ADVERTISEMENT

ರಾಷ್ಟ್ರೀಯ ತಂಡದಲ್ಲಿ ರಾಜ್ಯದ 7ಮಂದಿ

ಪುಣೆಯಲ್ಲಿ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 19:59 IST
Last Updated 22 ಜೂನ್ 2013, 19:59 IST

ನವದೆಹಲಿ (ಪಿಟಿಐ): ಕರ್ನಾಟಕದ ಏಳು ಮಂದಿ ಅಥ್ಲೀಟ್‌ಗಳು ಪುಣೆಯಲ್ಲಿ ಜುಲೈ 3ರಿಂದ 7ರವರೆಗೆ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತದ 110 ಮಂದಿಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಶನಿವಾರ ಇಲ್ಲಿ ನಡೆದ ಆಯ್ಕೆ ಸಮಿತಿ ಸಭೆಯ ನಂತರ ಭಾರತ ಅಥ್ಲೆಟಿಕ್ ಫೆಡರೇಷನ್‌ನವರು ತಂಡವನ್ನು ಪ್ರಕಟಿಸಿದರು. ಒಟ್ಟು 42 ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಪುರುಷರ ವಿಭಾಗದಿಂದ 57 ಮಂದಿ ಮತ್ತು ಮಹಿಳಾ ವಿಭಾಗದಿಂದ 53 ಮಂದಿ ಆಯ್ಕೆಯಾಗಿದ್ದಾರೆ.
ಕರ್ನಾಟಕದ ಎಂ.ಆರ್.ಪೂವಮ್ಮ 400 ಮೀಟರ್ಸ್ ಓಟದಲ್ಲಿ ಸ್ಪರ್ಧಿಸಲಿದ್ದರೆ, ಸಹನಾ ಕುಮಾರಿ ಹೈಜಂಪ್‌ನಲ್ಲಿ ಸವಾಲು ಒಡ್ಡಲಿದ್ದಾರೆ.

ಇವರಿಬ್ಬರೂ ಈಚೆಗೆ ಚೆನ್ನೈನಲ್ಲಿ ನಡೆದ ಅಂತರ ರಾಜ್ಯ ಅಥ್ಲೆಟಿಕ್ಸ್‌ನಲ್ಲಿ ಕ್ರಮವಾಗಿ 52.85ಸೆಕೆಂಡುಗಳಲ್ಲಿ ಓಡಿದ ಮತ್ತು 1.88 ಮೀಟರ್ಸ್ ಎತ್ತರ ಜಿಗಿದ ಸಾಧನೆ ಮಾಡಿದ್ದರು. ರಾಜ್ಯದ ಸಿನಿ ಮಾರ್ಕೊಸ್ ಮಹಿಳೆಯರ 1,500 ಮೀಟರ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪೋಲ್‌ವಾಲ್ಟ್ ಸ್ಪರ್ಧಿ ಖ್ಯಾತಿ ಅವರೂ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಪುರುಷರ ವಿಭಾಗದ ಲಾಂಗ್‌ಜಂಪ್‌ನಲ್ಲಿ ರಾಜ್ಯದ ಎಂ.ಅರ್ಶಾದ್ ಮತ್ತು ಪೋಲ್‌ವಾಲ್ಟ್‌ನಲ್ಲಿ ಪಿ.ಬಾಲಕೃಷ್ಣ ಸ್ಥಾನ ಗಳಿಸಿದ್ದಾರೆ.
ಪ್ರಸಕ್ತ ಅಮೆರಿಕಾದಲ್ಲಿ ತರಬೇತು ಪಡೆಯುತ್ತಿರುವ ಮೈಸೂರಿನ ವಿಕಾಸ್ ಗೌಡ ತಂಡದಲ್ಲಿ ಸ್ಥಾನ ಗಳಿಸಿದ್ದು, ಈಚೆಗೆ ಅವರು 64.74 ಮೀಟರ್ಸ್ ದೂರ ಡಿಸ್ಕಸ್ ಎಸೆದಿದ್ದು ಈ ಸ್ಪರ್ಧೆಯ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ. ಮಹಾರಾಷ್ಟ್ರವನ್ನು ಪ್ರತಿನಿಧಿಸುತ್ತಿರುವ ಮಂಗಳೂರು ಮೂಲದ ಸಿದ್ಧಾಂತ್ ತಿಂಗಳಾಯ ಅವರೂ ತಂಡದಲ್ಲಿದ್ದಾರೆ. ಇವರು 110 ಮೀಟರ್ಸ್ ಹರ್ಡಲ್ಸ್‌ನಲ್ಲಿ ಈಚೆಗೆ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.