; 101.4)

ಬೌಲಿಂಗ್ ವಿವರ: ಮೊಹಮ್ಮದ್ ಶಹೀದ್ 22–2–88–0 (ನೋಬಾಲ್ 1), ಸೌಮ್ಯಾ ಸರಕಾರ್ (3–0–11–0, ಶುವಾಗತಾ ಹಾಮ್ 14–0–52–0, ಶಕೀಬ್ ಅಲ್ ಹಸನ್ 24.3–1–105–4, ತೈಜುಲ್ ಇಸ್ಲಾಮ್ 20–0–85–0, ಜುಬೇರ್ ಹೊಸೈನ್ 19–1–113–2, ಇಮ್ರುಲ್ ಕೈಸ್ 1–0–3–0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.