ರಾಂಚಿ (ಐಎಎನ್‌ಎಸ್): ಕಳೆದ ತಿಂಗಳು ರಾಂಚಿಯಲ್ಲಿ ಜರುಗಿದ 34ನೇ ರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಅಗತ್ಯ ಸಾಮಗ್ರಿ ಖರೀದಿ ವ್ಯವಹಾರಗಳಿಗೆ ಸಂಬಂಧಿಸಿದ ಪ್ರಮುಖ ಕಡತಗಳು ಹಾಗೂ ದಾಖಲೆಗಳು ನಾಪತ್ತೆಯಾಗಿವೆ. ಜಾರ್ಖಂಡ್‌ನ ಜಾಗೃತ ಕೇಂದ್ರದ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಈ ಕಡತ ಮತ್ತು ದಾಖಲೆಗಳು ಕಣ್ಮರೆಯಾಗಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ರಾಂಚಿಯಲ್ಲಿರುವ ರಾಷ್ಟ್ರೀಯ ಕ್ರೀಡಾಕೂಟಗಳ ಸಂಘಟನಾ ಸಮಿತಿಯ ಕಚೇರಿ, ಜಾರ್ಖಂಡ್ ಒಲಿಂಪಿಕ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹಶ್ಮಿ ಹಾಗೂ ಖಜಾಂಚಿ ಮಧುಕಾಂತ ಪಾಠಕ್ ಅವರ ನಿವಾಸಗಳ ಮೇಲೆ ಮಂಗಳವಾರ ಮತ್ತು ಬುಧವಾರ ನಡೆಸಲಾದ ದಾಳಿಯ ವೇಳೆ ಈ ಅಂಶ ಪತ್ತೆಯಾಗಿದೆ. ‘ಕೆಲವು ಕಡತಗಳಲ್ಲಿ ಹಾಳೆಗಳನ್ನೇ ಕಿತ್ತು ಹಾಕಲಾಗಿದೆ. ಇನ್ನೂ ಕೆಲವು ದಾಖಲೆಗಳು ಮಾಯವಾಗಿವೆ. ತನಿಖೆ ಪ್ರಗತಿಯಲ್ಲಿದೆ’ ಎಂದು ಜಾಗೃತ ಕೇಂದ್ರದ ಅಧಿಕಾರಿ ಎಂ.ವಿ.ರಾವ್ ತಿಳಿಸಿದ್ದಾರೆ.
ಫೆಬ್ರುವರಿಯಲ್ಲಿ ಜರುಗಿದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬಳಸಲಾದ ಸಾಮಗ್ರಿಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.