ADVERTISEMENT

ರಾಜ್ಯದ ಅಲೋಕ್‌, ಅಪೂರ್ವಾ ಫೈನಲ್‌ಗೆ

50ಕೆ ಟೆನಿಸ್‌ ಟೂರ್ನಿ: ಆತಿಥೇಯರಾದ ಅಮರ್‌, ನಿಕಿಟಾ ಪಿಂಟೊಗೆ ಸೋಲು

​ಪ್ರಜಾವಾಣಿ ವಾರ್ತೆ
Published 24 ಮೇ 2018, 20:06 IST
Last Updated 24 ಮೇ 2018, 20:06 IST
ದಾವಣಗೆರೆಯಲ್ಲಿ ಗುರುವಾರ ನಡೆದ ಪುರುಷರ 50ಕೆ ಟೆನಿಸ್‌ ಟೂರ್ನಿಯಲ್ಲಿ ರಾಜ್ಯದ ಅಲೋಕ್‌ ಆರಾಧ್ಯ ಚೆಂಡನ್ನು ರಿಟರ್ನ್‌ ಮಾಡಿದ್ದು ಹೀಗೆ.  ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ
ದಾವಣಗೆರೆಯಲ್ಲಿ ಗುರುವಾರ ನಡೆದ ಪುರುಷರ 50ಕೆ ಟೆನಿಸ್‌ ಟೂರ್ನಿಯಲ್ಲಿ ರಾಜ್ಯದ ಅಲೋಕ್‌ ಆರಾಧ್ಯ ಚೆಂಡನ್ನು ರಿಟರ್ನ್‌ ಮಾಡಿದ್ದು ಹೀಗೆ. ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ   

ದಾವಣಗೆರೆ: ಎರಡನೇ ಶ್ರೇಯಾಂಕದ ಆಟಗಾರ ಅಲೋಕ್‌ ಆರಾಧ್ಯ ಹಾಗೂ ಅಗ್ರ ಶ್ರೇಯಾಂಕದ ಆಟಗಾರ್ತಿ ಅಪೂರ್ವಾ ಎಸ್‌. ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ 50ಕೆ ಟೆನಿಸ್‌ ಟೂರ್ನಿಯ ಸೆಮಿಫೈನಲ್ಸ್‌ನಲ್ಲಿ ಗುರುವಾರ ಎದುರಾಳಿಗಳನ್ನು ನೇರ ಸೆಟ್‌ಗಳಿಂದ ಮಣಿಸಿ ಫೈನಲ್‌ ಪ್ರವೇಶಿಸಿದರು.

ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಆಶ್ರಯದಲ್ಲಿ ಜಿಲ್ಲಾ ಟೆನಿಸ್‌ ಸಂಸ್ಥೆ ಹಮ್ಮಿಕೊಂಡಿರುವ ಟೂರ್ನಿಯ ನಾಲ್ಕನೇ ದಿನದ ಪಂದ್ಯದ ಮೊದಲ ಸೆಮಿಫೈನಲ್ಸ್‌ನಲ್ಲಿ ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದ ಕರ್ನಾಟಕದ ಅಲೋಕ್‌ ಆರಾಧ್ಯ 6–0, 6–0ರಲ್ಲಿ ತಮಿಳುನಾಡಿನ ವಿಮಲ್‌ರಾಜ್‌ ಜಯಚಂದ್ರನ್‌ ಅವರನ್ನು ಸೋಲಿಸಿದರು.

ಮೊದಲ ಹಾಗೂ ಎರಡನೇ ಸೆಟ್‌ಗಳಲ್ಲಿ ತಲಾ ಮೂರು ಗೇಮ್‌ಗಳನ್ನು ಬ್ರೇಕ್‌ ಮಾಡಿದ ಅಲೋಕ್‌ ಫೈನಲ್ಸ್‌ ತಲುಪಿದರು.

ADVERTISEMENT

ಮಹಿಳೆಯರ ವಿಭಾಗದಲ್ಲಿ ಅಪೂರ್ವಾ ಎಸ್‌. 6–1, 6–1ರಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ, ತಮಿಳುನಾಡಿನ ವೈಶಾಲಿ ಪಂಜೇಶ್‌ ಠಾಕೂರ್‌ ಅವರನ್ನು ಸೋಲಿಸಿದರು. ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಅಪೂರ್ವಾ ಎರಡೂ ಸೆಟ್‌ಗಳಲ್ಲಿ ತಲಾ ಎರಡು ಗೇಮ್‌ಗಳನ್ನು ಬ್ರೇಕ್‌ ಮಾಡಿ ಗೆಲುವಿನ ಹಾದಿಯನ್ನು ಸುಗಮ ಮಾಡಿಕೊಂಡರು.

ಎಡವಿದ ಅಮರ್‌: ಇದೇ ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದ್ದ ರಾಜ್ಯದ ಅಮರ್‌ ಟಿ. ಧರಿಯಣ್ಣವರ್‌ ತೀವ್ರ ಪೈಪೋಟಿ ನೀಡಿದರೂ ಅಂತಿಮವಾಗಿ 6–7(2–7), 4–6ರಲ್ಲಿ ತೆಲಂಗಾಣದ ಹೇವಂತ್‌ ವಿ. ಕುಮಾರ್‌ ವಿರುದ್ಧ ಪರಾಭವಗೊಂಡರು.

ಮೊದಲ ಸೆಟ್‌ನಲ್ಲಿ ಇಬ್ಬರೂ ತಲಾ ಮೂರು ಗೇಮ್‌ಗಳನ್ನು ಬ್ರೇಕ್‌ ಮಾಡಿ 6–6ರಲ್ಲಿ ಸಮಬಲ ಪ್ರದರ್ಶಿಸಿದರು. ಆದರೆ, ಟೈಬ್ರೇಕರ್‌ನಲ್ಲಿ ವಿಚಲಿತರಾದ ಅಮರ್‌, ಚೆಂಡನ್ನು ನೆಟ್‌ಗೆ ಹಾಗೂ ಅಂಕಣದ ಹೊರಗೆ ಹೊಡೆಯುವ ಮೂಲಕ 2–7 ಪಾಯಿಂಟ್‌ಗಳಲ್ಲಿ ಹಿನ್ನಡೆ ಅನುಭವಿಸಿದರು.

ಎರಡನೇ ಸೆಟ್‌ನ ಆರಂಭದಲ್ಲಿ ಇಬ್ಬರೂ ಆಟಗಾರರು ತಲಾ ಎರಡು ಗೇಮ್‌ಗಳನ್ನು ಬ್ರೇಕ್‌ ಮಾಡಿ ಒಂದು ಹಂತದಲ್ಲಿ 4–4ರಲ್ಲಿ ಸಮಬಲ ಪ್ರದರ್ಶಿಸಿದರು. ಆದರೆ, ನಂತರ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಹೇವಂತ್‌, ಒಂದು ಬ್ರೇಕ್‌ ಸೇರಿ ಸತತ ಎರಡು ಗೇಮ್‌ಗಳನ್ನು ತಮ್ಮದಾಗಿಸಿಕೊಂಡು ಗೆಲುವಿನ ತೋರಣ ಕಟ್ಟಿದರು.

ಮಹಿಳೆಯರ ವಿಭಾಗದ ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಆಟಗಾರ್ತಿ, ರಾಜ್ಯದ ನಿಕಿಟಾ ಪಿಂಟೊ 2–6, 1–6ರಲ್ಲಿ ತೆಲಂಗಾಣದ ಬಿಪಾಷಾ ವಿರುದ್ಧ ಸೋಲು ಕಂಡರು.

ಫಲಿತಾಂಶ

ಪುರುಷರ ಡಬಲ್ಸ್‌ ಸೆಮಿಫೈನಲ್ಸ್‌: ಅಲೋಕ್‌ ಆರಾಧ್ಯ– ರಿಭವ್‌ ರವಿಕಿರಣ್‌ (ಕರ್ನಾಟಕ)ಗೆ 7–5, 7–6 (7–5)ರಲ್ಲಿ ಕೈವಲ್ಯ ವಾಮನ್‌ರಾವ್‌ (ಮಹಾರಾಷ್ಟ್ರ)– ವಿಮಲ್‌ರಾಜ್‌ ಜಯಚಂದ್ರನ್‌ (ತಮಿಳುನಾಡು) ಎದುರು; ಶಾಹುಲ್‌ ಅನ್ವರ್‌ (ಕರ್ನಾಟಕ– ಉಮೇರ್‌ ಶೇಖ್‌ (ಆಂಧ್ರಪ್ರದೇಶ)ಗೆ 6–4, 7–5ರಲ್ಲಿ ದೀಪಕ್‌ ಎ. (ಕರ್ನಾಟಕ)– ಸಾಹಿಲ್‌ ಕಿಶೋರ್‌ ಧನವಾಣಿ (ಮಹಾರಾಷ್ಟ್ರ) ವಿರುದ್ಧ ಜಯ.

ಮಿಕ್ಸ್ಡ್‌ ಡಬಲ್ಸ್‌: ಅಲೋಕ್‌ ಆರಾಧ್ಯ– ನಿಕಿಟಾ ಪಿಂಟೊ (ಕರ್ನಾಟಕ)ಗೆ 9–6ರಲ್ಲಿ ತರುಣ್‌ ಕುಮಾರ್‌ವೇಲು (ತಮಿಳುನಾಡು)– ಸೋನಾಲಿ
ಜೈಸ್ವಾಲ್‌ (ತೆಲಂಗಾಣ) ಎದುರು; ರಿಭವ್‌ ರವಿಕಿರಣ್‌– ಖುಷಿ ಸಂತೋಷ್‌ಗೆ (ಕರ್ನಾಟಕ)– ಉಮೇರ್‌ ಶೇಖ್‌ (ಆಂಧ್ರಪ್ರದೇಶ)– ವೈಶಾಲಿ ಪಂಜೇಶ್‌ ಠಾಕೂರ್‌ (ತಮಿಳುನಾಡು) ವಿರುದ್ಧ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.