ADVERTISEMENT

ರಾಜ್ಯ ಮಟ್ಟದ ಕುಸ್ತಿ: ಮಲ್ಲಪ್ಪ ಪಾಟೀಲ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST

ಮಂಗಳೂರು: ಅನುಭವಿ ಮಲ್ಲರ ಸೆಣಸಾಟದಲ್ಲಿ ದಾವಣಗೆರೆಯ ಮಲ್ಲಪ್ಪ ವೈ. ಪಾಟೀಲ (ಕರ್ನಾಟಕ ರಾಜ್ಯ ಪೊಲೀಸ್), ಬೆಳಗಾವಿಯ ಎಸ್.ಆರ್.ಯಲಶೆಟ್ಟಿ ಅವರನ್ನು ಅಂಕಗಳ ಆಧಾರದಲ್ಲಿ ಸೋಲಿಸಿ, ಶುಕ್ರವಾರ ಆರಂಭವಾದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟದ ಪ್ಲಸ್ 84 ಕೆ.ಜಿ. ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕುಸ್ತಿ ಸಂಘದ ಆಶ್ರಯದಲ್ಲಿ ನೆಹರೂ ಮೈದಾನದಲ್ಲಿ ಮೂರು ದಿನಗಳ ಈ ಪಂದ್ಯಾವಳಿ ನಡೆಯುತ್ತಿದೆ. ಬಾಗಲಕೋಟೆಯ ಎನ್.ಸಿ.ನ್ಯಾಮಗೌಡ 84 ಕೆ.ಜಿ. ವಿಭಾಗದಲ್ಲಿ 3ನೇ ಸ್ಥಾನ ಪಡೆದರು.

ಪ್ರತಿಷ್ಠಿತ ಕರ್ನಾಟಕ ಕುಮಾರ್ (66 ಕೆ.ಜಿ.) ಪಟ್ಟಕ್ಕಾಗಿ ನಡೆಯುತ್ತಿರುವ ಸೆಣಸಾಟದಲ್ಲಿ ಅನೀಶ್ ಕುಮಾರ್ ಫೈನಲ್ ತಲುಪಿ ಆತಿಥೇಯ ದಕ್ಷಿಣ ಕನ್ನಡಕ್ಕೆ ಸಂತಸ ಮೂಡಿಸಿದರು. ಅವರು ಪ್ರಶಸ್ತಿಗಾಗಿ ತಮ್ಮದೇ ಜಿಲ್ಲೆಯ ಪಾಂಡುರಂಗ ಕುಮಾರ್ ವಿರುದ್ಧ ಸೆಣಸಾಡುವರು. ಅನೀಶ್ ಸೆಮಿಫೈನಲ್‌ನಲ್ಲಿ ದಕ್ಷಿಣ          ಕನ್ನಡದ ಬಾಹುಬಲಿ ಅವರನ್ನು ಸೋಲಿಸಿದ್ದರು.

ಕರ್ನಾಟಕ ಕಿಶೋರ್ ಪಟ್ಟಕ್ಕಾಗಿ (40 ಕೆ.ಜಿ.ವರೆಗೆ) ದಕ್ಷಿಣ ಕನ್ನಡ ಜಿಲ್ಲೆಯ ನಾಗರಾಜ್ (ಹೊಸಬೆಟ್ಟು ವಿನ ನ್ಯಾಷನಲ್ ಹೆಲ್ತ್ ಲೀಗ್), ಗದಗ ಜಿಲ್ಲೆಯ ಅನಿಲ್ ವಿರುದ್ಧ ಹೋರಾಡುವರು.
84 ಕೆ.ಜಿ. ವಿಭಾಗದ ಪ್ರಶಸ್ತಿಗಾಗಿ ಮೂಡುಬಿದರೆಯ ಕೆ.ಶಿವಪ್ರಸಾದ್, ಶಿವಮೊಗ್ಗದ ಎನ್.ಕೆಂಚಪ್ಪ ಅವರ ಸವಾಲು ಎದುರಿಸಬೇಕಾಗಿದೆ.

74 ಕೆ.ಜಿ.ವರೆಗಿನ ವಿಭಾಗದಲ್ಲಿ ಮೂಡುಬಿದರೆ ವಿಠಲ ಬಿಸನಾಳ್, ಧಾರವಾಡದ ಸಂದೀಪ್ ಕಾಟೆ, ಕೆಎಸ್‌ಪಿಯ ಎಲ್.ಎಂ.ಯಲಶೆಟ್ಟಿ ಮತ್ತು ದಾವಣಗೆರೆ ಕ್ರೀಡಾಹಾಸ್ಟೆಲ್‌ನ ಕಾರ್ತಿಕ್ ಸೆಮಿಫೈನಲ್ ತಲುಪಿದ್ದಾರೆ. 55 ಕೆ.ಜಿ. ವಿಭಾಗದಲ್ಲಿ ಮಂಗಳೂರು ಗೋಕರ್ಣನಾಥ ಕಾಲೇಜಿನ ಪ್ರಶಾಂತ್, ದಾವಣಗೆರೆಯ ಕೆಂಚಪ್ಪ, ಬೆಳಗಾವಿ ಕ್ರೀಡಾಹಾಸ್ಟೆಲ್‌ನ ವಿನಾಯಕ್ ಗುರವ ಮತ್ತು ದಕ್ಷಿಣ ಕನ್ನಡದ ಪ್ರಶಾಂತ್ ಶೆಟ್ಟಿ ಅಂತಿಮ ನಾಲ್ಕರ ಘಟ್ಟ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.