ADVERTISEMENT

ರಾಜ್ಯ ಪೈಕಾ ಕ್ರೀಡಾಕೂಟ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 19:30 IST
Last Updated 7 ಅಕ್ಟೋಬರ್ 2011, 19:30 IST

ಹಾವೇರಿ: ಕೇಂದ್ರ ಸರ್ಕಾರದ ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್ (ಪೈಕಾ)ದ ವತಿಯಿಂದ ಅ.8 ರಿಂದ ನಡೆಯುವ ರಾಜ್ಯಮಟ್ಟದ ಮಹಿಳಾ ಬ್ಯಾಸ್ಕೆಟ್‌ಬಾಲ್, ಈಜು ಹಾಗೂ ಜಿಮ್ನಾಸ್ಟಿಕ್ ಚಾಂಪಿಯನ್‌ಷಿಪ್‌ಗೆ ನಗರ ಸಜ್ಜುಗೊಂಡಿದೆ.

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ರಾಜ್ಯಮಟ್ಟದ ಬ್ಯಾಸ್ಕೆಟ್‌ಬಾಲ್ ಸ್ಪರ್ಧೆಗೆ ರಬ್ಬರ್ ಪೇಂಟ್ ಬಳಸಿ ಅಂತರ್‌ರಾಷ್ಟ್ರೀಯ ಮಾದರಿಯಲ್ಲಿ ಬ್ಯಾಸ್ಕೆಟ್‌ಬಾಲ್ ಮೈದಾನವನ್ನು ನಿರ್ಮಿಸಲಾಗಿದ್ದು,  ಜಿಮ್ನಾಸ್ಟಿಕ್ ಕ್ರೀಡೆಗಾಗಿ ಜಿಲ್ಲಾ ಒಳಾಂಗಣ ಕ್ರೀಡಾಂಗಣ ಹಾಗೂ ಈಜು ಸ್ಪರ್ಧೆಗಾಗಿ ಈಜುಗೊಳವನ್ನು ಸಜ್ಜುಗೊಳಿಸಲಾಗಿದೆ.

ಈ ಮೂರೂ ಸ್ಪರ್ಧೆಗಳಲ್ಲಿ ರಾಜ್ಯದ 30 ಜಿಲ್ಲೆಗಳಿಂದ 1020 ಕ್ರೀಡಾಪಟುಗಳು ಭಾಗವಹಿಸಲಿದ್ದು, ವಿಜೇತ ತಂಡಗಳು ಅ.15ರಂದು ರಾಜಸ್ತಾನದ ಜೈಪುರದಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ ಎಂದು ಪೂರ್ವಸಿದ್ಧತೆಗಳ ಮಾಹಿತಿ ನೀಡಿದ ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಐ.ಎ.ಲೋಕಾಪುರ ತಿಳಿಸಿದರು.

ಈಜು ಹಾಗೂ ಬ್ಯಾಸ್ಕೆಟ್‌ಬಾಲ್ ಸ್ಪರ್ಧೆಯಲ್ಲಿ ತಲಾ 360, ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ 210  ಕ್ರೀಡಾಪಟುಗಳು ಭಾಗವಹಿಸಲ್ದ್ದಿದಾರೆ. ನಗರದ ಶಿವಬಸವ ಕಲ್ಯಾಣ ಮಂಟಪ, ಕಡ್ಲಿ ವಸತಿಗೃಹ, ಮೈತ್ರಿ ವಸತಿಗೃಹ ಹಾಗೂ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. 8ರಂದು ಬೆಳಿಗ್ಗೆ 10ಕ್ಕೆ ಸಚಿವ ಸಿ.ಎಂ.ಉದಾಸಿ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಶಾಸಕ ನೆಹರೂ ಓಲೇಕಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.