ADVERTISEMENT

ರಾಜ್ಯದ ಸುನಿಲ್‌ಗೆ ಸ್ಥಾನ

ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಭಾರತ ಹಾಕಿ ತಂಡ

ಪಿಟಿಐ
Published 13 ಮಾರ್ಚ್ 2018, 19:45 IST
Last Updated 13 ಮಾರ್ಚ್ 2018, 19:45 IST
ಎಸ್‌.ವಿ.ಸುನಿಲ್‌
ಎಸ್‌.ವಿ.ಸುನಿಲ್‌   

ನವದೆಹಲಿ : ಮುಂದಿನ ತಿಂಗಳು ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆಯುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡಕ್ಕೆ ಮನ್‌ಪ್ರೀತ್ ಸಿಂಗ್ ಸಾರಥ್ಯ ವಹಿಸಲಿದ್ದಾರೆ.

ಹಾಕಿ ಇಂಡಿಯಾ ಮಂಗಳವಾರ 18 ಸದಸ್ಯರ ತಂಡವನ್ನು  ಪ್ರಕಟಿಸಿದ್ದು ಕರ್ನಾಟಕದ ಎಸ್‌.ವಿ.ಸುನಿಲ್‌ ಸ್ಥಾನ ಗಳಿಸಿದ್ದಾರೆ. ಅನುಭವಿ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ತಂಡಕ್ಕೆ ಮರಳಿದ್ದಾರೆ. ಹಿಂದಿನ ಸರಣಿಗಳಲ್ಲಿ ಪರಿಣಾಮಕಾರಿ ಆಟ ಆಡಲು ವಿಫಲವಾಗಿದ್ದ ಸರ್ದಾರ್‌ ಸಿಂಗ್‌ ಅವರನ್ನು ಕೈಬಿಡ ಲಾಗಿದೆ. ಚಿಂಗ್ಲೆನ್‌ಸನಾ ಸಿಂಗ್‌  ಉಪ ನಾಯಕರಾಗಿ ನೇಮಕವಾಗಿದ್ದಾರೆ.

ಮನ್‌ಪ್ರೀತ್‌ ಸಾರಥ್ಯದಲ್ಲಿ ಭಾರತ ತಂಡ ಹೋದ ವರ್ಷ ನಡೆದಿದ್ದ ಏಷ್ಯಾ ಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು. ಜೊತೆಗೆ ವಿಶ್ವ ಹಾಕಿ ಲೀಗ್‌ ಫೈನಲ್‌ನಲ್ಲಿ ಕಂಚಿನ ಪದಕ ಪಡೆದಿತ್ತು.

ADVERTISEMENT

ಹೋದ ವರ್ಷ ನಡೆದಿದ್ದ ಸುಲ್ತಾನ್ ಅಜ್ಲಾನ್‌ ಶಾ ಟೂರ್ನಿಯ ವೇಳೆ ಶ್ರೀಜೇಶ್‌ ಗಾಯಗೊಂಡಿದ್ದರು. ಇದರಿಂದ ಚೇತರಿಸಿಕೊಂಡಿರುವ ಅವರು ನ್ಯೂಜಿಲೆಂಡ್‌ ಎದುರಿನ ಸರಣಿಯಲ್ಲಿ ಉತ್ತಮ ಆಟ ಆಡಿದ್ದರು.

ನ್ಯೂಜಿಲೆಂಡ್‌ ಎದುರಿನ ಸರಣಿಯಲ್ಲಿ ಗೋಲು ದಾಖಲಿಸಿ ಗಮನ ಸೆಳೆದಿದ್ದ ದಿಲ್‌ಪ್ರೀತ್‌ ಸಿಂಗ್‌ ಮತ್ತು ವಿವೇಕ್‌ ಸಾಗರ್‌ ಪ್ರಸಾದ್‌ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ಕರ್ನಾಟಕದ ಸುನಿಲ್‌ ತಂಡಕ್ಕೆ ಮರಳಿದ್ದಾರೆ. ಇತ್ತೀಚೆಗೆ ವಿವಾಹವಾಗಿದ್ದ ಅವರು ಸುಲ್ತಾನ್‌ ಅಜ್ಲಾನ್‌ ಶಾ ಟೂರ್ನಿಯಲ್ಲಿ ಆಡಿರಲಿಲ್ಲ.

ಭಾರತ ತಂಡ ಕಾಮನ್‌ವೆಲ್ತ್‌ ಕೂಟದಲ್ಲಿ ‘ಬಿ’ ಗುಂಪಿನಲ್ಲಿ ಆಡಲಿದೆ. ಪಾಕಿಸ್ತಾನ, ಮಲೇಷ್ಯಾ ಮತ್ತು ಇಂಗ್ಲೆಂಡ್‌ ತಂಡಗಳೂ ಇದೇ ಗುಂಪಿನಲ್ಲಿವೆ.

ಏಪ್ರಿಲ್‌ 7 ರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಮನ್‌ಪ್ರೀತ್‌ ಪಡೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ.

ತಂಡ ಇಂತಿದೆ: ಗೋಲ್‌ಕೀಪರ್‌: ಪಿ.ಆರ್‌.ಶ್ರೀಜೇಶ್‌ ಮತ್ತು ಸೂರಜ್‌ ಕರ್ಕೆರಾ. ಡಿಫೆಂಡರ್‌ಗಳು: ರೂಪಿಂದರ್ ಪಾಲ್‌ ಸಿಂಗ್‌, ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌, ಕೊಥಾಜಿತ್‌ ಸಿಂಗ್‌, ಗುರಿಂದರ್‌ ಸಿಂಗ್‌ ಮತ್ತು ಅಮಿತ್‌ ರೋಹಿದಾಸ್‌. ಮಿಡ್‌ ಫೀಲ್ಡರ್‌ಗಳು: ಮನ್‌ಪ್ರೀತ್‌ ಸಿಂಗ್‌ (ನಾಯಕ), ಚಿಂಗ್ಲೆನ್‌ಸನಾ ಸಿಂಗ್‌ (ಉಪ ನಾಯಕ), ಸುಮಿತ್‌ ಮತ್ತು ವಿವೇಕ್‌ ಸಾಗರ್‌ ಪ್ರಸಾದ್‌. ಫಾರ್ವರ್ಡ್‌ಗಳು: ಆಕಾಶ್‌ದೀಪ್‌ ಸಿಂಗ್‌, ಎಸ್‌.ವಿ.ಸುನಿಲ್‌, ಗುರ್ಜಂತ್‌ ಸಿಂಗ್‌, ಮನದೀಪ್‌ ಸಿಂಗ್‌, ಲಲಿತ್‌ಕುಮಾರ್‌ ಉಪಾಧ್ಯಾಯ ಮತ್ತು ದಿಲ್‌ಪ್ರೀತ್‌ ಸಿಂಗ್‌.

ಕೋಚ್‌: ಶೋರ್ಡ್‌ ಮ್ಯಾರಿಜ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.