ADVERTISEMENT

ರಫೆಲ್ ನಡಾಲ್ ಶ್ರೇಷ್ಠ ಆಟಗಾರ: ಜೊಕೊವಿಕ್

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST

ಇಂಡಿಯಾನ ವೆಲ್ಸ್, ಅಮೆರಿಕ (ಡಿಪಿಎ): ‘ರಫೆಲ್ ನಡಾಲ್ ಅವರು ಸರ್ವಶ್ರೇಷ್ಠ ಟೆನಿಸ್ ಆಟಗಾರ’ ಎಂದು ಸರ್ಬಿಯದ ನೊವಾಕ್ ಜೊಕೊವಿಕ್ ಹೇಳಿದ್ದಾರೆ. ಕ್ಯಾಲಿಫೋರ್ನಿಯದಲ್ಲಿ ಭಾನುವಾರ ಕೊನೆಗೊಂಡ ಬಿಎನ್‌ಪಿ ಪರಿಬಾಸ್ ಓಪನ್ ಟೂರ್ನಿಯಲ್ಲಿ ಜೊಕೊವಿಕ್ ಅವರು ಸ್ಪೇನ್‌ನ ನಡಾಲ್ ವಿರುದ್ಧ ಗೆದ್ದು ಚಾಂಪಿಯನ್ ಆಗಿದ್ದರು. ಆದರೆ ನಡಾಲ್ ‘ಶ್ರೇಷ್ಠ ಆಟಗಾರ’ ಎಂದು ಪಂದ್ಯದ ಬಳಿಕ ಜೊಕೊವಿಕ್ ಪ್ರತಿಕ್ರಿಯಿಸಿದ್ದಾರೆ.

ಫೈನಲ್‌ನಲ್ಲಿ ಜೊಕೊವಿಕ್ 4-6, 6-3, 6-2 ರಲ್ಲಿ ಸ್ಪೇನ್‌ನ ಆಟಗಾರನ ವಿರುದ್ಧ ಜಯ ಪಡೆದಿದ್ದರು. ‘ನಡಾಲ್‌ಗೆ ಇನ್ನೂ 24 ವರ್ಷ ವಯಸ್ಸು. ಅಲ್ಪ ಅವಧಿಯಲ್ಲೇ ಹೆಚ್ಚಿನ ಸಾಧನೆ ಮಾಡಿದ್ದಾರೆ. ಇನ್ನೂ ಸಾಕಷ್ಟು ವರ್ಷ ಅವರು ಆಡುವ ಸಾಧ್ಯತೆಯಿದೆ. ಅತಿಹೆಚ್ಚು ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದ ರೋಜರ್ ಫೆಡರರ್ ಅವರನ್ನು ಹಿಂದಿಕ್ಕುವ ಸಾಮರ್ಥ್ಯ ಇದೆ’ ಎಂದಿದ್ದಾರೆ.

ಸ್ವಿಟ್ಜರ್‌ಲೆಂಡ್‌ನ ಫೆಡರರ್ ಅವರು ಇದುವರೆಗೆ 16 ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದಾರೆ. ಇಲ್ಲಿ ಸೆಮಿಫೈನಲ್‌ನಲ್ಲಿ ಜೊಕೊವಿಕ್ ಅವರು ಸ್ವಿಸ್ ಆಟಗಾರನ ವಿರುದ್ಧ ಗೆಲುವು ಪಡೆದಿದ್ದರು. ಇದೇ ಟೂರ್ನಿಯ ಮಹಿಳೆಯರ ವಿಭಾಗದ ಪ್ರಶಸ್ತಿಯನ್ನು ಡೆನ್ಮಾರ್ಕ್‌ನ ಕೆರೊಲಿನ್ ವೊನಿಯಾಕಿ ಗೆದ್ದುಕೊಂಡರು. ಫೈನಲ್‌ನಲ್ಲಿ ಅವರು 6-1, 2-6, 6-3 ರಲ್ಲಿ ಫ್ರಾನ್ಸ್‌ನ ಮೇರಿಯೊನ್ ಬರ್ಟೊಲಿ ವಿರುದ್ಧ ಗೆಲುವು ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.