ADVERTISEMENT

ರವಿಶಾಸ್ತ್ರಿ ಕೋಚ್‌ ಆಗಲು ಹೆಚ್ಚು ಅರ್ಹ: ಗಾವಸ್ಕರ್‌

ಪಿಟಿಐ
Published 4 ಜುಲೈ 2017, 19:30 IST
Last Updated 4 ಜುಲೈ 2017, 19:30 IST
ರವಿಶಾಸ್ತ್ರಿ ಕೋಚ್‌ ಆಗಲು ಹೆಚ್ಚು ಅರ್ಹ: ಗಾವಸ್ಕರ್‌
ರವಿಶಾಸ್ತ್ರಿ ಕೋಚ್‌ ಆಗಲು ಹೆಚ್ಚು ಅರ್ಹ: ಗಾವಸ್ಕರ್‌   

ನವದೆಹಲಿ:  ಭಾರತ ಕ್ರಿಕೆಟ್‌ ತಂಡದ ಕೋಚ್‌ ಸ್ಥಾನಕ್ಕೆ ಆಯ್ಕೆ ಯಾಗಲು ರವಿಶಾಸ್ತ್ರಿ ಹೆಚ್ಚು ಅರ್ಹ ರಾಗಿದ್ದಾರೆ ಎಂದು ಮಾಜಿ ನಾಯಕ ಸುನಿಲ್‌ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

‘2014ರಲ್ಲಿ ಭಾರತ ತಂಡ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ರವಿಶಾಸ್ತ್ರಿ ಅವರನ್ನು ತಂಡದ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಎರಡು ವರ್ಷಗಳ ಅವಧಿಯಲ್ಲಿ ಅವರು ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ್ದಾರೆ. ಈಗ ಅವರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಆ ಜವಾಬ್ದಾರಿ ಅವರ ಹೆಗಲಿಗೇರುವ ಸಾಧ್ಯತೆ ನಿಚ್ಚಳವಾಗಿದೆ’ ಎಂದು ಎನ್‌ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಗಾವಸ್ಕರ್ ಹೇಳಿದ್ದಾರೆ.

ರವಿಶಾಸ್ತ್ರಿ ನಿರ್ದೇಶಕರಾಗಿದ್ದ ಅವಧಿಯಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ ಸರಣಿ ಗೆದ್ದಿತ್ತು. ವಿಶ್ವಕಪ್‌ ಕ್ರಿಕೆಟ್ ಮತ್ತು ವಿಶ್ವ ಟ್ವೆಂಟಿ–20 ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತ್ತು. ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸಿತ್ತು. ಆಸ್ಟ್ರೇಲಿಯಾ ವಿರುದ್ಧ ಟ್ವೆಂಟಿ–20 ಸರಣಿಯನ್ನೂ ಗೆದ್ದಿತ್ತು.

ADVERTISEMENT

ಕೋಚ್ ಹುದ್ದೆಗೆ ರವಿಶಾಸ್ತ್ರಿ ಮಾತ್ರವಲ್ಲದೆ ವೀರೇಂದ್ರ ಸೆಹ್ವಾಗ್‌, ಟಾಮ್ ಮೂಡಿ, ವೆಂಕಟೇಶ ಪ್ರಸಾದ್‌, ರಿಚರ್ಡ್ ಪೈಬಸ್‌ ದೊಡ್ಡ ಗಣೇಶ, ಲಾಲ್‌ಚಂದ್‌ ರಜಪೂತ್‌ ಮತ್ತು ಫಿಲಿಪ್‌ ಸಿಮನ್ಸ್ ಅರ್ಜಿ ಸಲ್ಲಿಸಿದ್ದಾರೆ. ಮುಂಬೈನವರಾದ ಗಾವಸ್ಕರ್ ಮತ್ತು  ಆಲ್‌ರೌಂಡರ್ ರವಿಶಾಸ್ತ್ರಿ ಅವರು  ಭಾರತ ತಂಡದಲ್ಲಿ ಕೂಡಿ ಆಡಿದ್ದರು.  ರವಿಶಾಸ್ತ್ರಿ ಅವರು  ತಮ್ಮ ಬಿರುಸಾದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಅವರು ಎಡಗೈ ಸ್ಪಿನ್ನರ್ ಕೂಡ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.