ADVERTISEMENT

ರವಿಶಾಸ್ತ್ರಿ ಹೊಸ ಕೋಚ್ ಎಂಬ ವರದಿಯನ್ನು ಅಲ್ಲಗಳೆದ ಬಿಸಿಸಿಐ

ಏಜೆನ್ಸೀಸ್
Published 11 ಜುಲೈ 2017, 14:10 IST
Last Updated 11 ಜುಲೈ 2017, 14:10 IST
ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ
ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ   

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ತಂಡದ ಮಾಜಿ ನಿರ್ದೇಶಕ, ಮಾಜಿ ಕ್ರಿಕೆಟ್ ಆಟಗಾರ ರವಿಶಾಸ್ತ್ರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ವರದಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಲ್ಲಗಳೆದಿದೆ. ಜತೆಗೆ, ಕೋಚ್ ಆಯ್ಕೆ ನಿರ್ಧಾರವನ್ನು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಇನ್ನೂ ಕೈಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದೆ.

2019ರ ವಿಶ್ವಕಪ್ ಪಂದ್ಯಾವಳಿವರೆಗೂ ರವಿಶಾಸ್ತ್ರಿ ಅವರು ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಂಗಳವಾರ ಸಂಜೆ ವರದಿಯಾಗಿತ್ತು. ಈ ಬಗ್ಗೆ ಬಿಸಿಸಿಐನ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಸ್ಪಷ್ಟನೆ ನೀಡಿದ್ದು, ಸದ್ಯ ಪ್ರಕಟವಾಗಿರುವ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.

ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಒಟ್ಟು ಹತ್ತು ಮಂದಿ ಪೈಕಿ ಐವರನ್ನು ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಸೋಮವಾರ ಸಂದರ್ಶನಕ್ಕೆ ಒಳಪಡಿಸಿತ್ತು. ಈ ಪೈಕಿ, ಮಾಜಿ ಕ್ರಿಕೆಟಿಗರಾದ ರವಿಶಾಸ್ತ್ರಿ, ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ ಹೆಸರು ಮುಂಚೂಣಿಯಲ್ಲಿದ್ದವು. ಮಾಜಿ ಕ್ರಿಕೆಟಿಗರಾದ ಸೌರವ್‌ ಗಂಗೂಲಿ, ಸಚಿನ್‌ ತೆಂಡೂಲ್ಕರ್ ಹಾಗೂ ವಿ.ವಿ.ಎಸ್‌. ಲಕ್ಷ್ಮಣ್ ಅವರನ್ನೊಳಗೊಂಡ ಸಿಎಸಿ ಸಂದರ್ಶನ ನಡೆಸಿತ್ತು. ನಂತರ ಆಯ್ಕೆ ನಿರ್ಧಾರವನ್ನು ತಡೆಹಿಡಿಯಲಾಗಿತ್ತು. ನಾಯಕ ವಿರಾಟ್ ಕೊಹ್ಲಿ ಜತೆಗಿನ ಉತ್ತಮ ಸಂಬಂಧದಿಂದಾಗಿ ರವಿಶಾಸ್ತ್ರಿ ಅವರೇ ಕೋಚ್ ಆಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.