ADVERTISEMENT

ರಾಜ್ ಕುಂದ್ರಾ ಅಮಾನತು

ಐಪಿಎಲ್ ಶುಚಿಗೊಳಿಸಲು ಬಿಸಿಸಿಐ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 19:48 IST
Last Updated 10 ಜೂನ್ 2013, 19:48 IST

ನವದೆಹಲಿ (ಪಿಟಿಐ/ಐಎಎನ್‌ಎಸ್):  ರಾಜಸ್ತಾನ ರಾಯಲ್ಸ್ ತಂಡದ ಸಹ ಮಾಲೀಕ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನು ಅಮಾನತು ಮಾಡುವ ಮಹತ್ವದ ತೀರ್ಮಾನವನ್ನು ಬಿಸಿಸಿಐ ಕಾರ್ಯಕಾರಿ ಸಮಿತಿ ತೆಗೆದುಕೊಂಡಿದೆ.

ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾಗಿ ಪೊಲೀಸರ ಎದುರು ಬಹಿರಂಗಪಡಿಸಿ ವಿವಾದ ಸೃಷ್ಟಿಸಿಕೊಂಡಿದ್ದ ಕುಂದ್ರಾ ಅವರನ್ನು ತನಿಖೆ ಪೂರ್ಣಗೊಳ್ಳುವ ತನಕ ಕ್ರಿಕೆಟ್‌ನ ಎಲ್ಲಾ ಚಟುವಟಿಕೆಗಳಿಂದ ದೂರವಿಡಲು ಸಭೆ ನಿರ್ಧರಿಸಿತು.  ಇದರ ಜೊತೆಗೆ ಐಪಿಎಲ್‌ಗೆ ಅಂಟಿರುವ ಕಳಂಕ ತೊಳೆದು ಹಾಕಲು ಹಲವು ಮಹತ್ವದ ತೀರ್ಮಾನಗಳನ್ನೂ ಸಭೆಯಲ್ಲಿ ಕೈಗೊಳ್ಳಲಾಯಿತು.

`ಕುಂದ್ರಾ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ತನಿಖೆ ಮುಗಿಯುವ ತನಕ ಅಮಾನತು ಮಾಡಲಾಗಿದೆ. ಅವರನ್ನು ಕ್ರಿಕೆಟ್ ಚಟುವಟಿಕೆಗಳಿಂದ ದೂರವಿಡಲಾಗುವುದು' ಎಂದು ಬಿಸಿಸಿಐ ಉಪಾಧ್ಯಕ್ಷ ಚಿತ್ರಕ್ ಮಿತ್ರಾ ಸಭೆಯ ಬಳಿಕ ತಿಳಿಸಿದರು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ಸ್ ತಂಡಗಳ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಯಾವುದೇ ಚರ್ಚೆ ನಡೆಯಲಿಲ್ಲ ಎಂಬುದು ತಿಳಿದು ಬಂದಿದೆ. ಬಿಸಿಸಿಐ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ನೇತೃತ್ವದ ಸಭೆಯ ತೀರ್ಮಾನಗಳ ಬಗ್ಗೆ ಕಾರ್ಯಕಾರಿ ಸಮಿತಿಯ ಕೆಲವು ಸದಸ್ಯರು ಸಭೆಯಲ್ಲಿಯೇ ಟೀಕಿಸಿದ್ದಾರೆ.

ಶುಚಿಗೊಳಿಸಲು ಯತ್ನ: ಐಪಿಎಲ್ ಪಂದ್ಯದ ವೇಳೆ ಚಿಯರ್ ಬೆಡಗಿಯರ ನೃತ್ಯ ಮತ್ತು ಪಂದ್ಯದ ನಂತರ ನಡೆಯುವ ಪಾರ್ಟಿಗಳನ್ನು ನಿಷೇಧ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಯಿತು. ಈ ಮೂಲಕ ಐಪಿಎಲ್ ಟೂರ್ನಿಯನ್ನು ಶುಚಿಗೊಳಿಸಲು ಬಿಸಿಸಿಐ ಮುಂದಾಗಿದೆ.


`ಬಲಿಪಶು ಮಾಡಲಾಗಿದೆ'
`ಬಿಸಿಸಿಐ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ನನ್ನನ್ನು ವಿನಾಕಾರಣ ಬಲಿಪಶು ಮಾಡಲಾಗಿದೆ. ಇದು ಆಘಾತ ಉಂಟು ಮಾಡಿದೆ'
-ರಾಜ್ ಕುಂದ್ರಾ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT